ನಿಮ್ಮ ಬರಹ

ಭಾರತವೆಂಬ ಬಡರಾಷ್ಟ್ರವನ್ನು ‘ಒಂದೇ ದಿನದಲ್ಲಿ ಬದಲಿಸಿ’ ವಿಶ್ವವೇ ಗುರುತಿಸುವಂತೆ ಮಾಡಿದ ಮೋದಿ

ನಿಜವಾಗಿಯೂ ಮೋದಿ ಬದಲಿಸಿರುವುದೇನು
ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ ಇಲ್ಲಿದೆ!

ಲೇಖನ ಪೂರ್ತಿ ಓದಿ
ಲೇಖನ: ಕಂದ (ಜಸ್ಟ್ ಶಾಫಿ)

ಮೋದಿ ಈಗ ವಿಶ್ವಗುರು. ಈಗ ಭಾರತದತ್ತ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಭಾರತದ ಸ್ಥಿತಿ ತೀರಾ ಹೀನಾಯವಾಗಿತ್ತು. ರಸ್ತೆ , ವಿದ್ಯುತ್, ಶಾಲೆಗಳು, ಹೆದ್ದಾರಿ, ಸೇನೆ, ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಗಳು, ಸರಕಾರಿ ಆಡಳಿತ ಕೇಂದ್ರಗಳ ಕಟ್ಟಡಗಳು, ವಿದ್ಯುತ್, ಅಣೆಕಟ್ಟುಗಳು, ನಿಲ್ದಾಣಗಳು, ತಂಗುದಾಣಗಳು, ಆಸ್ಪತ್ರೆಗಳು, ಸಾರಿಗೆ, ವಿಶ್ವ ವಿದ್ಯಾಲಯಗಳು, ಹಾಲು ಉತ್ಪನ್ನ ಸಂಘಗಳು,ಬ್ಯಾಂಕುಗಳು ಏನೆಂದರೇನೂ ಇಲ್ಲದೆ ಭಾರತ ಬಡ ರಾಷ್ಟ್ರವಾಗಿತ್ತು.

ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದ ದೇಶದ ಅಧಿಕಾರ ಹಿಡಿದ ಮೋದಿ ಮೊತ್ತ ಮೊದಲನೆಯದಾಗಿ ಕಟ್ಟಿದ್ದು ಸಂಸತ್ತಿನ ಕಟ್ಟಡ. ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲು ಕಟ್ಟಡವೇ ಇಲ್ಲದಾಗ ಮೋದಿಗೆ ಮೊದಲು ಅದನ್ನು ನಿರ್ಮಿಸುವುದು ಅನಿವಾರ್ಯವಾಗಿತ್ತು. ಹಾಗೆ ಅರ್ಜೆಂಟ್ ಅರ್ಜೆಂಟ್ ಆಗಿ ಸಂಸತ್ತು ಕಟ್ಟಿ ಅಧಿಕಾರಕ್ಕೆ ಬಂದ ಮೋದಿ, ಅದಕ್ಕಾಗಿ ಎಲ್ಲಾ ರಾಷ್ಟ್ರಭಕ್ತರಿಂದ ದೇಣಿಗೆ ಒಟ್ಟುಗೂಡಿಸಿದ್ದರು ಪಾಪ. ರಾಮಮಂದಿರಕ್ಕೆ ಅಡ್ವಾಣಿ ಇಟ್ಟಿಗೆ ಹೊಂದಿಸಿದಂತೆ. ನಂತರ ಸಂಸತ್ತು ಪ್ರವೇಶಿಸಿದ ಮೋದಿ ಅಲ್ಲಿ ಕುಳಿತು ಮೊದಲು ಮಾಡಿದ ಕಾರ್ಯ, ದೇಶವ್ಯಾಪಿ ರಾತ್ರಿ ಹಗಲಾಗುವುದರೊಳಗೆ ಲಕ್ಷಾಂತರ ಕಿಲೋಮೀಟರ್ ಹೆದ್ದಾರಿ, ಸಾವಿರಾರು ಶಾಲೆ ಕಾಲೇಜು,ಆಸ್ಪತ್ರೆ, ಒಳರಸ್ತೆ, ಸರಕಾರಿ ಕಛೇರಿಗಳು, ಅಣೆಕಟ್ಟು, ಎಪಿಎಂಸಿ, ಇಸ್ರೋ, ರೈಲ್ವೇ ಹಳಿ, ನಿಲ್ದಾಣ,ಬೋಗಿ, ಸರಕಾರಿ ಬಸ್, ಮಿಲ್ಕ್ ಯೂನಿಯನ್ ಗಳು, ಹಾಪ್ ಕಾಮ್ಸ್ , ಕಸ ಎತ್ತುವ ಲಾರಿಗಳನ್ನೆಲ್ಲ ಸ್ಥಾಪಿಸಿದರು. ಮಾರನೇ ದಿನ ದೇಶದಾದ್ಯಂತ ಬರಡಾಗಿ ಬಿದ್ದಿದ್ದ ಕೃಷಿ ಭೂಮಿಗೆ ಎತ್ತು, ನೇಗಿಲು, ಟ್ರಾಕ್ಟರ್ ಒದಗಿಸಿ, ಅಣೆಕಟ್ಟುಗಳಿಗೆ ನೀರು ತುಂಬಿಸಿದರು.ನಂತರ ಬೆಳಿಗ್ಗೆ ಎದ್ದು ದೇಶಪೂರ್ತಿ ವಿದ್ಯುತ್ ಕಂಬಗಳನ್ನು ನೆಟ್ಟು ಅದಕ್ಕೆ ವಿದ್ಯುತ್ ಹರಿಸಿ ಮನೆಗಳಿಗೆ ಮತ್ತು ದಾರಿ ದೀಪಗಳಿಗೆ ಬಲ್ಬ್ ಹಾಕಿದರು. ಅವತ್ತೇ ಸಂಜೆ ಕೋಟ್ಯಾಂತರ ಗ್ಯಾಸ್ ಸಿಲಿಂಡರ್ ಗಳನ್ನು ವೆಲ್ಡ್ ಮಾಡಿಸಿ ಅನಿಲ ತುಂಬಿ ಕತ್ತಲಾಗುವುದರೊಳಗೆ ಎಲ್ಲ ಮನೆಗಳಿಗೆ ತಲುಪುವ ವ್ಯವಸ್ಥೆ ಮಾಡಿದರು. ನಂತರ ಸಮವಸ್ತ್ರ ಸ್ಟಿಚ್ ಮಾಡಿಸಿ ಪೊಲೀಸ್ ಮತ್ತು ಸೇನೆಗೆ ವಿತರಿಸಿ ದೇಶದಾದ್ಯಂತ ಎತ್ತಿನಗಾಡಿಯಲ್ಲಿ ಮತ್ತು ಕತ್ತೆಗಳ ಮೇಲೆ ಸಂಚರಿಸುತ್ತಿದ್ದ ಅವರಿಗೆ ವಾಹನಗಳ ವ್ಯವಸ್ತೆಯನ್ನೂ ಮಾಡಿದರು. ಅದರ ಮರು ದಿನ ಶಾಲೆ ಕಾಲೇಜುಗಳಿಂದ ಕಲಿತು ತೇರ್ಗಡೆಯಾದ ಯುವಜನರಿಗೆ ಉದ್ಯೋಗ ದೊರಕಿಸಿಕೊಡುವ ಕಾರ್ಖಾನೆ, ಕೈಗಾರಿಕೆಗಳನ್ನು ರಾಜ್ಯ ರಾಜ್ಯಗಳಲ್ಲಿ ಸ್ಥಾಪಿಸಿದರು. ಇಷ್ಟೆಲ್ಲ ಆಗುವಾಗ ನಯಾಪೈಸೆ ಬೊಕ್ಕಸದಲ್ಲಿ ದುಡ್ಡಿರಲಿಲ್ಲ, ಆದರೂ ದೇವರ ದಯೆಯಿಂದ ಹೇಗೆಲ್ಲೋ ಒದ್ದಾಡಿ ಮೋದಿ ಅವುಗಳಿಗೆ ಬಜೆಟ್ ಹೊಂದಿಸಿದರು. ಇನ್ನೂ ಹೆಚ್ಚುವರಿಯಾಗಿ ಉಳಿದವರನ್ನು ವಿದೇಶ ನಾಯಕರಿಗೆ ಒತ್ತಡ ಹಾಕಿ ಬೇರೆ ಬೇರೆ ಉದ್ಯೋಗಕ್ಕೆ ನಿಯೋಗಿಸಿದರು.ಅಲ್ಲಿ ಕೆಲಸ ಮಾಡಲು ಅವರೆಲ್ಲರಿಗೆ ಇಂಗ್ಲಿಷ್ ಬರುವಂತೆ ಮಾಡುವಷ್ಟರಲ್ಲಿ ಮೋದಿ ತುಂಬಾ ಹೈರಾಣಾಗಿದ್ದರು. ಹಾಗೆ ಸ್ವಲ್ಪ ಬುದ್ಧಿವಂತರಿದ್ದವರಲ್ಲಿ ಸುಂದರ್ ಪಿಚಾಯಿಯನ್ನು ಗೂಗಲ್ ಸಿಇಒ ಆಗಿಯೂ, ಸತ್ಯಾ ನಾದೆಲ್ಲರನ್ನು ಮೈಕ್ರೋಸಾಫ್ಟ್ ಸಿಇಒ ಆಗಿಯೋ ಇಂದಿರಾ ನೂಯಿಯನ್ನು ಪೆಪ್ಸಿಕೋ ಸಿಇಒ ಆಗಿಯೂ ನೇಮಕವಾಗುವಂತೆ ನೋಡಿಕೊಂಡರು.

ಹಾಗೆ ಸಂಜೆ ಆಯಿತು. ಮೋದಿಗೆ ಮೊದ ಮೊದಲು ಇಂಗ್ಲಿಷ್ ಕಲಿತು ಕೆಲಸಕ್ಕಾಗಿ ಹೊರ ದೇಶಕ್ಕೆ ಹೋದ ದೇಶದ ಮಕ್ಕಳು ಹೇಗಿದ್ದಾರೆ ಎಂದು ನೋಡಿಕೊಂಡು ಬರುವ ಆಸೆಯಾಯಿತು. ಆದರೆ ಹೋಗಲು ದುಡ್ಡು ಬೇಕಲ್ಲ. ಎಂತ ಎಲ್ಲ ಸಾಲ ಮಾಡಿ ,ಅವರಿವರಲ್ಲಿ ಎಲ್ಲ ಅಡ್ಜಸ್ಡ್ ಮಾಡಿ ಮೋದಿ ಏರ್ ಇಂಡಿಯಾ ಅಂತ ಒಂದು ಫ್ಲೈಟ್ ರೆಡಿ ಮಾಡಿಸಿ ಮೊದಲು ಅಮೇರಿಕಾದ ಮ್ಯಾಡಿಸನ್ ಸ್ಕ್ವೇರ್ ಗೆ ಹೋದರು. ಅಲ್ಲಿ ತಾನು ಎಪ್ಪತ್ತು ವರ್ಷದಿಂದ ಲೂಟಿ ಹೊಡೆಯಲ್ಪಟ್ಟು ಬರಡಾಗಿ ಬಿದ್ದಿದ್ದ ದೇಶಕ್ಕೆ ಹತ್ತು ದಿನದಲ್ಲಿ ತನ್ನ ಕೈಯಿಂದ ಸಾಧ್ಯವಾಗುವಷ್ಟು ವ್ಯವಸ್ಥೆ ಮಾಡಿದ ಸಂಭ್ರಮವನ್ನು ಭಾರತದ ಮಕ್ಕಳೊಂದಿಗೆ ಹಂಚಿಕೊಂಡರು.
ವಿದೇಶದಲ್ಲಿರುವ ಭಾರತದ ಮಕ್ಕಳ ಖುಷಿ ನೋಡಿ ತಡೆಯಲಾರದಷ್ಡು ಸಂತಸಗೊಂಡು ಮೋದೀಜಿಗೆ ಮತ್ತೆ ಹಾಗೆ ಹೊರ ದೇಶಕ್ಕೆ ಹೋಗುವುದೇ ಅಭ್ಯಾಸವಾಯಿತು.

ಶೋಷಿಸಲ್ಪಟ್ಟ ವಂಚಿಸಲ್ಪಟ್ಟ ಭಾರತದ ಮಕ್ಕಳಿಗಾಗಿ ಮೋದಿ ಜಾರಿಗೆ ತಂದ ರೈಟ್ ಟು ಇನ್ಫಾರ್ಮೇಶನ್ ಆಕ್ಟ್ ಅರ್ಥಾತ್ ಆರ್ಟಿಐ ಕಾಯ್ದೆಯ ಮೂಲಕ ಈಗ ದೇಶದ ಪ್ರತಿಯೊಬ್ಬ ಪ್ರಜೆಯೂ ಸರಕಾರದ ಆಗು ಹೋಗುಗಳನ್ನು ತಿಳಿದುಕೊಳ್ಳಬಹುದು, ಪ್ರಶ್ನಿಸಬಹುದು. ಆಹಾರ ಭದ್ರತಾ ಕಾಯ್ದೆಯ ಮೂಲಕ ಹಸಿದು ಕುಳಿತದ್ದರ ಬಗ್ಗೆ ಯಾವ ಪ್ರಜೆಯೂ ಸರಕಾರವನ್ನು ಕೋರ್ಟಿಗೆ ಎಳೆಯಬಹುದು. ಇನ್ನೂ ಸ್ವಾರಸ್ಯಕರ ವಿಚಾರವೆಂದರೆ , ಹಿಂದೆ ಇದ್ದ ನಾಲಾಯಕ್ ಸರಕಾರಗಳು ಕೈಗಾರಿಕೆ ಮಾಡಿಸ್ತೇವೆ ಅಂತ ಬಂಬಿಸಿ ದೊಡ್ಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಗಳಿಗೆ ಮೋಸ ಮಾಡಿದ್ದ ಸುಮಾರು ಇಪ್ಪತ್ತು ಸಾವಿರ ಕೋಟಿಯನ್ನೂ ಮೋದಿ ದೇಶದ ಬ್ಯಾಂಕ್ ಗಳಿಂದ ತೆಗೆದು ಅವರಿಗೆ ವಾಪಸ್ ಕೊಡುವ ಮೂಲಕ ಮರ್ಯಾದಿ ಹೋಗದ ಹಾಗೆಯೂ ನೋಡಿಕೊಂಡರು.

ಇದು ಇಷ್ಟು ನಿಮಗೆಲ್ಲರಿಗೆ ಕಣ್ಣಾರೆ ನೋಡಬಹುದಾದ ಮೋದೀಜಿ ಮಾಡಿದ ಮಹತ್ತರ ಕೆಲಸಗಳು. ಆದರೆ ಇಷ್ಟೆಲ್ಲ ಮಾಡಲು ಹಣ ಹೇಗೆ ಹೊಂದಿಸಿದಿರಿ ಎಂದು ಮೋದೀಜಿಯ ಬಳಿ ನೀವೇನಾದರೂ ಕೇಳಿದರೆ,ಅವರು ಮುಗ್ಧವಾಗಿ ನಗುತ್ತಾರೆ.ಅಷ್ಟು ಟ್ರಿಲಿಯನ್ ಟ್ರಿಲಿಯನ್ ಟ್ರಿಲಿಯನ್ ಇಂಟು ಮುನ್ನೂರು ಕೋಟಿ ಡಾಲರ್ ಸಲ ಹಣವನ್ನು ಒಟ್ಟುಗೂಡಿಸಲು ಪಟ್ಟ ಕಷ್ಟ ದೇಶಕ್ಕಾಗಿ ಏನೇನೂ ಅಲ್ಲ ಎಂದು ಮೋದಿ ನಗುವಾಗ ಅವರ ತ್ಯಾಗದ ಖುಷಿಯೇ ಬೇರೆ.
ಇದರ ಮೇಲೆಯೂ ಅವರ ಹತ್ರ ಚಿನ್ನದ ರಸ್ತೆ, ಹದಿನೈದು ಲಕ್ಷ, ಪಾಕಿಸ್ತಾನಕ್ಕೆ ಜವಾಬು ಕೊಡಿ, ಚೈನಾಕ್ಕೆ ಹೋಗಿ ಲವ್ ಮಾಡಿ ಬರಬೇಡಿ ಅಂತ ಎಲ್ಲ ಕೇಳುವ ಕೆಲವರು ನಿಜಕ್ಕೂ ಅವರಿಗೆ ಮಾಡುವ ಅದ್ವಾನ. ಅವರಿಗೆ ಕಾಲವೇ ಉತ್ತರಿಸಲಿ ಬಿಡಿ.
ನಿಮಗೆ ದೇಶಪ್ರೇಮ ಇದ್ದರೆ , ನಿಮಗೆ ಶಾಲೆ , ರಸ್ತೆ, ವಿದ್ಯೆ, ನೀವು ಇದನ್ನು ಓದುವ ತರಂಗಗುಚ್ಚ ಎಲ್ಲ ಹೇಗೆಲ್ಲಾ ದುಡ್ಡು ಅಡ್ಜಸ್ಟ್ ಮಾಡಿ ವ್ಯವಸ್ಥೆ ಮಾಡಿದ ಮೋದೀಜಿಯ ಕೆಲಸಗಳನ್ನು ಶೇರ್ ಮಾಡಿ.

ನಿವೇದನೆ: ಬ್ರಿಟೀಷರು ಮುನ್ನೂರು ವರ್ಷ ದೋಚಿದ ರಾಷ್ಟ್ರದಲ್ಲಿಯೂ ನನಗೆ ವಿದ್ಯೆ , ನೆರಳು, ಅನ್ನ ತಿನ್ನುವ ಮಟ್ಟಕ್ಕೆ ಬೆವರು ಸುರಿಸಿ ತೆರಿಗೆ ಕಟ್ಟಿ ಈ ದೇಶವನ್ನು ಬೆಳೆಸಿದ ನನ್ನ ದೇಶದ ಹಿರಿಯರ ತ್ಯಾಗಗಗಳನ್ನು ಸುಳ್ಳು ಮಾಡಿ, ಈ ಮಣ್ಣಿನ ಮುಗ್ಧ ಯುವ ಸಮೂಹವನ್ನು ವಂಚಿಸುವವರ ದಗಲ್ಬಾಜಿಗಳ ವಿರುದ್ಧ ಬರೆಯದೇ ಉಳಿಯುವ ಅಕ್ಷರ ಆತ್ಮದ್ರೋಹವಾದೀತು. ಇಲ್ಲಾ ನಿಮ್ಮ ಸುಳ್ಳುಗಳಿಗೆ ಈ ದೇಶದ ನವಪೀಳಿಗೆ ಬಲಿಯಾಗುವುದನ್ನು ನೋಡಿ ಕೈ ಕಟ್ಟಿ ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ಈ ಮಣ್ಣಿನ ಋಣದ ಮೇಲಾಣೆ !!

ಲೇಖನ: ಕಂದ (ಜಸ್ಟ್ ಶಾಫಿ)

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group