ಜಾತ್ಯಾತೀತ ಶಿಕ್ಷಣ ವ್ಯವಸ್ಥೆಗೆ ಕೊಡಲಿಯೇಟು ನೀಡುತ್ತಿರುವ ಸ್ಕಾರ್ಫ್ ವಿವಾದ

ಲೇಖನ: ಇಸ್ಮತ್ ಪಜೀರ್
ವರದಿಗಾರ (ಜು.3): ಮುಸ್ಲಿಮ್ ಹೆಣ್ಮಕ್ಕಳಿಗೆ ಮೈ ಮುಚ್ಚುವುದು ತಲೆ ಮುಚ್ಚುವುದು ಅವರ ಧಾರ್ಮಿಕ ವಿಧಿ ವಿಧಾನ. ಭಾರತದಂತಹ ಸೆಕ್ಯುಲರ್ ಡೆಮಾಕ್ರಟಿಕ್ ರಾಷ್ಟ್ರದಲ್ಲಿ ಅವರವರ ಧಾರ್ಮಿಕ ನಿಯಮಗಳನ್ನು ಪಾಲಿಸುವ ಸಂಪೂರ್ಣ ಸ್ವಾತಂತ್ರ್ಯ ವನ್ನು ನಮಗೆ ನಮ್ಮ ಸಂವಿಧಾನ ಕಲ್ಪಿಸಿದೆ. ಯಾವುದೇ ಧಾರ್ಮಿಕ ನಿಯಮಾವಳಿಗಳು ಇನ್ನೊಬ್ಬರ ಭಾವನೆಗೆ ಎಲ್ಲಿಯವರೆಗೆ ಘಾತುಕವಾಗುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ.
ಬುರ್ಖಾ ಅಥವಾ ಸ್ಕಾರ್ಫನ್ನು ಭಾರತದ ಸಂವಿಧಾನ ಮತ್ತು ಕಾನೂನಿನ ಆಧಾರದಲ್ಲಿಯೇ ವಿಶ್ಲೇಷಿಸುತ್ತಾ ಹೋದಾಗ ನಮಗೆ ಮನವರಿಕೆಯಾಗುವ ವಿಚಾರವೇನೆಂದರೆ ಅದು ” ಆಯ್ಕೆ ಮತ್ತು ಸ್ವಾತಂತ್ರ್ಯದ ಪ್ರಶ್ನೆ”.
ನಮ್ಮ ಕಾನೂನಿನ ಪ್ರಕಾರ ಬುರ್ಖಾ ಅಥವಾ ಸ್ಕಾರ್ಫನ್ನು ಹೆಣ್ಣೊಬ್ಬಳ ಮೇಲೆ ಬಲವಂತವಾಗಿ ಹೇರುವುದು ಎಷ್ಟು ತಪ್ಪೋ, ಹಾಕಲೇಬಾರದು ಎಂದು ಬಲವಂತಪಡಿಸುವುದೂ ಅಷ್ಟೇ ತಪ್ಪು. ಒಟ್ಟಿನಲ್ಲಿ ಇದು ಅವರವರ ವೈಯಕ್ತಿಕ ಆಯ್ಕೆ ಮತ್ತು ಸ್ವಾತಂತ್ರ್ಯಕ್ಕೆ ಬಿಟ್ಟದ್ದು.
ಇವಿಷ್ಟು ವಿಚಾರವನ್ನು ಸ್ಪಷ್ಟವಾಗಿ ಅರಿತ ಬಳಿಕವೇ ನಾವು ವಿವಾದದ ಕುರಿತಂತೆ ಮಾತನಾಡಬೇಕಿದೆ. ಮಂಗಳೂರಿನ
ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಮತ್ತು ಸ್ಕಾರ್ಫ್ ವಿಚಾರ ವಿವಾದ ಪ್ರಾರಂಭವಾಗಿ ಸುಮಾರು ಹತ್ತು ವರ್ಷಗಳೇ ಕಳೆದವು. ಈ ವಿವಾದ ಪ್ರತೀ ವರ್ಷವೂ ಜಿಲ್ಲೆಯ ಒಂದಲ್ಲ ಇನ್ನೊಂದು ಶಿಕ್ಷಣ ಸಂಸ್ಥೆಯಲ್ಲಿ ಭುಗಿಲೇಳುತ್ತಲೇ ಇದ್ದರೂ ಶಿಕ್ಷಣ ಇಲಾಖೆ ಈ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಹುಡುಕಲು ಮುಂದಾಗಲೇ ಇಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ.
ನಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಎಲ್ಲಾ ಜಾತಿ ಧರ್ಮೀಯರು ಅವರವರ ಜಾತಿಯ ಮತ್ತು ಧರ್ಮದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುತ್ತಿದ್ದಾರೆ.ಹೊರನೋಟಕ್ಕೆ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುಂದುವರಿಯುತ್ತಿರುವುದು ಒಂದು ಧನಾತ್ಮಕ ಬೆಳವಣಿಗೆಯಂತೆ ಕಂಡರೂ ಆಳದಲ್ಲಿ ಇದು ನಮ್ಮ ದೇಶದ ಜಾತ್ಯಾತೀತ ಪರಂಪರೆಗೆ ಅಪಾಯವೊಡ್ಡುತ್ತಿರುವುದಂತೂ ಸುಳ್ಳಲ್ಲ.
ಈ ರೀತಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಶಿಕ್ಷಣ ಸಂಸ್ಥೆಗಳು ಪ್ರಹಾರವೆಸಗುತ್ತಿರುವಾಗ ನಾವು ನಮ್ಮದೇ ಶಿಕ್ಷಣ ಸಂಸ್ಥೆಗೆ ದಾಖಲಾದರೆ ಇಂತಹ ಕಿರಿಕಿರಿಯೇ ಇಲ್ಲ ಎಂಬ ಭಾವನೆ ಮೂಡುತ್ತಿರುವುದೂ ಸುಳ್ಳಲ್ಲ. ಎಲ್ಲರೂ ಅವರವರ ಜಾತಿ ಧರ್ಮದ ಶಿಕ್ಷಣ ಸಂಸ್ಥೆಗಳಿಗೇ ದಾಖಲಾದರೆ ಸಮುದಾಯಗಳ ಮಧ್ಯೆ ಕಂದಕ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ಎಂತಹ ಬಿಗುವಿನ ವಾತಾವರಣವಿದೆಯೆಂದರೆ ಸರಕಾರೀ ಶಿಕ್ಷಣ ಸಂಸ್ಥೆಗಳಲ್ಲೂ ಬುರ್ಖಾ , ಸ್ಕಾರ್ಫ್ ವಿರುದ್ಧ ಕೆಲವು ಕೋಮುವಾದೀ ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳು ಈ ಹಿಂದೆ ಅನೇಕ ಬಾರಿ ಗಲಾಟೆಯೆಬ್ಬಿಸಿವೆ.
ಮಕ್ಕಳು ತಮ್ಮದಲ್ಲದ ಧರ್ಮೀಯರೊಂದಿಗೆ ಬೆರೆಯದೇ ತಮ್ಮದೇ ಸಮುದಾಯದ ಗುಂಪಿನೊಳಗೆ ಉಳಿದರೆ ಇತರ ಸಮುದಾಯದವರೊಂದಿಗೆ ಬಾಂಧವ್ಯ ಬೆಳೆಸುವುದಾದರೂ ಹೇಗೆ ? ಈಗಾಗಲೇ ಜಾತಿ ಧರ್ಮದ ಹೆಸರಲ್ಲಿ ಪ್ರತ್ಯೇಕ ಪ್ರತ್ಯೇಕ ಧ್ರುವಗಳಂತಾಗಿರುವ ಸಮಾಜ ಇತರ ಸಮುದಾಯಗಳನ್ನು ಅರಿಯುವುದಾದರೂ ಹೇಗೆ?
ಬಾಲ್ಯದಲ್ಲೇ ನಾವು ನಮ್ಮ ಮಕ್ಕಳನ್ನು ನಮ್ಮದೇ ಜಾತಿ ಧರ್ಮದ ಗುಂಪಿಗೆ ಸೀಮಿತಗೊಳಿಸಿದರೆ ಈ ನೆಲದ ಬಹುತ್ವ ಪರಂಪರೆ ಉಳಿಯುವುದಾದರೂ ಹೇಗೆ?
ಒಂದು ಸರಳ ಉದಾಹರಣೆ ನೋಡಿ. ನನ್ನ ತಲೆಮಾರಿನ ಎಲ್ಲಾ ಧರ್ಮದ ಮಕ್ಕಳು ಎಳೆಯ ಪ್ರಾಯದಲ್ಲೇ ತುಳುನಾಡಿನ ವ್ಯಾವಹಾರಿಕ ಮತ್ತು ಪರಿಸರ ಭಾಷೆಯಾದ ತುಳುವಿನಲ್ಲಿ ಸರಾಗವಾಗಿ ಮಾತನಾಡುತ್ತಿದ್ದರು.ಈ ತಲೆಮಾರಿನ ಬಹುತೇಕ ತುಳುವೇತರ ಮಾತೃಭಾಷೆಯ ಮಕ್ಕಳಿಗೆ ತುಳು ಬರುವುದಿಲ್ಲ.ಕಾರಣ ಬಹಳ ಸ್ಪಷ್ಟ. ಈ ತಲೆಮಾರಿನ ಮಕ್ಕಳು ಅವರವರ ಧರ್ಮದ ಜಾತಿಯ ಗುಂಪಿನೊಳಗೆ ಧ್ರುವೀಕರಣಗೊಂಡಿದ್ದಾರೆ. ಜಾತಿ, ಧರ್ಮದ ಪ್ರತ್ಯೇಕ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಎಲ್ಲಾ ಪಾಲಕರು ತಂತಮ್ಮ ಜಾತಿ ಧರ್ಮದ ಸಂಸ್ಥೆಗಳಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ದೇಶದೊಳಗೆ ಹಲವು ದೇಶಗಳು ಹುಟ್ಟುವುದರಲ್ಲಿ ಸಂದೇಹವೇ ಬೇಡ.
ಇದೀಗ ಮಂಗಳೂರಿನ ಸೈಂಟ್ ಆಗ್ನೆಸ್ ಹೆಣ್ಮಕ್ಕಳ ಕಾಲೇಜಿನಲ್ಲಿ ನಡೆಯುತ್ತಿರುವ ವಿವಾದದ ಸಂದರ್ಭದಲ್ಲಿ ನನಗೆ ಹಿರಿಯ ಸಾಹಿತಿ ಬೊಳುವಾರು ಅವರು ಆಗಾಗ ಹೇಳುವ ಮಾತೊಂದು ನೆನಪಾಗುತ್ತದೆ. ” ಹಿಂದೆಲ್ಲಾ ನನ್ನ “ಸಂಘಮಿತ್ರರು” ಕೇಳುತ್ತಿದ್ದರು ‘ ನೀವ್ಯಾಕೆ ನಿಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ? ಈಗ ಅವರು ಕೇಳುತ್ತಾರೆ ” ನೀವ್ಯಾಕೆ ನಿಮ್ಮ ಹೆಣ್ಮಕ್ಕಳಿಗೆ ಬುರ್ಖಾ ತೊಡಿಸಿ ಕಾಲೇಜಿಗೆ ಕಳುಹಿಸುವುದು”…? ಒಟ್ಟಿನಲ್ಲಿ ನಾವು ಏನು ಮಾಡಿದ್ರೂ ತಪ್ಪು”
ಇತ್ತೀಚಿನ ಸ್ಕಾರ್ಫ್ ವಿವಾದದ ಸಂದರ್ಭ ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆಯಲ್ಲಿ ಅರ್ಥವಿದೆ ಎಂದು ನನಗನಿಸುತ್ತದೆ.
ಸಂಸ್ಥೆಯಲ್ಲಿ ಎಲ್ಲರಿಗೂ ಏಕರೂಪೀ ವಸ್ತ್ರ ಸಂಹಿತೆಯೆಂದು ಸಂಸ್ಥೆ ಸಮಜಾಯಿಷಿ ಕೊಡುತ್ತಿದೆ. ಮುಖ್ಯವಾಗಿ ಅದರಲ್ಲಿ ಶಿರವಸ್ತ್ರವನ್ನೇ ಗುರಿಮಾಡಲಾಗಿದೆ. ಅದೊಂದು ಕಾನ್ವೆಂಟ್ ಶಿಕ್ಷಣ ಸಂಸ್ಥೆಯಾಗಿರುವುದರಿಂದ ಸಹಜವಾಗಿಯೇ ಕ್ರೈಸ್ತ ಸನ್ಯಾಸಿನಿಯರೂ ಅಲ್ಲಿನ ಬೋಧಕ ವರ್ಗದಲ್ಲಿದ್ದಾರೆ. ಅವರು ಕಡ್ಡಾಯವಾಗಿ ಶಿರವಸ್ತ್ರ್ರ ಧರಿಸುತ್ತಾರೆ. ಕಾಲೇಜು ಶಿಕ್ಷಣ ಪಡೆಯುತ್ತಿರುವ ಕ್ರೈಸ್ತ ಸನ್ಯಾಸಿನಿ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿನಿಗಳಿಗೆ ಶಿರವಸ್ತ್ರಕ್ಕೆ ಅವಕಾಶವಿದೆಯೆಂದಾದರೆ ಮುಸ್ಲಿಮ್ ವಿದ್ಯಾರ್ಥಿನಿಗಳಿಗೇಕೆ ಈ ಹಕ್ಕನ್ನು ನಿರಾಕರಿಸಲಾಗುತ್ತದೆ..?ಅವರ ಧಾರ್ಮಿಕ ನಂಬಿಕೆಗಳನ್ನು ಅನುಸರಿಸಲು ಅವರು ಬದ್ಧರಿದ್ದರ ಅಥವಾ ಅವರಿಗೆ ಅವಕಾಶ ನೀಡಲು ಸಾಧ್ಯವಾದರೆ ಇತರರ ಧಾರ್ಮಿಕ ನಂಬಿಕೆಗಳ ಮೇಲೆ ಕಡಿವಾಣ ಹಾಕುವುದು ಯಾವ ಕಾಡಿನ ನ್ಯಾಯ ?
ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿದರೆ ಅದು ಹೇಗೆ ಏಕರೂಪೀ ವಸ್ತ್ರ ಸಂಹಿತೆ ಭಂಗವಾಗುತ್ತದೆ?
ಒಂದು ವೇಳೆ ಬಣ್ಣ ಬಣ್ಣದ ಶಿರವಸ್ತ್ರಗಳು ಏಕರೂಪೀ ವಸ್ತ್ರ ಸಂಹಿತೆಗೆ ಅಡ್ಡಿಯೆಂದಾದರೆ ಸಮವಸ್ತ್ರದ ಬಣ್ಣದ್ದೇ ಶಿರವಸ್ತ್ರ ಧರಿಸಬೇಕೆಂಬ ನಿಯಮ ರೂಪಿಸಬಹುದಿತ್ತು.
ಇದೀಗ ಆಗ್ನೆಸ್ ಸಂಸ್ಥೆಯ ಆಡಳಿತ ಮಂಡಳಿಯ ವಿವರಣೆ ಹೇಗಿದೆಯೆಂದರೆ “ನಾವು ಕಾಲೇಜಿನ ದಿನಚರಿ ಪುಸ್ತಕದಲ್ಲಿ ಶಿರವಸ್ತ್ರಕ್ಕೆ ಅವಕಾಶ ಇಲ್ಲ ಎಂದು ನಮೂದಿಸಿದ್ದೇವೆ”
ದಿನಚರಿ ಪುಸ್ತಕವನ್ನು ಸಾಮಾನ್ಯವಾಗಿ ಯಾವುದೇ ಸಂಸ್ಥೆಯೂ ವಿದ್ಯಾರ್ಥಿಗಳಿಗೆ ನೀಡುವುದು ತರಗತಿಗಳು ಪ್ರಾರಂಭವಾದ ಬಳಿಕವಷ್ಟೆ. ಆಗ್ನೆಸ್ ಕಾಲೇಜಿನಲ್ಲೂ ತರಗತಿ ಆರಂಭವಾಗಿ ಒಂದು ವಾರದ ಬಳಿಕವಷ್ಟೆ ದಿನಚರಿ ಪುಸ್ತಕ ನೀಡಲಾಗಿದೆ. ತರ್ಕಕ್ಕೆ ಹೇಳುವುದಾದರೆ ಇಂತಹ ನಿಯಮಾವಳಿಗಳನ್ನು ಪ್ರಾಸ್ಪೆಕ್ಟಸ್ ನಲ್ಲಿ ನಮೂದಿಸಬೇಕು ಮತ್ತು ದಾಖಲಾತಿಯ ಸಂದರ್ಭದಲ್ಲೇ ವಿದ್ಯಾರ್ಥಿನಿಯರ ಪಾಲಕರಿಗೆ ತಿಳಿಸಬೇಕು.ಇದಕ್ಕೊಪ್ಪಿದವರಿಗೆ ಮಾತ್ರ ದಾಖಲಾತಿ ನೀಡಬೇಕು.
ಅದು ಬಿಟ್ಟು ಶುಲ್ಕವನ್ನೆಲ್ಲಾ ಪಡೆದು, ಎಲ್ಲೆಡೆಯೂ ದಾಖಲಾತಿ ಕೊನೆಗೊಂಡ ಬಳಿಕ ಹೇಳಿದರೆ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗುವುದಿಲ್ಲವೇ…? ಇದಕ್ಕೆ ಯಾರು ಹೊಣೆ? (ಆಗ್ನೆಸ್ ಸಂಸ್ಥೆಯ ಪ್ರಾಂಶುಪಾಲರು ಇದೀಗ “ನಾವು ಮೊದಲೇ ಹೇಳಿದ್ದೇವೆ” ಎಂದು ಸುಳ್ಳು ಹೇಳಿ ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ)
ಕರಾವಳಿಯ ಹೆಚ್ಚಿನೆಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ 50% ಮುಸ್ಲಿಮರು. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಂತೂ 75% ಮುಸ್ಲಿಮರು ಕಲಿಯುತ್ತಿದ್ದಾರೆ. ಮುಸ್ಲಿಮರ ಹೊರತಾದರೆ ವಿದ್ಯಾರ್ಥಿಗಳೇ ಇಲ್ಲ ಎನ್ನುವಂತಹ ಪರಿಸ್ಥಿತಿಯಿರುವ ಕಾಲೇಜುಗಳಲ್ಲಿ ಯಾಕೆ ಇಂತಹ ನಿಯಮಾವಳಿಗಳಿಲ್ಲ?
ಈ ಮಾತು ಯಾಕೆಂದರೆ ದ.ಕ.ಜಿಲ್ಲೆಯ ಎಲ್ಲಾ ಕಾನ್ವೆಂಟ್ ಶಿಕ್ಷಣ ಸಂಸ್ಥೆಗಳ ಸ್ಥಳೀಯ ಆಡಳಿತ ಮಂಡಳಿ ಬೇರೆ ಬೇರೆಯಾದರೂ ಮುಖ್ಯ ಆಡಳಿತ ಮಂಡಳಿ ಒಂದೇ ಆಗಿರುತ್ತದೆ.ಅದರಲ್ಲಿ ಕ್ರೈಸ್ತ ಧಾರ್ಮಿಕ ಮುಖಂಡರೇ ಪ್ರಮುಖರು. ಆದುದರಿಂದಲೇ ಒಂದು ಕಾನ್ವೆಂಟ್ ಸಂಸ್ಥೆಯ ಅಧ್ಯಾಪಕರನ್ನು ಇನ್ನೊಂದು ಕಾನ್ವೆಂಟ್ ಆಡಳಿತವಿರುವ ಸಂಸ್ಥೆಗೆ ವರ್ಗಾವಣೆ ಮಾಡಲಾಗುತ್ತದೆ. (ನಾನು ಸ್ವತಃ ಕಾನ್ವೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತವನಾದ್ದರಿಂದ ಈ ವಿಚಾರ ನನಗೆ ಸ್ಪಷ್ಟವಾಗಿ ತಿಳಿದಿದೆ)
ಈ ಸಮಸ್ಯೆಗೆ ಪರಿಹಾರ ಕಂಡುಹುಡುಕಬೇಕಾದ ಕೆಲವು ಮುಸ್ಲಿಂ ಮುಖಂಡರು ” ನಿಮಗೆ ಅವರದ್ದೇ ಶಿಕ್ಷಣ ಸಂಸ್ಥೆಯೇ ಆಗಬೇಕಾ? , ಬೇರೆ ಸಂಸ್ಥೆಗಳೇ ಇಲ್ಲವೇ…?” ಎಂದು ಪ್ರಶ್ನಿಸುವುದನ್ನು ನಾನು ಕೇಳಿದ್ದೇನೆ.
ಇದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸಮಜಾಯಿಷಿ ಅಷ್ಟೇ. ಇಂತಹ ಪ್ರಶ್ನೆಗಳೇ ಅಸಾಂವಿಧಾನಿಕ.
ಕ್ರೈಸ್ತ ಸಮುದಾಯವೂ ಮುಸ್ಲಿಮರಂತೆಯೇ ಕೋಮುವಾದಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸಮುದಾಯ ಎಂಬುವುದನ್ನು ಈ ಸಂದರ್ಭದಲ್ಲಿ ನೆನಪಿಸದೇ ಗತ್ಯಂತರವಿಲ್ಲ.
ಒಂದು ಅಲ್ಪಸಂಖ್ಯಾತ ಸಮುದಾಯವೇ ಇನ್ನೊಂದು ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಮನ್ನಿಸದಿರುವುದು ದುರಂತ.
ಮಕ್ಕಳನ್ನು ಜಾತಿ ಧರ್ಮದ ಹೆಸರಲ್ಲಿ ಒಡೆಯುವ ಇಂತಹ ಪ್ರವೃತ್ತಿಯನ್ನು ಶಿಕ್ಷಣ ಸಂಸ್ಥೆಗಳು ಕೂಡಲೇ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶೀಘ್ರ ಮಧ್ಯ ಪ್ರವೇಶ ಮಾಡಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹುಡುಕಲೇಬೇಕಿದೆ.
