ಅಭಿಪ್ರಾಯ

ಎರಡನೇ ಬಾರಿ ಬೆತ್ತಲೆಯಾದ ಉಡುಪಿ

ಉಡುಪಿ ಜಿಲ್ಲೆ ಮತ್ತೊಮ್ಮೆ ಬೆತ್ತಲಾಗಿದೆ. ದನದ ವ್ಯಾಪಾರ ಮಾಡುತ್ತಿದ್ದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು 2005, ಎಪ್ರಿಲ್‍ನಲ್ಲಿ ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿ ರಾಷ್ಟ್ರಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದ್ದ ಜಿಲ್ಲೆಯು ಇದೀಗ ಎರಡನೇ ಬಾರಿ ಅವಮಾನದಿಂದ ತಲೆ ತಗ್ಗಿಸಿ ನಿಂತಿದೆ.

ಈ ಅವಮಾನಕ್ಕೆ ಮುಖ್ಯ ಕಾರಣ ಪೊಲೀಸ್ ವ್ಯವಸ್ಥೆ. 62 ವರ್ಷದ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಹತ್ಯೆಗೈಯಲು ಸಂಘಪರಿವಾರದ ದುಷ್ಕರ್ಮಿಗಳೊಂದಿಗೆ ಸಹಕರಿಸಿ, ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಶ್ರಮಿಸಿದ ಆರೋಪ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್‍ಐ ಡಿ.ಎನ್. ಕುಮಾರ್, ಹೆಡ್ ಕಾನ್‍ಸ್ಟೇಬಲ್ ಮೋಹನ್ ಕೊತ್ವಾಲ್ ಮತ್ತು ಪೊಲೀಸ್ ಪೇದೆ ಗೋಪಾಲ್‍ರ ಮೇಲಿದೆ. ಒಂದು ವೇಳೆ, ಉಡುಪಿ ಜಿಲ್ಲಾ ಎಸ್.ಪಿ. ಲಕ್ಷ್ಮಣ್ ನಿಂಬರಗಿಯವರು ತನಿಖೆಯನ್ನು ಕೈಗೆತ್ತಿಕೊಳ್ಳದೇ ಇರುತ್ತಿದ್ದರೆ ಈ ಮೂವರು ಬಂಧನಕ್ಕೊಳಗಾಗುವ ಸಾಧ್ಯತೆ ತೀರಾ ಕಡಿಮೆಯಿತ್ತು ಮತ್ತು ಸಂಘಪರಿವಾರದ ದುಷ್ಕರ್ಮಿಗಳು ಬಂಧನದಿಂದ ತಪ್ಪಿಸಿಕೊಂಡು ಇನ್ನೊಂದು ಹತ್ಯೆಗೆ ಸ್ಕೆಚ್ ಹಾಕುತ್ತಿದ್ದರು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೊಂದಿದೆ. ಅದುವೇ ಜಿಲ್ಲಾ ಎಸ್.ಪಿ. ಲಕ್ಷ್ಮಣ್ ನಿಂಬರಗಿ. ಅವರ ಮುಂದೆ ಎರಡು ಅವಕಾಶಗಳಿದ್ದುವು. ಒಂದು- ಹಿರಿಯಡ್ಕ ಪೊಲೀಸು ಠಾಣೆಯ ಎಸ್‍ಐ ಡಿ.ಎನ್. ಕುಮಾರ್ ದಾಖಲಿಸಿರುವಂತೆ ಹುಸೇನಬ್ಬರ ಸಾವನ್ನು ಅಸಹಜವೆಂದು ಪರಿಗಣಿಸಿ ಅವರದೇ ನೇತೃತ್ವದಲ್ಲಿ ತನಿಖೆಯನ್ನು ಮುಂದುವರಿಸುವಂತೆ ಹೇಳುವುದು. ಇನ್ನೊಂದು- ಸ್ವತಃ ಆ ಪ್ರಕರಣದ ತನಿಖೆಯ ನೇತೃತ್ವವನ್ನು ವಹಿಸಿಕೊಳ್ಳುವುದು. ಮೊದಲನೆಯದು ತೀರಾ ಸುಲಭ ಮತ್ತು ಸಹಜ ಆಯ್ಕೆ. ಎರಡನೆಯದು ತೀರಾ ಕಠಿಣ ಮತ್ತು ಸವಾಲಿನದ್ದು. ಲಕ್ಷ್ಮಣ್ ನಿಂಬರಗಿಯವರು ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಮಾತ್ರವಲ್ಲ, ತಾನು ಆಗಾಗ ಭೇಟಿಯಾಗುತ್ತಲೇ ಇರುವ ತನ್ನ ಕೈ ಕೆಳಗಿನ ಎಸ್‍ಐ ಡಿ.ಎನ್. ಕುಮಾರ್ ಸಹಿತ ಪೊಲೀಸ್ ಅಧಿಕಾರಿಗಳಿಗೇ ಮುಖಾಮುಖಿಯಾದರು. ಇದೊಂದು ಕಠಿಣ ಸವಾಲು. ತನ್ನ ಸಹೋದ್ಯೋಗಿಗಳನ್ನೇ ಅನುಮಾನದ ಮೊನೆಯನ್ನಿಟ್ಟು ವಿಚಾರಿಸುವುದು ಸುಲಭದ ಸವಾಲಲ್ಲ. ಅಪರಿಚಿತರನ್ನು ವಿಚಾರಣೆಗೆ ಒಳಪಡಿಸುವುದಕ್ಕೂ ಸಹೋದ್ಯೋಗಿಗಳನ್ನೇ ವಿಚಾರಣೆಗೆ ಒಳಪಡಿಸುವುದಕ್ಕೂ ಸಾಕಷ್ಟು ಅಂತರವಿದೆ. ಇಂಥ ಸಂದರ್ಭದಲ್ಲಿ ಸ್ನೇಹ, ಪ್ರೀತಿ, ಉಪಕಾರ ಭಾವ ಇತ್ಯಾದಿ ಇತ್ಯಾದಿಗಳು ಸಹಜವಾಗಿ ಅಡ್ಡ ಬರುತ್ತವೆ. ಇಂಥ ಮುಲಾಜುಗಳನ್ನು ಮೀರಿ ನ್ಯಾಯದ ಪರ ನಿಲ್ಲುವುದಕ್ಕೆ ಅಸಾಧಾರಣ ಧೈರ್ಯ ಬೇಕಾಗುತ್ತದೆ. ಲಕ್ಷ್ಮಣ್ ನಿಂಬರಗಿಯವರು ಗೌರವಾರ್ಹರಾಗುವುದು ಈ ಕಾರಣಕ್ಕೆ. ಅವರು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಹುಸೇನಬ್ಬರ ಹತ್ಯೆಗೆ ದುಷ್ಕರ್ಮಿಗಳೊಂದಿಗೆ ಪೊಲೀಸರೇ ಕೈ ಜೋಡಿಸಿರುವುದು ಪತ್ತೆಯಾಯಿತು. ಅವರು ಅದನ್ನು ಪತ್ರಿಕಾಗೋಷ್ಠಿ ಕರೆದು ಎಲ್ಲರೆದುರು ಹೇಳುವ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದರು. ತನ್ನದೇ ಸಹೋದ್ಯೋಗಿಗಳನ್ನು ಬಂಧಿಸಿದರು. ನಿಜವಾಗಿ, ಉಡುಪಿಯು ಅವಮಾನಕ್ಕೆ ಒಳಗಾಗುವುದು ಇದು ಮೊದಲಲ್ಲ. 2005 ಎಪ್ರಿಲ್‍ನಲ್ಲಿ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿದ ಪ್ರಕರಣ ನಡೆದಿತ್ತು. ಬಹುಶಃ ದನಸಾಗಾಟದ ಹೆಸರಲ್ಲಿ ಜಿಲ್ಲೆಯಲ್ಲಿ ನಡೆದ ಮೊದಲ ವಿಕೃತಿ ಇದು. ವಿಧಾನಸಭೆಯಲ್ಲೂ ಈ ವಿಕೃತಿ ಚರ್ಚೆಗೀಡಾಗಿತ್ತು. ಬೆತ್ತಲೆಗೊಂಡ ತಂದೆ ಮತ್ತು ಮಗನನ್ನು ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸಿದ್ದುವು. ವಿಷಾದ ಏನೆಂದರೆ, 2008ರ ಜುಲೈನಲ್ಲಿ ಈ ಪ್ರಕರಣದ ಎಲ್ಲ 13 ಆರೋಪಿಗಳನ್ನೂ ತ್ವರಿತಗತಿ ನ್ಯಾಯಾಲಯವು ಬಿಡುಗಡೆಗೊಳಿಸಿತ್ತು. ಸಾಕ್ಷ್ಯಾಧಾರದ ಕೊರತೆಯನ್ನು ಇದಕ್ಕೆ ಕಾರಣವಾಗಿ ನೀಡಲಾಗಿತ್ತು. ಬೆತ್ತಲೆ ಚಿತ್ರದ ನೆಗೆಟಿವ್ ಅನ್ನು ಕೋರ್ಟಿಗೆ ಸಲ್ಲಿಸಲು ಇಲಾಖೆ ವಿಫಲವಾಗಿರುವುದು ಅತಿದೊಡ್ಡ ವೈಫಲ್ಯವಾಗಿ ಎತ್ತಿ ಹೇಳಲಾಗಿತ್ತು. ಇದಕ್ಕಿಂತಲೂ ಅಚ್ಚರಿ ಏನೆಂದರೆ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಕೃತ್ಯದ ಪ್ರಮುಖ ರೂವಾರಿಯೆಂದು ಹೆಸರಿಸಲಾಗಿದ್ದ ಆರೋಪಿ ಯಶ್ಪಾಲ್ ಸುವರ್ಣನನ್ನು ಆಗಿನ ಬಿಜೆಪಿ-ಜೆಡಿಎಸ್ ಸರಕಾರವು ಜಿಲ್ಲಾ ಪಟ್ಟಣ ಪಂಚಾಯತ್‍ನ ಸದಸ್ಯನಾಗಿ ನೇಮಕ ಮಾಡಿ ಗೌರವಿಸಿತ್ತು. ಮಾತ್ರವಲ್ಲ, ದೋಷಮುಕ್ತಗೊಂಡ ಆರೋಪಿಗಳನ್ನು ಕೋರ್ಟ್ ಆವರಣದಿಂದ ಗಾಂಧಿ ಚೌಕದವರೆಗೆ ಹಿಂದೂ ಯುವಸೇನೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಕೊಂಡೊಯ್ದು ಸಂಭ್ರಮ ವ್ಯಕ್ತಪಡಿಸಿದ್ದರು. ಅಂದಹಾಗೆ,

ಶೈಕ್ಪಣಿಕ ಸಾಧನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸದಾ ಮುಂಚೂಣಿಯಲ್ಲಿರುತ್ತವೆ. ಮೊದಲ ಎರಡ್ಮೂರು ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಗಳಿವು. ಶೈಕ್ಷಣಿಕವಾಗಿ ಇಷ್ಟೊಂದು ಅಭಿವೃದ್ಧಿ ಹೊಂದಿರುವ ಜಿಲ್ಲೆಯು ವೈಚಾರಿಕವಾಗಿ ಈ ಬಗೆಯ ಕಟು ಬರ್ಬರತೆಯನ್ನು ಪ್ರದರ್ಶಿಸುತ್ತಿರುವುದು ಯಾಕಾಗಿ? ಇದಕ್ಕೆ ದನದ ಮೇಲಿನ ಪ್ರೀತಿ ಕಾರಣವೋ ಅಥವಾ ಮುಸ್ಲಿಮರ ಮೇಲಿನ ದ್ವೇಷ ಕಾರಣವೋ? ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಯಾಕೆ ದ್ವೇಷಿಸಬೇಕು? ಹಾಗೆ ದ್ವೇಷಿಸಬೇಕೆಂದು ಹೇಳಿ ಕೊಡುವವರು ಯಾರು? ಅವರ ಉದ್ದೇಶವೇನು? ಮುಸ್ಲಿಮರು ದನ ಸಾಗಾಟದಲ್ಲಿ ಭಾಗಿಯಾಗುತ್ತಾರೆ ಅನ್ನುವುದು ಅವರನ್ನು ದ್ವೇಷಿಸುವುದಕ್ಕೆ ಮುಖ್ಯ ಕಾರಣವೇ? ಹಾಗಿದ್ದರೆ ಈ ದ್ವೇಷ ಮುಸ್ಲಿಮರಿಗಿಂತಲೂ ಹೆಚ್ಚು ಈ ವ್ಯವಸ್ಥೆಯ ಮೇಲೆ ಆಗಬೇಕಲ್ಲವೇ? ಮುಸ್ಲಿಮ್ ವ್ಯಾಪಾರಿಗಳಿಗೆ ದನಮಾರಾಟ ಮಾಡುವುದು ಮುಸ್ಲಿಮರಲ್ಲ. ಕಸಾಯಿಖಾನೆಗಳನ್ನು ಏಲಂ ಮಾಡಿ ಹಂಚುವುದು ಮುಸ್ಲಿಮರಲ್ಲ. ಬೃಹತ್ ಕಸಾಯಿಖಾನೆಗಳನ್ನು ಸ್ಥಾಪಿಸಿ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವುದೂ ಮುಸ್ಲಿಮರಲ್ಲ. ಈ ಎಲ್ಲ ಪ್ರಕ್ರಿಯೆಗಳಲ್ಲಿ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಆದರೆ ದನ ಮಾರಾಟ ಮಾಡುವ ಮಾಲಿಕನನ್ನಾಗಲಿ, ಕಸಾಯಿಖಾನೆಗೆ ಪರವಾನಿಗೆ ಕೊಡುವ ಮತ್ತು ಏಲಂ ಮಾಡಿ ಹಂಚುವ ಅಧಿಕಾರಿಗಳನ್ನಾಗಲಿ ಮತ್ತು ವಿದೇಶಕ್ಕೆ ದನದ ಮಾಂಸವನ್ನು ರಫ್ತು ಮಾಡಲು ಕಾನೂನು-ಕಾಯ್ದೆಗಳನ್ನು ರೂಪಿಸುವ ಜನಪ್ರತಿನಿಧಿಗಳನ್ನಾಗಲಿ ಸ್ವಲ್ಪವೂ ದ್ವೇಷಿಸದೇ ಮತ್ತು ಅವರ ವಿರುದ್ಧ ಮಾತನ್ನೇ ಆಡದೇ ಕೇವಲ ದನವನ್ನು ಸಾಗಾಟ ಮಾಡುವಂಥ ಜುಜುಬಿ ಹೊಟ್ಟೆಪಾಡಿನ ಕೆಲಸದಲ್ಲಿ ತೊಡಗಿರುವ ಬಡಪಾಯಿ ಮುಸ್ಲಿಮರ ಮೇಲೆ ಈ ಪರಿಯ ದ್ವೇಷವೇಕೆ? ಈ ದ್ವೇಷವನ್ನು ದನದ ಮೇಲಿನ ಪ್ರೀತಿಯಿಂದ ಹುಟ್ಟಿಕೊಂಡಿರುವ ದ್ವೇಷ ಎಂದು ಹೇಗೆ ಹೇಳುವುದು? ಯಾಕೆ ದನವನ್ನು ಮಾರಾಟ ಮಾಡುವವರ ಹತ್ಯೆ ನಡೆಯುವುದಿಲ್ಲ? ಕಸಾಯಿಖಾನೆಯನ್ನು ನಿರ್ವಹಿಸುವವರು ಮತ್ತು ಏಲಂ ಮಾಡುವವರ ಹತ್ಯೆ ನಡೆಯುವುದಿಲ್ಲ? ವಿದೇಶಕ್ಕೆ ಮಾಂಸ ರಫ್ತು ಮಾಡಲು ಅವಕಾಶ ತೆರೆದಿಟ್ಟಿರುವ ಜನಪ್ರತಿನಿಧಿಗಳ ಮೇಲೆ ಯಾಕೆ ದ್ವೇಷ ಸಾಧಿಸುವುದಿಲ್ಲ? ಇದೇನನ್ನು ಸೂಚಿಸುತ್ತದೆ? ನಿಜಕ್ಕೂ, ಮುಸ್ಲಿಮರನ್ನು ಹುಡುಕಿ ಹುಡುಕಿ ಥಳಿಸುವ ಗುಂಪನ್ನು ಆಳುತ್ತಿರುವುದು ಯಾವ ವಿಚಾರಧಾರೆ? ಆ ಗುಂಪಿಗೆ ಯಾವ ವಿಷವನ್ನು ಚುಚ್ಚಲಾಗಿದೆ? ಅಂದಹಾಗೆ,
ಮುಸ್ಲಿಮರನ್ನು ಥಳಿಸಿ ಕೊಲ್ಲುವುದರಿಂದ ಅಥವಾ ಬೆತ್ತಲೆಗೊಳಿಸಿ ಅವಮಾನಿಸುವುದರಿಂದ ಗೋವುಗಳ ರಕ್ಪಣೆ ಸಾಧ್ಯವೇ? ಗೋವುಗಳ ಅಸುರಕ್ಷಿತತೆಗೆ ಮುಸ್ಲಿಮರು ನಿಜವಾಗಿಯೂ ಅಡ್ಡಿಯೇ? ಈ ದೇಶದ 70% ಮಂದಿ ಮಾಂಸಪ್ರಿಯರು ಎಂಬ ಕಟು ಸತ್ಯ ಎದುರಿಗಿದ್ದೂ ಮತ್ತು ಗೋಹತ್ಯೆ ನಿಷೇಧದ ಬಗ್ಗೆ ಮಾತಾಡುವ ಬಿಜೆಪಿಯೇ ಗೋಮಾಂಸವನ್ನು ಸಹಜ ಆಹಾರವೆಂದು ಒಪ್ಪಿಕೊಂಡು ವಿದೇಶಕ್ಕೆ ರಫ್ತು ಮಾಡುತ್ತಿರುವುದರ ಹೊರತಾಗಿಯೂ ದನಸಾಗಾಟದ ವಾಹನವನ್ನು ತಡೆದು ಥಳಿಸುವುದನ್ನು ಗೋಸಂರಕ್ಪಣೆಯ ಭಾಗವೆಂದು ನಂಬುವವರಿದ್ದಾರೆಂಬುದನ್ನು ಒಪ್ಪಿಕೊಳ್ಳಬಹುದೇ? ನಿಜಕ್ಕೂ ಇವರ ಉದ್ದೇಶ ಗೋಸಂರಕ್ಪಣೆಯೋ ಅಥವಾ ಮುಸ್ಲಿಮ್ ದ್ವೇಷವೋ? ವಾಹನಗಳಲ್ಲಿ ಸಾಗಾಟವಾಗುವ ಜುಜುಬಿ ಸಂಖ್ಯೆಯ ಜಾನುವಾರುಗಳನ್ನು ತಡೆಯುವುದರಿಂದ ಗೋಸಂಕುಲಗಳ ರಕ್ಪಣೆಯಾಗುತ್ತದೆಂಬ ಮುಗ್ಧ ಭಾವನೆ ಈ ದುಷ್ಕರ್ಮಿಗಳದ್ದೇ? ಯಾರು ಈ ಕ್ರೌರ್ಯದ ಹಿಂದಿದ್ದಾರೆ? ಅವರನ್ನೇಕೆ ಈ ಸಮಾಜ ಇನ್ನೂ ಗೌರವಿಸುತ್ತಿದೆ?
ಲಕ್ಷ್ಮ ಣ್ ನಿಂಬರಗಿಯವರನ್ನು ಶ್ಲಾಘಿಸುತ್ತಲೇ ಗೋಸಂರಕ್ಪಣೆಯ ಹೆಸರಲ್ಲಿ ನಡೆಯುತ್ತಿರುವ ಏಕಮುಖ ಕ್ರೌರ್ಯದ ಅಪಾಯಗಳನ್ನು ಸಮಾಜದ ಎದೆಗೆ ಮುಟ್ಟಿಸಬೇಕಾಗಿದೆ.

ಕೃಪೆ: ಸನ್ಮಾರ್ಗ ಸಂಪಾದಕೀಯ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group