ಇಂದಿನಿಂದ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ: ನಿಟ್ಟಿಸಿರು ಬಿಟ್ಟ ಪ್ರಯಾಣಿಕರು

ವರದಿಗಾರ- ಜು.15: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರಾಡಿ ಘಾಟ್ನ 2ನೇ ಹಂತದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಇಂದು (ಜುಲೈ 15) ಸಂಚಾರಕ್ಕೆ ಮುಕ್ತವಾಗಲಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ನೂತನ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.
ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚದ 12.38 ಕಿ.ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ನೂತನ ರಸ್ತೆ ಉದ್ಘಾಟನೆಗೆ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸೈಡ್ ವಾಲ್, ಸೂಚನಾ ಫಲಕ ಅಳವಡಿಕೆ ಸೇರಿದಂತೆ ಕೆಲವು ಸಣ್ಣಪುಟ್ಟ ಕೆಲಸ ಹೊರತುಪಡಿಸಿದರೆ ಸಿಮೆಂಟ್ ಹಾಕುವ ಕೆಲಸ ಮುಗಿದಿದೆ. ಕಳೆದ 6 ತಿಂಗಳಿಂದ ಬಂದ್ ಆಗಿದ್ದ ಶಿರಾಡಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದ್ದು ಕಳೆದ ಕೆಲ ತಿಂಗಳಿನಿಂದ ಇತರ ಪರ್ಯಾಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ.
