ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ಧರಿಸದಂತೆ ಕಾಲೇಜು ಮಂಡಳಿ ಆದೇಶ: ನ್ಯಾಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ವರದಿಗಾರ (ಜೂ.26): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್(ಶಿರವಸ್ತ್ರ) ಧರಿಸಿ ತರಗತಿಗೆ ಹಾಜರಾಗದು ಎಂಬ ಕಾಲೇಜು ಆಡಳಿತ ಮಂಡಳಿಯ ಆದೇಶವು ವಿವಾದಕ್ಕೀಡಾಗಿದೆ.
ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ಶಿರವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗದಂತೆ ಸೂಚಿಸಿದ್ದು ಈ ನಿರ್ಧಾರವನ್ನು ಖಂಡಿಸಿ ಸೋಮವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತ್ರತ್ವದಲ್ಲಿ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಹೇಳಿಕೆ ಪ್ರಕಾರ, ‘ಕಳೆದ ಸಾಲಿನಲ್ಲಿ ಇಂತಹ ಯಾವುದೇ ಕಾನೂನುಗಳು ಇಲ್ಲದೆ ಈ ವರ್ಷ ತಮ್ಮ ಬೈಲಾದಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ. ಸ್ಕಾರ್ಫ್ ಧರಿಸಿದ ವಿದ್ಯಾರ್ಥಿಗಳು ಶಿಕ್ಷಕರಿಂದ ದಿನೇ ದಿನೇ ನಾನಾ ರೀತಿಯ ಕಿರುಕುಳಗಳು, ಧಾರ್ಮಿಕ ನಿಂದನೆಗಳನ್ನು ಎದುರಿಸುತ್ತಿದ್ದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ’.
ಘಟನೆಯ ಬಗ್ಗೆ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಜಿಲ್ಲಾ ನಾಯಕರು ಪ್ರಾಂಶುಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ವಿದ್ಯಾರ್ಥಿ ನಾಯಕರು ಹೇಳಿಕೆ ನೀಡಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಕಾಲೇಜಿನ ಎದುರುಗಡೆ ಧರಣಿ ಕೂತು ಪ್ರಾಂಶುಪಾಲರು ಸ್ಥಳಕ್ಕಾಗಮಿಸಿ ಮನವಿಯನ್ನು ಸ್ವೀಕರಿಸುವಂತೆ ಒತ್ತಾಯಿಸಿದರು ಅಲ್ಲದೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ನಾಯಕರ ಮಧ್ಯೆ ಮಾತುಕತೆ ನಡೆದರೂ ಯಾವುದೇ ಪರಿಹಾರ ಕಾಣಲಿಲ್ಲ.
ಈ ಬಗ್ಗೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ರಿಯಾಝ್, ಸಂಸ್ಥೆಯಲ್ಲಿ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಆಚರಣೆಯಂತೆ ಶಿರವಸ್ತ್ರ ಧರಿಸಲು ಅನುಮತಿಯಿದ್ದರೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಈ ನಿಯಮ ಜಾರಿಗೊಳಿಸಿದ್ದು ಖಂಡನೀಯ. ಸಂವಿಧಾನ ನೀಡಿದ ಹಕ್ಕುಗಳಿಗೆ ಚ್ಯುತಿಯಾಗುತ್ತಿದ್ದು ಸಮಸ್ಯೆ ಬಗೆಹರಿಯದಿದ್ದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಸಂಘಟಿಸಿ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸಂದರ್ಭ ಕ್ಯಾಂಪಸ್ ಫ್ರಂಟ್ ದ.ಕ. ಜಿಲ್ಲಾ ಕಾರ್ಯದರ್ಶಿಗಳಾದ ಸಾದಿಕ್ ಪುತ್ತೂರು, ತಾಜುದ್ದೀನ್, ಫರಾಝ್ ರವರು ಉಪಸ್ಥಿತರಿದ್ದರು.
ವಸ್ತ್ರಸಂಹಿತೆಯ ನೆಪವೊಡ್ಡಿ ಧಾರ್ಮಿಕ ಸ್ವಾತಂತ್ರ್ಯದ ಹರಣ; ಶಿಕ್ಷಣ ಇಲಾಖೆಯು ಮಧ್ಯ ಪ್ರವೇಶಿಸುವಂತೆ ಮುರ್ಶಿದಾ ಆಗ್ರಹ
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಹಲವಾರು ಶಾಲಾ ಕಾಲೇಜುಗಳಲಿ ವಸ್ತ್ರಸಂಹಿತೆಯ ನೆಪವೊಡ್ಡಿ ಧಾರ್ಮಿಕ ಸ್ವಾತಂತ್ರ್ಯದ ಹರಣ ನಡೆಯುತ್ತಿದ್ದು ಇದರ ಪರಿಣಾಮ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಭಾವ ಬೀರುತ್ತದೆ. ಶಿಕ್ಷಣ ಇಲಾಖೆಯು ಮಧ್ಯ ಪ್ರವೇಶಿಸಿ ಮುಂದಕ್ಕೆ ಯಾವುದೇ ರೀತಿಯ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಜಿಲ್ಲಾ ಉಪಾಧ್ಯಕ್ಷೆ ಮುರ್ಶಿದಾ ಪತ್ರಿಕಾ ಹೇಳಿಕೆಯಲ್ಲಿ ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.
