ರಾಜ್ಯ ಸುದ್ದಿ

ದನದ ವ್ಯಾಪಾರಿ ಹುಸೇನಬ್ಬರ ನಿಗೂಢ ಸಾವು : ಘಟನಾ ಸ್ಥಳದ ಚಿತ್ರಗಳು ಸಂಶಯಗಳನ್ನು ದಟ್ಟವಾಗಿಸುತ್ತಿದೆಯೇ ?

ವರದಿಗಾರ ( ಜೂ 1) : ಇತ್ತೀಚೆಗೆ ಉಡುಪಿಯ ಪೆರ್ಡೂರು ಸಮೀಪ ನಿಗೂಢವಾಗಿ ಮೃತಪಟ್ಟಿದ್ದ ದನದ ವ್ಯಾಪಾರಿ ಹುಸೇನಬ್ಬ ಜೋಕಟ್ಟೆಯವರ ಸಾವಿನ ಕುರಿತಾಗಿ ಜಿಲ್ಲೆಯ ಜನರಿಗಿರುವ ಸಂಶಯಗಳು ಮುಂದುವರೆದಿರುವಂತೆಯೇ, ‘ವರದಿಗಾರ‘ ತಂಡಕ್ಕೆ ಲಭಿಸಿರುವ ಮೃತದೇಹ ಪತ್ತೆಯಾದ ಘಟನಾ ಸ್ಥಳದ ಚಿತ್ರಗಳು ಜನರ ಸಂಶಯಗಳನ್ನು ಇನ್ನಷ್ಟು ಗಾಢವಾಗಿಸುತ್ತಿದೆ. ಕಳೆದ 20 ವರ್ಷಗಳಿಂದ ಸಕ್ರಮವಾಗಿ ದನದ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ ಹುಸೇನಬ್ಬರವರು ಮೇ 30 ರಂದು ಬೆಳಗಿನ ಜಾವ ಪೆರ್ಡೂರಿನಿಂದ ದನಗಳನ್ನು ತುಂಬಿಸಿಕೊಂಡು ಬರುತ್ತಿದ್ದಾಗ ಶೀನರಬೆಟ್ಟು ಎಂಬಲ್ಲಿ ಬಜರಂಗದಳದ ಗೂಂಡಾಗಳು ಹುಸೇನಬ್ಬ ಮತ್ತು ತಂಡ ಇದ್ದ ವಾಹನವನ್ನು ಅಡ್ಡಗಟ್ಟಿತ್ತು. ಈ ವೇಳೆ ಕೂಡಲೇ ತಮ್ಮ ವಾಹನವನ್ನು ರಿವರ್ಸ್ ತೆಗೆದುಕೊಂಡು ಹಿಂದಕ್ಕೆ ಚಲಾಯಿಸಿಕೊಂಡು ಹೋದ ಚಾಲಕ ಸ್ವಲ್ಪ ದೂರದಲ್ಲೇ ವಾಹನದ ನಿಯಂತ್ರಣ ತಪ್ಪಿದಾಗ ವಾಹನದಲ್ಲಿದ್ದವರು ಜಿಗಿದು ಪರಾರಿಯಾಗಿದ್ದರು. ಅದರಲ್ಲಿದ್ದವರು ಎಲ್ಲರೂ ಸುರಕ್ಷಿತವಾಗಿ ತಮ್ಮ ಊರು ತಲುಪಿದ್ದರೆ ಹುಸೇನಬ್ಬನವರು ಮಾತ್ರ ಕಾಣದಾಗಿದ್ದರು. ನಂತರ ಬುಧವಾರ ಬೆಳಗ್ಗೆ 9 ರ ಸುಮಾರಿಗೆ ಅಲ್ಲೇ ಸಮೀಪದ ತೋಟವೊಂದರಲ್ಲಿ ಹುಸೇನಬ್ಬರ ಮೃತದೇಹ ಪತ್ತೆಯಾಗಿತ್ತು.

ಈ ಘಟನೆಯ ನಂತರ ಪೊಲೀಸರು ದನ ಸಾಗಾಟದ ವಾಹನವನ್ನು ತಡೆದಿದ್ದು ನಾವೇ ಎಂಬ ಹೇಳಿಕೆ ಕೊಟ್ಟಿದ್ದರು. ಆದರೆ ವಾಹನದಲ್ಲಿದ್ದವರ ಹೇಳಿಕೆಯ ಪ್ರಕಾರ ಘಟನಾ ಸ್ಥಳದಲ್ಲಿ ಬಜರಂಗದಳ ಗೂಂಡಾಗಳೊಂದಿಗೆ ಹಿರಿಯಡ್ಕ ಠಾಣೆಯ ಕೆಲ ಪೊಲೀಸರೂ ಕೂಡಾ ಇದ್ದರೆಂದು ತಿಳಿಸಿದ್ದರು. ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಇದು ಬಜರಂಗದಳದ ಗೂಂಡಾಗಳಿಂದ ನಡೆದ ಹತ್ಯೆ ಎಂದು ಆರೋಪಿಸಿದ್ದರು. ಹುಸೇನಬ್ಬರ ನಿಗೂಢ ಸಾವಿನ ಕುರಿತು ಮೃತರ ತಮ್ಮ ಮುಹಮ್ಮದ್ ಎಂಬವರು, ಬಜರಂಗದಳದ ಗೂಂಡಾ ಸೂರಿ ಯಾನೆ ಸೂರ್ಯ ಮತ್ತು ತಂಡದಿಂದ ಹುಸೇನಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಹಿರಿಯಡ್ಕ ಠಾಣೆಯಲ್ಲಿ ದೂರು ನೀಡಿದರು. ಈ ನಡುವೆ ಹುಸೇನಬ್ಬನವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದೂ ಕೂಡಾ ಕೆಲವರು ಅಭಿಪ್ರಾಯಪಟ್ಟಿದ್ದರು. ಈ ಎಲ್ಲಾ ಘಟನೆಗಳ ನಂತರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿಯವರು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ಸೈ ಡಿ ಎನ್ ಕುಮಾರ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದರು.

ಶನಿವಾರ ಮದ್ಯಾಹ್ನದ ವರೆಗೆ ಕಾಯಿರಿ ; ಎಸ್ಪಿ ಲಕ್ಷ್ಮಣ್ ನಿಂಬರಗಿ : ಈ ಚಿತ್ರಗಳ ಕುರಿತು ‘ವರದಿಗಾರ‘ ತಂಡ ದಕ್ಷ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿವೆತ್ತ ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರಗಿಯವರ ಅಭಿಪ್ರಾಯ ಕೇಳಿದಾಗ, ಈಗ ಎಲ್ಲವೂ ತನಿಖೆಯ ಹಂತದಲ್ಲಿದ್ದು, ನೀಡುವ ಮಾಹಿತಿಗಳು ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆಗಳಿವೆ. ಆದುದರಿಂದ ನಾವೀಗ ತನಿಖೆಯ ನಿರ್ಣಾಯಕ ಹಂತ ತಲುಪಿದ್ದು, ಶನಿವಾರ ಮದ್ಯಾಹ್ನದ ವೇಳೆಗೆ ಘಟನೆಯ ಕುರಿತು ಸ್ಪಷ್ಟ ಚಿತ್ರಣ ನೀಡಲಿದ್ದೇವೆ ಎಂದು ವಿಶ್ವಾಸಭರಿತರಾಗಿ ಹೇಳಿದ್ದಾರೆ.

ಸಂಶಯ ದಟ್ಟವಾಗಿಸುವ ಘಟನಾ ಸ್ಥಳದ ಚಿತ್ರಗಳು :  ಮರಣೋತ್ತರ ವರದಿಗಾಗಿ ಕಾಯುತ್ತಿರುವ ಈ ವೇಳೆಯಲ್ಲಿ ಹುಸೇನಬ್ಬನವರ ಸಾವು ಯಾವ ರೀತಿ ಸಂಭವಿಸಿತು ಎಂದು ನಿರ್ಧಿಷ್ಟವಾಗಿ ಹೇಳುವುದು ಈಗ ಅಸಾಧ್ಯವಾದರೂ, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳುವ ಕೆಲವರ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿದೆ ಮೃತದೇಹ ದೊರಕಿದ ಸ್ಥಳದಲ್ಲಿನ ಚಿತ್ರಗಳು. ಹುಸೇನಬ್ಬರ ಮೈ ಮೇಲಿನ ವಸ್ತ್ರಗಳು ಚಲ್ಲಾಪಿಲ್ಲಿಯಾಗಿರುವುದು, ಸ್ಥಳದಲ್ಲಿರುವ ಹುಲ್ಲು ಮತ್ತು ಗಿಡಗಂಟಿಗಳು ಅಸ್ತವ್ಯಸ್ತವಾಗಿರುವುದು ಕಂಡು ಬರುತ್ತಿದೆ. ಇಷ್ಟೆಲ್ಲಾ ನಡೆದಿದ್ದರೂ ಹುಸೇನಬ್ಬರ ಸಣ್ಣ ಮೊಬೈಲ್ ಫೋನ್ ಮಾತ್ರ ಯಾರೋ ಕಿಸೆಯಲ್ಲಿ ತಂದಿಟ್ಟ ರೀತಿಯಲ್ಲಿ ಭದ್ರವಾಗಿದೆ !!

ಒಟ್ಟಿನಲ್ಲಿ ಹಿರಿಯ ಜೀವವೊಂದು ಗೋ ರಕ್ಷಣೆಯ ಹೆಸರಿನಲ್ಲಿ ಗೂಂಡಾಗಳ ದಾಳಿಗೊಳಗಾಗಿ ಜೀವ ಕಳಕೊಂಡಿದೆ. ಕುಟುಂಬಿಕರು ಹಾಗೂ ಊರ ನಾಗರಿಕರು ಇನ್ನೂ ಹುಸೇನಬ್ಬರ ಸಾವಿನ ಕುರಿತಾಗಿ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ನಿಷ್ಪಕ್ಷಪಾತೀ ತನಿಖೆಯಲ್ಲಿ ಮಾತ್ರ ಸತ್ಯಾಂಶ ಬಯಲಾಗಬಹುದು. ಹಾಗಾದಲ್ಲಿ ಮಾತ್ರ ಸಂತ್ರಸ್ತ ಕುಟುಂಬದ ನ್ಯಾಯದ ಕೂಗಿಗೆ ಜಯ ಸಿಗಬಹುದಾಗಿದೆ. ಹುಸೇನಬ್ಬರ ಸಾವು ಹೇಗೆಯೇ ಸಂಭವಿಸಿರಲಿ, ಆದರೆ ಗೋ ರಕ್ಷಣೆಯ ಹೆಸರಿನಲ್ಲಿ ಹುಸೇನಬ್ಬರಿಗೆ ಆ ಪರಿಸ್ಥಿತಿ ತಂದೊಡ್ಡಿದ ಸಮಾಜ ವಿರೋಧಿ ದುಷ್ಟ ಶಕ್ತಿಗಳ ಹೆಡೆಮುರಿ ಕಟ್ಟಬೇಕಾಗಿದೆ. ಇವೆಲ್ಲವೂ ನ್ಯಾಯಪಾಲಕರ ತನಿಖೆಯ ಹಾದಿಯನ್ನು ಅವಲಂಬಿಸಿದೆ ಅಷ್ಟೆ. ತನ್ನ ದಕ್ಷ ಕಾರ್ಯಕ್ಷಮತೆಯ ಮೂಲಕ ಪ್ರಾಮಾಣಿಕ ಹಾಗೂ ದಿಟ್ಟ ಐಪಿಎಸ್ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ಲಕ್ಷ್ಮಣ್ ನಿಂಬರಗಿಯಂತಹ ಮೇಲಧಿಕಾರಿಯ ಮೇಲೆ ಸಾರ್ವಜನಿಕರು ಹೆಚ್ಚಿನ ಭರವಸೆ ಇಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಎಸ್ಪಿ ನಿಂಬರಗಿಯವರು ಹೆಚ್ಚಿನ ಆಸ್ಥೆ ವಹಿಸಿ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದರೆ ಖಂಡಿತವಾಗಿಯೂ ಸತ್ಯಾಂಶ ಬಯಲಾಗಲಿದೆ. ಮಾತ್ರವಲ್ಲ ಸ್ಥಳೀಯ ನಾಗರಿಕರು ಆರೋಪಿಸುವಂತೆ ಸಮಾಜ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಹಿರಿಯಡ್ಕ ಪೊಲೀಸ್ ಠಾಣೆಯ ಕೆಲ ಪೊಲೀಸರ ನೈಜ ಮುಖದರ್ಶನವೂ ಆ ಮೂಲಕ ಆಗುವುದರಲ್ಲಿ ಸಂಶಯವಿಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group