ಬಿಜೆಪಿಯನ್ನು ಸೋಲಿಸಲು ಶಿವನಿಗೆ ಬಹಿರಂಗ ಪತ್ರ ಬರೆದ ಕಾಂಗ್ರೆಸ್ ನಾಯಕ!

ವರದಿಗಾರ- ಜು.14: ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರದ ದುರಾಡಳಿತಕ್ಕೆ ಅಂತ್ಯ ಹಾಡುವಂತೆ ಕೋರಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ರವರು ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಶಿವನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಭಗವಾನ್ ಮಹಾಕಾಳೇಶ್ವರ ಶಿವನಿಗೆ ಬಹಿರಂಗ ಪತ್ರ ಬರೆದಿದ್ದು, ಪತ್ರವನ್ನು ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿದಂತೆ, ಬಿಜೆಪಿ ಸರಕಾರವನ್ನು ಒದ್ದೋಡಿಸಲು ಮಧ್ಯ ಪ್ರದೇಶದ ಜನರಿಗೆ ಸಹಾಯ ಮಾಡುವಂತೆ ಹಾಗೂ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯುವತಿಯರು ಅತ್ಯಾಚಾರಗೊಳಗಾಗುತ್ತಿದ್ದಾರೆ ಮತ್ತು ಭ್ರಷ್ಟಾಚಾರ, ನಿರುದ್ಯೋಗ ಹೆಚ್ಚಾಗಿದೆ. ಮುಖ್ಯಮಂತ್ರಿ ಚೌಹಾಣ್ ನೀಡಿರುವ ಆಶ್ವಾಸನೆಗಳು ಈಡೇರಿಲ್ಲ ಅವರು ತಮ್ಮ ಕೆಟ್ಟ ಕಾರ್ಯಗಳಿಗಾಗಿ ಬೆಲೆ ತೆರಬೇಕಾದ ಸಂದರ್ಭ ಬಂದಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಆದರೆ ರಾಜ್ಯ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಭಗವಂತನಿಗೆ ಕಮಲ್ ನಾಥ್ ಬರೆದ ಪತ್ರವನ್ನು ಅಣಕವಾಡಿದ್ದಾರೆ. ದೇವರಿಗೆ ಎಲ್ಲವೂ ತಿಳಿದಿರುವುದರಿಂದ ಅವರು ಪತ್ರ ಬರೆಯುವ ಅಗತ್ಯವಿರಲಿಲ್ಲ ಎಂದು ಅಗರ್ವಾಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಚೌಹಾಣ್ ನಡೆಸಲಿರುವ ಜನ ಆಶೀರ್ವಾದ ಯಾತ್ರೆಯ ಹಾದಿಯಲ್ಲಿಯೇ ಕಾಂಗ್ರೆಸ್ ಕೂಡ ಸಾರ್ವಜನಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷದ ಈ ಅಭಿಯಾನವನ್ನು ಜುಲೈ 18ರಂದು ಉಜ್ಜಯನಿಯಲ್ಲಿ ಕಮಲ್ ನಾಥ್ ಉದ್ಘಾಟಿಸಲಿದ್ದಾರೆ.
