ವಕ್ಫ್ ಸಂಪತ್ತುಗಳ ರಕ್ಷಣೆ: ಸರಕಾರ ಗಂಭೀರವಾಗಿ ಪರಿಗಣಿಸಲು ಇಮಾಮ್ಸ್ ಕೌನ್ಸಿಲ್ ಒತ್ತಾಯ

‘ವಕ್ಫ್ ಸಂಪತ್ತನ್ನು ಉಪಯೋಗಿಸಿ ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಸರಕಾರ ಪ್ರಮಾಣಿಕ ಪ್ರಯತ್ನ ಮಾಡಲಿ’
ವರದಿಗಾರ (ಜು.16): ನೂರಾರು ವರ್ಷಗಳ ಇತಿಹಾಸವಿರುವ ವಕ್ಫ್ ಆಸ್ತಿ ಕರ್ನಾಟಕ ರಾಜ್ಯದಲ್ಲಿ ಸುಮಾರು 54 ಸಾವಿರ ಎಕ್ರೆಯಷ್ಟಿದ್ದು, ಇದು ಪೂರ್ವ ಕಾಲದ ಮುಸ್ಲಿಂ ರಾಜರುಗಳು, ಜಮೀನುದಾರರು ಅಲ್ಲಾಹನ ಹೆಸರಿನಲ್ಲಿ ವಕ್ಫ್ ಮಾಡಿ ಮುಸ್ಲಿಂ ಸಮುದಾಯದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ದಾನ ಮಾಡಿದ ಧಾರ್ಮಿಕ ನೆಲೆಯ ಆಸ್ತಿಗಳಾಗಿದೆ. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕಾದದ್ದು ಧಾರ್ಮಿಕ ನಿಯಮ ಮತ್ತು ದೇಶದ ಸಂವಿಧಾನದ ನಿಯಮವೂ ಆಗಿರುತ್ತದೆ ಎಂದು ಇಮಾಮ್ಸ್ ಕೌನ್ಸಿಲ್ ಹೇಳಿದೆ.
ವರದಿಗಳು ಬಹಿರಂಗಪಡಿಸಿದ ಪ್ರಕಾರ 27 ಸಾವಿರ ಎಕ್ರೆ (2.5 ಲಕ್ಷ ಕೋಟಿ ರೂ.) ಭೂಮಿ ಕಾನೂನಿಗೆ ವಿರುದ್ಧವಾಗಿ ಅನ್ಯರ ಪಾಲಾಗಿದೆ. ವಕ್ಫ್ ಭೂಮಿ ಅತಿಕ್ರಮಣದಲ್ಲಿ ಮುಸ್ಲಿಂ ಸಮಾಜದ ಮುಖಂಡರ ಹೆಸರುಗಳು ಕೇಳಿ ಬರುತ್ತಿರುವುದು ದೊಡ್ಡ ದುರಂತವಾಗಿದೆ. ವಕ್ಫ್ ಸಂಪತ್ತು ನಾಶವಾಗುವುದರಲ್ಲಿ ಕೆಲವು ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಕಾರಣಕರ್ತರಾಗಿದ್ದಾರೆ ಎಂದು ಹೇಳಿದೆ.
ವಕ್ಫ್ ಭೂಮಿ ಅತಿಕ್ರಮಣಗಳನ್ನು ತೆರವುಗೊಳಿಸಲು 1998ರಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ಸರಕಾರಗಳಿಗೆ ಆದೇಶ ಮಾಡಿದೆ. ಧಾರ್ಮಿಕವಾದ ವಕ್ಫ್ ನಿಯಮ ಮತ್ತು ಸಂವಿಧಾನದ ನಿಯಮವನ್ನು ಉಲ್ಲಂಘಿಸಿ ಅತಿಕ್ರಮಣ ನಡೆಸಿದ ವಕ್ಫ್ ಭೂಮಿಯನ್ನು ಸರಕಾರ ಶೀಘ್ರವಾಗಿ ತೆರವುಗೊಳಿಸಬೇಕು. ಎಲ್ಲಾ ವಕ್ಫ್ ಭೂಮಿಯ ರಕ್ಷಣೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ವಕ್ಫ್ ಸಂಪತ್ತನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಕೆ ಮಾಡುವುದರ ಮೂಲಕ ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಸರಕಾರ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಅಧ್ಯಕ್ಷ ಮೌಲಾನ ಯೂಸುಫ್ ರಷಾದಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
