ರಾಷ್ಟ್ರೀಯ ಸುದ್ದಿ

ಕೇರಳ SDPI ನಾಯಕರನ್ನು ಬಂಧಿಸಿ ಮುಖಭಂಗಕ್ಕೀಡಾದ ಪಿಣರಾಯಿಯ ಕಮ್ಯುನಿಸ್ಟ್ ಸರಕಾರ!

ಕಾರಣವಿಲ್ಲದೆ ಬಂಧನ, ಬಿಡುಗಡೆ : ಸಂಶಯಕ್ಕೀಡಾದ ಸರ್ಕಾರದ ನಡೆ

ವರದಿಗಾರ (ಜು.17): ಪ್ರಜಾಪ್ರಭುತ್ವ ಹಾಗೂ ಪೊಲೀಸ್ ನ್ಯಾಯ ವ್ಯವಸ್ಥೆಯನ್ನೇ ಅಣಕಿಸುವಂತೆ ಕೇರಳದ ಪಿಣರಾಯಿ ನೇತೃತ್ವದ ಕಮ್ಯುನಿಸ್ಟ್ ಸರಕಾರವಿಂದು ಜನರ ಹಕ್ಕುಗಳನ್ನೇ ಕಸಿಯುವ ಪ್ರಯತ್ನಕ್ಕೆ ಕೈ ಹಾಕಿ ಅವಮಾನಕ್ಕೀಡಾಗಿದೆ. ಕೊಚ್ಚಿ ಪ್ರೆಸ್ಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೊರ ಬಂದ SDPI ಕೇರಳ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಫೈಝಿ, ಉಪಾಧ್ಯಕ್ಷ ಎಂ. ಕೆ. ಮನೋಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಯ್ ಅರಕ್ಕಲ್ ಹಾಗೂ ಕೊಚ್ಚಿ ಜಿಲ್ಲಾಧ್ಯಕ್ಷ ಶೌಕತ್ ಅಲಿ ಎಂಬವರನ್ನು ಕೇರಳ ಪೊಲೀಸರು ಕಾರಣವಿಲ್ಲದೆ ಬಂಧಿಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡು ಹೋಗಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಕೇರಳದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಒಂದು ಮೂಲದ ಪ್ರಕಾರ ಅಭಿಮನ್ಯು ಹತ್ಯೆ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಇವರನ್ನು ಬಂಧಿಸಲಾಗಿದೆ ಹಾಗೂ ಅದರ ವಿಚಾರಣೆ ನಡೆಸುತ್ತಿರುವ ತಂಡದ ಮುಖ್ಯಸ್ಥರಿಗೆ ಇವರನ್ನು ಹಸ್ತಾಂತರಿಸಲಾಗುತ್ತದೆ ಎಂಬ ಸುದ್ದಿಯೂ ಹರಡಿತ್ತು.

ಕೇರಳದ ಕಮ್ಯುನಿಸ್ಟ್ ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರಿ ನಡೆಯ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿ, ಜುಲೈ 17 ರಂದು ‘ಕೇರಳ ಬಂದ್’ ಗೆ ಕರೆ ನೀಡಲಾಯಿತು. ಸರ್ಕಾರದ ಆದೇಶದಂತೆ ಬಂಧಿಸಿದ್ದ ಪೊಲೀಸರು, ರಾಜ್ಯವ್ಯಾಪಿ ಬಂದ್ ಕರೆ ಖುದ್ದು ಪೊಲೀಸರನ್ನೇ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು. ಯಾಕೆಂದರೆ SDPI ಪಕ್ಷದ ನಾಯಕರ ಬಂಧನಕ್ಕೆ ಪೊಲೀಸರ ಬಳಿ ಸೂಕ್ತ ಕಾರಣಗಳೇ ಇರಲಿಲ್ಲ !! ಈ ಹಂತದಲ್ಲಿ ಬಂಧಿಸಿದ ನಾಲ್ವರನ್ನು ಬಿಡುಗಡೆಗೊಳಿಸದೆ ಪೊಲೀಸರಿಗೆ ಬೇರೆ ವಿಧಿಯಿರಲಿಲ್ಲ. ಅದರಂತೆ ಸಂಜೆ 5 ಗಂಟೆಗೆ ಎಲ್ಲರನ್ನೂ ಬಿಡುಗಡೆಗೊಳಿಸಲಾಯಿತು. ಆ ಮೂಲಕ ಪಕ್ಷದ ನಾಯಕರನ್ನು ಬಂಧಿಸಿ, ಇತ್ತೀಚೆಗೆ ಮಹಾರಾಜಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ ದುಷ್ಕರ್ಮಿಗಳ ಕೈಯಿಂದ ಕೊಲ್ಲಲ್ಪಟ್ಟ SFI ನಾಯಕ ಅಭಿಮನ್ಯು ಹತ್ಯೆಯನ್ನು SDPI ಪಕ್ಷದ ತಲೆಯ ಮೇಲೆ ಕಟ್ಟಿ ಕೈ ತೊಳೆದುಕೊಳ್ಳುವ ಪಿಣರಾಯಿ ಸರ್ಕಾರದ ನಡೆ ಸಂಪೂರ್ಣ ವಿಫಲವಾಗಿ ಅವಮಾನಕ್ಕೀಡಾಯಿತು.

ಬಿಡುಗಡೆಗೊಳಿಸಿದ ನಂತರ ಬಂಧನಕ್ಕೆ ಕಾರಣ ಹುಡುಕಲು ತಡಕಾಡುತ್ತಿದ್ದ ಪೊಲೀಸರಿಗೆ, ಹಾದಿಯಾ ಪ್ರಕರಣದಲ್ಲಿ ‘ಹೈಕೋರ್ಟ್ ಮಾರ್ಚ್’ ಗೆ ಸಂಬಂಧಿಸಿ ವಿಚಾರಣೆ ನಡೆಸಲು ಇವರನ್ನು ಬಂಧಿಸಲಾಯಿತು ಎಂದಾಗ ಪಿಣರಾಯಿಯ ಪೊಲೀಸ್ ಇಲಾಖೆ ನಗೆಪಾಟಲಿಗೀಡಾಯಿತು. ಏಕೆಂದರೆ ‘ಹೈಕೋರ್ಟ್ ಮಾರ್ಚ್’ ನಡೆದು ಆರೇಳು ತಿಂಗಳುಗಳೇ ಕಳೆದು ಹೋಗಿದ್ದು, ಯಾವುದೇ ಮುನ್ಸೂಚನೆ ಇಲ್ಲದೆ ಬಂಧಿಸಿದ್ದ ಸರ್ಕಾರದ ಸರ್ವಾಧಿಕಾರಿ ನಡೆಗೆ ಪೊಲೀಸರ ಬಳಿಯೂ ಯಾವುದೇ ಸಮರ್ಥನೆಯಿರಲಿಲ್ಲ.

ಅಭಿಮನ್ಯು ಹತ್ಯೆಯನ್ನು SDPI ಖಂಡಿಸಿ, ಇದರಲ್ಲಿ ಪಕ್ಷದ ಯಾವುದೇ ಪಾತ್ರ ಇಲ್ಲವೆಂದು ಹೇಳಿದ್ದರೂ, ಪಕ್ಷವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪಿಣರಾಯಿಯ ಕಮ್ಯುನಿಸ್ಟ್ ಸರ್ಕಾರ ವಿಫಲ ಯತ್ನಗಳನ್ನು ನಡೆಸುತ್ತಿದೆ ಎಂದು ಬಿಡುಗಡೆಗೊಂಡ ನಾಯಕರು ಆರೋಪಿಸಿದ್ದಾರೆ. ಅಭಿಮನ್ಯು ಹತ್ಯೆ ನಡೆದು ಎರಡು ವಾರಗಳೇ ಕಳೆದರೂ ಕೃತ್ಯದಲ್ಲಿ ಪಾಲ್ಗೊಂಡ ನೈಜ ಆರೋಪಿಗಳನ್ನು ಬಂಧಿಸದಿರುವ ಸರ್ಕಾರದ ನಿಷ್ಕ್ರೀಯತೆಯನ್ನು ಮರೆಮಾಚಲು SDPI ಪಕ್ಷದ ನಾಯಕರನ್ನು ಬಂಧಿಸಿ ಆ ಮೂಲಕ ‘ಕೊಡು-ಕೊಳ್ಳು’ ವ್ಯವಹಾರಕ್ಕೆ ಸರ್ಕಾರ ಮುಂದಾಗಿದೆ ಎಂದು ‘ಮನೋರಮಾ ನ್ಯೂಸ್’ ಈ ಘಟನೆಯನ್ನು ವ್ಯಾಖ್ಯಾನಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group