ಭರವಸೆಗಳನ್ನು ಈಡೇರಿಸದ ಮೋದಿ ಆಡಳಿತ ತೃಪ್ತಿ ತಂದಿಲ್ಲ: ಪೇಜಾವರ ಸ್ವಾಮೀಜಿ

ವರದಿಗಾರ( ಜೂ.1): ಚುನಾವಣಾ ಪೂರ್ವ ನೀಡಿದ್ದ ಭರವಸೆಗಳು ಮತ್ತು ಆಶ್ವಾಸನೆಗಳನ್ನು ಕೇಂದ್ರ ಸರಕಾರ ಪೂರೈಸಿಲ್ಲ ಮತ್ತು ನಾಲ್ಕು ವರ್ಷಗಳ ಆಡಳಿತವು ನಿರೀಕ್ಷಿತ ಮಟ್ಟದಲ್ಲಿ ತೃಪ್ತಿ ತಂದಿಲ್ಲ ಎಂದು ಪೇಜಾವರ ಸ್ವಾಮೀಜಿಗಳು ಹೇಳಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣವಾದರೂ ವಿದೇಶಗಳಿಂದ ಕಪ್ಪುಹಣವನ್ನು ಹೊರತರದಿರುವುದು ಹಾಗೂ ಗಂಗಾ ಶುದ್ಧೀಕರಣ ಆಗದಿರುವುದು ಮೋದಿ ಸರಕಾರಕ್ಕೆ ಹಿನ್ನಡೆ ಎಂದು ಹೇಳಿದ್ದಾರೆ.
ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ವಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕಿಂತಲೂ, ಗಂಗಾ ನದಿಯ ಶುದ್ದೀಕರಣ ಇಂದಿನ ಅಗತ್ಯ ಎಂದು ಸ್ವಾಮೀಜಿ ಒತ್ತಿ ಹೇಳಿದ್ದಾರೆ.
