ನಿಮ್ಮ ಬರಹ

ಸಿದ್ದರಾಮಯ್ಯ ಎಂಬ ಗಂಡೆದೆ ನಾಯಕನ ಆಡಳಿತದ ಕೊನೆ ಹಾಗು ಕಾಂಗ್ರೆಸ್ ಸೋಲಿನ ಆತ್ಮಾವಲೋಕನದ ಒಂದು ಚಿತ್ರಣ…

✍ನೌಶಾದ್ ಕಲಂದರ್ ಕರ್ನಿರೆ

ನಾಡ ದೊರೆ ಎಂದೇ ಜನರ ಪ್ರೀತಿಗೆ ಪಾತ್ರವಾದ ಸಿದ್ದರಾಮನ ಹುಂಡಿ ಎಂಬ ಸಣ್ಣ ಹಳ್ಳಿಯ ಸಿದ್ದರಾಮಯ್ಯ ಎಂಬ ಗಂಡೆದೆಯ,  ಧೈರ್ಯಶಾಲಿ ನಾಯಕನ ಜನಪರ ಆಡಳಿತ ಹಾಗು ಭೃಷ್ಟಾಚಾರ ತಂಟೆ ತಕರಾರಿಲ್ಲದ ಆಡಳಿತವನ್ನು ಕೊಟ್ಟ, 5 ವರುಷ ಪೂರೈಸಿದ ಒಬ್ಬ ಮುಖ್ಯಮಂತ್ರಿ ಈ ರೀತಿಯಾಗಿ ಸೊಲುವುದು ಎಂದರೆ ಕಾಂಗ್ರೆಸ್ ತನ್ನ ತಪ್ಪುಗಳನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡುವುದಕ್ಕೆ ಸಕಾಲವಾಗಿದೆ. ದಲಿತ ದಮನಿತ ಬಡವರ ಪರ ನೂರಾರು ಯೋಜನೆಗಳನ್ನು ಜಾರಿಗೆ ತಂದು ಹಸಿದವರಿಗೆ ಅನ್ನಭಾಗ್ಯ ನೀಡಿ ರಾಜ್ಯವನ್ನು ಹಸಿವು ಮುಕ್ತವನ್ನಾಗಿಸಿ ಎಲ್ಲರ ಪ್ರೀತಿಗೆ ಪಾತ್ರರಾದ ಒಬ್ಬ ಮುಖ್ಯಮಂತ್ರಿ ಸೋಲುವುದೆಂದರೆ ರಾಜ್ಯದ ಜನರಿಗೇ ಒಂದು ನಾಚಿಕೆಗೇಡಿನ ವಿಷಯ. ಅದೇನೇ ಇರಲಿ ಸೋಲು ಸೋಲೇ ಆದರೆ ಕಾಂಗ್ರೆಸ್ ನಿಜವಾಗಿಯೂ ಎಡವಿದ್ದೆಲ್ಲಿ ? ಈ ಕುರಿತಾಗಿ ಒಂದು ಅವಲೋಕನ

ಜಾತ್ಯತೀತ ಮತಗಳ ಕ್ರೋಡೀಕರಣದಲ್ಲಿ ವಿಫಲತೆ

ರಾಜ್ಯದಲ್ಲಿ ಜಾತ್ಯತೀತ ಪಕ್ಷ ಎಂಬ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ತನ್ನ ತೆಕ್ಕೆಯಲ್ಲಿರುವ ಜಾತ್ಯತೀತ ಮತಗಳನ್ನು ಕಾಲ ಕಾಲಕ್ಕೆ ಕಳಕೊಳ್ಳುತ್ತಾ ಬರುತ್ತಾ ಇದೆ. ಅಹಿಂದ ವರ್ಗಗಳ ಮತಗಳನ್ನು ಹರಿದು ಹಂಚಿ ಕೋಮು ವಿಷವನ್ನು ಬಿತ್ತುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ಒಳಸಂಚನ್ನು ಅರಿಯುವಲ್ಲಿ ಹಾಗು ಅದನ್ನು ಭೇದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಉದಾಹರಣೆಗೆ ರಾಜ್ಯದಲ್ಲಿ ಉದಯವಾದ ಕೆಲ ಸಣ್ಣ ಪುಟ್ಟ ಪಕ್ಷಗಳು ಕಾಂಗ್ರೆಸ್ಸಿನ ಮತ ಬ್ಯಾಂಕುಗಳಾಗಿದ್ದವು ಆದರೆ ಕಾಲ ಕ್ರಮೇಣ ತನ್ನ ಅಹಂಕಾರದ ಹಾಗು ಉದಾಸೀನ ನಿಲುವುಗಳಿಂದ ಇವುಗಳನ್ನು ಕಳಕೊಳ್ಳ ಬೇಕಾಯಿತು.

ಕಾರ್ಯಕರ್ತರಲ್ಲಿನ ಇಚ್ಚಾಶಕ್ತಿಯ ಕೊರತೆ

ಇಂದಿನ ಈ ಸೋಲಿಗೆ ಬಹುಮುಖ್ಯ ಕಾರಣಗಳಲ್ಲೊಂದು,  ಮುಖ್ಯಮಂತ್ರಿ ಅಥವಾ ಸಚಿವರ ತಂಡಗಳು ಎಷ್ಟೇ ಜನಪರ ಆಡಳಿತ ನಡೆಸಿದರೂ ಅವುಗಳನ್ನು ಮತದಾರ ಪ್ರಭುವಿಗೆ ಮನಮುಟ್ಟುವಂತೆ ತಲುಪಿಸುವ ಕಾರ್ಯ ಪ್ರಮುಖವಾಗಿ ಸ್ಥಳೀಯ ಪಕ್ಷದ ಮುಖಂಡರುಗಳು ಹಾಗು  ಕಾರ್ಯಕರ್ತರದ್ದಾಗಿರುತ್ತದೆ. ಈ ಕಾರ್ಯದಲ್ಲಿ ಕಾಂಗ್ರೆಸ್ ಎಡವಿದೆ. ತಳಮಟ್ಟದಲ್ಲಿ ಆತ್ಮಾರ್ಥವಾಗಿ ಯಾವುದೇ ಸ್ವಾರ್ಥವಿಲ್ಲದೆ ಕೆಲಸ ಮಾಡುವ ಕಾರ್ಯಕರ್ತರು ಕೇವಲ ಬೆರಳೆಣಿಕೆಯಷ್ಟೇ ಕಾಂಗ್ರೆಸ್ಸಿನಲ್ಲಿ ಸಿಗಬಹುದು. ಕಾಂಚಾಣದ ತಾಳಕ್ಕೆ ಕುಣಿಯುವ ಹಾಗು ಸ್ವಾರ್ಥಸಾಧನೆಗಾಗಿ ಕಾಂಗ್ರೆಸ್ಸಿನ ಬಾಲ ಹಿಡಿದು ನೇತಾಡುವ ಹಲವಾರು ಮಂದಿಯನ್ನು ನಾವು ಕಣ್ಣೆದುರೇ ಕಾಣಬಹುದು.

ಪ್ರತಿರೋಧದ ಭಯ ಹಾಗು ಮೃದು ಹಿಂದುತ್ವ

ಫ್ಯಾಸಿಸ್ಟ್ ಶಕ್ತಿಗಳು ಭಾರತದಲ್ಲಿ ಈ ಮಟ್ಟಕ್ಕೆ ಬೆಳೆದು ಒಂದು ಕಡೆ ಪ್ರಜಾಪ್ರಭುತ್ವದ ಬುನಾದಿಗೇ ಕೊಡಲಿಯೇಟು ನೀಡಲು ಹೊರಟಿರುವುದು ನಮಗೆಲ್ಲ ತಿಳಿದ ವಿಷಯ.  ಕಾರಣ ಯಾರು ?  ಮತ್ತೆ ಅದೇ ಕಾಂಗ್ರೆಸ್ !! ಒಂದು ಕಡೆ ಮಗುವನ್ನು ಚಿವುಟಿ ಮತ್ತೊಂದು ಕಡೆಯಿಂದ ಮುದ್ದಿಸಿ ದೇಶದಲ್ಲಿ ಕೋಮು ಶಕ್ತಿಗಳನ್ನು ನಿಧಾನವಾಗಿ ಉಳಿಸಿ ಬೆಳೆಸಿದ್ದೇ ಕಾಂಗ್ರೆಸ್. ತಾನು ಜಾತ್ಯತೀತ ಹಣೆಪಟ್ಟಿಯನ್ನು ಹಾಗೂ ತನ್ನ ತತ್ವ ಸಿದ್ಧಾಂತಗಳ ಅಡಿಯಲ್ಲಿ ಮುಂದುವರಿದು ಕೆಲಸಮಾಡಿದ್ದೆ ಆದಲ್ಲಿ ದೇಶದ ಪರಿಸ್ಥಿತಿ ಇಂದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಆಡಳಿತ ವಿರೋಧಿ ಅಲೆ ಇಲ್ಲದ ಜನಪರ ಮುಖ್ಯಮಂತ್ರಿಯೊಬ್ಬರು ಈ ರೀತಿ ಸೋಲುತ್ತಿರಲಿಲ್ಲ .

ಕೊಲೆ ರಾಜಕಾರಣ ಹಾಗು ಅದನ್ನು ಭೇದಿಸಿದ ವಾಸ್ತವಗಳನ್ನು ಜನರ ಮುಂದೆ ಇಡುವಲ್ಲಿ ಕಾಂಗ್ರೆಸ್ ನ ವೈಫಲ್ಯ

ರಾಜ್ಯದಾದ್ಯಂತ ನಡೆದ ಹಲವಾರು ಕುಟುಂಬ ಕಲಹದ ಕೊಲೆಗಳು ರಾಜಕೀಯ ಕೊಲೆಗಳು ಹಾಗು ಇನ್ನಿತರ ಕೊಲೆ ಪ್ರಕರಣಗಳನ್ನು ಬಿಜೆಪಿ ತನ್ನ ಹಿಂದುತ್ವದ ರಾಜಕೀಯ ದಾಳವಾಗಿ ಶವ ಮುಂದಿಟ್ಟು ಆ ಶವದ ಮೇಲಿನ ತನ್ನ ಕೊಳಕು ಮತ ಬೇಟೆಯನ್ನು ಆರಂಬಿಸಿತು. ಎಲ್ಲಾ ಕೊಲೆಗಳಿಗೂ ಕಾಂಗ್ರೆಸ್ಸಿನ ಹಿಂದೂ ವಿರೋಧಿ ನೀತಿ ಕಾರಣ ಎಂಬಂತೆ ಎಂಜಲು ಬಿಸ್ಕೀಟ್ ತಿಂದ ಮಾಧ್ಯಮಗಳ ಸಹಾಯದಿಂದ ರಾಜ್ಯದ ಜನತೆಯ ಮುಂದೆ ಹೇಸಿಗೆ ರಾಜಕಾರಣ ಶುರುವಿಟ್ಟಾಗ ಇದಕ್ಕೆ ಪ್ರತಿರೋಧವಾಗಿ ಕಾಂಗ್ರೆಸ್ ಈ ಎಲ್ಲಾ ಕೊಲೆಗಳ ರೂವಾರಿಗಳನ್ನೂ ತಳಮಟ್ಟದಲ್ಲಿ ಮೂಲಗಳನ್ನು ಹುಡುಕಿ ರಾಜ್ಯದ ಜನರ ಮುಂದೆ ಸತ್ಯ ಬಯಲಿಡುವಲ್ಲಿ ವಿಫಲವಾಯಿತು.

ಕಾಂಗ್ರೆಸ್ ನ ಆಂತರಿಕ ಶೀತಲ ಸಮರ

ಬಿಜೆಪಿಯ ಬೀದಿ ರಾಜಕೀಯ ದೊಂಬರಾಟದಂತೆ ಕಾಂಗ್ರೆಸ್ ಕೂಡ ಒಳಗೊಳಗೇ ನಾಯಕರ ಅಸಮಾಧಾನ ಹಾಗು ಬಣಗಳಿಂದ ತನ್ನ ಶಕ್ತಿ ಪ್ರದರ್ಶಿಸುವಲ್ಲಿ ಎಡವಿತು. ಒಂದು ಕಡೆ ಅಹಿಂದ ವರ್ಗಗಳ ನಾಯಕರಾದ ಸಿದ್ದು ವಲಸಿಗ ಎಂಬ ಭಾವನೆ ಹಿರಿಯ ಕಾಂಗ್ರೆಸ್ ಮುಖಂಡರಲ್ಲಿ ಯಾವತ್ತೂ ಇತ್ತು. ಸಿದ್ದು ವರ್ಚಸ್ಸು ಹಾಗು ಜನಪ್ರಿಯತೆ ಮೂಲ ಕಾಂಗ್ರೆಸ್ಸಿಗರ ನಿದ್ದೆ ಕೆಡಿಸುವಂತೆ ಮಾಡಿತ್ತು. ಇದಕ್ಕೆ ಪೂರಕವಾಗಿ ಮತದಾನದ ನಂತರ ಸಿದ್ದರಾಮಯ್ಯನವರ ಹೇಳಿಕೆ ಕೂಡ ಇದಕ್ಕೆ ಪುಷ್ಟಿ ನೀಡುವಂತಿತ್ತು.

ಇ ವಿ ಯಂ ನ ದುರುಪಯೋಗ

ಚುನಾವಣೆಯಲ್ಲಿ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಹಲವಾರು ಕಡೆ ಅಥವಾ ರಾಜ್ಯದ ಎಲ್ಲೆಡೆ ಈ ಚುನಾವಣೆಯಲ್ಲಿ ಈ ವಿ ಯಂ ಯಂತ್ರ ದ ಬಗೆಗಿನ ಅಪಸ್ವರ ಕೇಳಿ ಬರುತ್ತಿದೆ. ಅದಕ್ಕೆ ಕಾರಣಗಳೂ ಇವೆ. ಹಲವೆಡೆ ಮತದಾನ ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಮತ ಎಣಿಕೆಗೆ ಸಿಕ್ಕಿರುವುದು ಮತ್ತೆ ಕೆಲವು ಕಡೆ ಸೋಲುವ ಭೀತಿಯಲ್ಲಿಯೇ ಇರದ ಜನಪ್ರಿಯ ಶಾಸಕರು ಚಿಲ್ಲರೆ ನಾಯಕರ ಮುಂದೆ ಸೋತಿರುವುದು. ಈ ರೀತಿ ಜನಮೆಚ್ಚಿದ ಆಡಳಿತ ಕೊಟ್ಟೂ ಜನಾದೇಶ ಸರ್ಕಾರದ ವಿರುದ್ಧ ಬಂದಿದ್ದೂ ಯಂತ್ರವನ್ನು ಸಂಶಯದ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ. ಕೆಲವು ತಿಂಗಳ ಹಿಂದಿನ ತ್ರಿಪುರ ಚುನಾವಣಾ ಕೂಡ ಇದಕ್ಕೆ ಪೂರಕವಾದ ವಾದವನ್ನು ಮಂಡಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಯ ಒಳಗೊಳಗೆ ಭಿನ್ನಮತ ಇದ್ದರೂ ಅಭ್ಯರ್ಥಿಗಳೆಲ್ಲರೂ 20 ಸಾವಿರಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಜಯಶಾಲಿಯಾಗುತ್ತಾರೆ ಎಂದರೆ ಜನ ಇ ವಿ ಎಂ ಮೇಲೆ ಅನುಮಾನ ಪಡುವುದರಲ್ಲಿ ತಪ್ಪೇನಿಲ್ಲ. ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ತಂಡವೊಂದು ಹಲವು ಪಕ್ಷಗಳ ಅಭ್ಯರ್ಥಿಗಳನ್ನು ಸಂಪರ್ಕಿಸಿ,  ಮತಯಂತ್ರದಲ್ಲಿ ನಿಮಗೆ ಬೇಕಾದ ಹಾಗೆ ಮಾಡಿಕೊಡುತ್ತೇವೆ, ಹಣ ಈಗ ಬೇಡ ನೀವು ವಿಜಯಿಯಾದ ಮೇಲೆ ಕೊಡಿ ಎಂದು ಹೇಳುವಷ್ಟು ಆತ್ಮವಿಶ್ವಾಸ ಅವರಿಗೆ ಇದೆ ಎಂದಾದರೆ ಈ ಇ ವಿ ಎಂ ಯಂತ್ರ ಭೇದಿಸಲು ಸಾಧ್ಯವಾಗದ ವಸ್ತುವೇನಲ್ಲ ಎಂದು ಸಾಬೀತಾಗುತ್ತದೆ. ಆರೋಪಿಗಳನ್ನು ಸ್ಥಳೀಯರು ಹಿಡಿದುಕೊಟ್ಟರೂ ಚುನಾವಣಾ ಆಯೋಗ ಹಾಗೂ ಪೊಲೀಸರು ಆ ಕುರಿತು ಹೆಚ್ಚಿನ ತನಿಖೆಗೆ ಮುಂದಾಗದೆ ಪ್ರಕರನವನ್ನು ಮುಚ್ಚಿಬಿಡುತ್ತಾರೆ, ಇತರೆ ಪಕ್ಷಗಳು ಈ ಕುರಿತು ಧ್ವನಿ ಎತ್ತದಂತಹಾ ಪರಿಸ್ಥಿತಿ ಇದೆ. ಇನ್ನು ವಿಜಯಪುರದಲ್ಲಿ ವಿವಿ ಪ್ಯಾಟ್ ಬಾಕ್ಸ್ ಗಳು ಯಾವುದೋ ಕಾರ್ಮಿಕರ ಶೆಡ್ ನಲ್ಲಿ ಪತ್ತೆಯಾದರೂ ಪಕ್ಷಗಳೆಲ್ಲವೂ ಜಾಣ ನಿದ್ರೆಗೆ ಜಾರಿವೆ. ಆದರೆ ಕೊನೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ, ಕನಿಷ್ಟ 30 ಕ್ಕೂ ಹೆಚ್ಚಿನ ಮತ ಯಂತ್ರಗಳನ್ನು ದುರುಪಯೋಗಪಡಿಸಲಾಗಿದೆ ಎಂದು ಹೇಳಿರುವುದು, ಕಾಂಗ್ರೆಸ್ ಕೂಡಾ ಈ ಕುರಿತು ಗಂಭೀರವಾದ ತನಿಖೆಗೆ ಮುಂದಾಗಿದೆ ಎಂಬುವುದರ ದ್ಯೋತಕವಾಗಿದೆ ಮತ್ತು ಈ ಬೆಳವಣಿಗೆ ಆಶಾದಾಯಕವೂ ಆಗಿದೆ.

ಕಾಂಗ್ರೆಸ್ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಅನುಭವವಾಗಿದೆ. ಒಂದೆಡೆ ವೈಜ್ಞಾನಿಕವಾಗಿ ತಂತ್ರಜ್ಞಾನ ಬಳಸಲು ಮುಂದಾದಾಗ ಮತ್ತೊಂದೆಡೆಯಲ್ಲಿ ಅದಕ್ಕೆ ಮಾರಕವಾದ ಕೆಲವು ತಂತ್ರಜ್ಞಾನಗಳನ್ನು ಮನುಷ್ಯ ಕಂಡು ಹಿಡಿಯುವುದು ಇದೇ ಮೊದಲಲ್ಲ. ಅದೇ ರೀತಿ ಕಾಂಗ್ರೆಸ್ ಕೂಡ  ಮತಯಂತ್ರದ ಬಗೆಗಿನ ತನ್ನ ಅಸಮಾಧಾನವನ್ನು ಮತದಾನ ಘೋಷಣೆಯಾಗುವ ಮೊದಲೇ ಚುನಾವಣಾ ಆಯೋಗಕ್ಕೆ ದೂರಿಟ್ಟಿದ್ದರೆ ಅಥವಾ ಮತದಾನ ಬಹಿಷ್ಕರಿಸುವತ್ತ ಹೆಜ್ಜೆ ಹಾಕಿದ್ದರೆ ಇಂದು ಈ ಪರಿಸ್ಥಿತಿ ಕಾಂಗ್ರೆಸ್ಸಿಗೆ ಬರುತ್ತಿರಲಿಲ್ಲ. ಅದೇನೋ ಹೇಳುತ್ತಾರಲ್ಲ ಕೆಟ್ಟ ಮೇಲೆ ಬುದ್ದಿ ಬಂತು ಎಂದು. ಆದರೆ ಇಲ್ಲಿ ಅದಕ್ಕೂ ಮಿಗಿಲಾಗಿ ಕಾಂಗ್ರೆಸ್ಸಿಗೆ ಪದೇ ಪದೇ ಕೆಟ್ಟು ಕೂಡ ಬುದ್ದಿ ಬಂದಿಲ್ಲ ಎನ್ನುವುದೂ ಅಷ್ಟೇ ವಾಸ್ತವ ಕೂಡಾ. ಕೊನೆಯದಾಗಿ ಇನ್ನಾದರೂ  ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಕೇವಲ ಪುಸ್ತಕಕ್ಕೆ ಸೀಮಿತವಾಗಿರಿಸದೆ ಅದನ್ನು ಕಾರ್ಯರೂಪದಲ್ಲಿ ಅಡವಳಿಸುವಲ್ಲಿ ಹೆಜ್ಜೆ ಹಾಕಲಿ ಹಾಗು ಭಾರತೀಯ ಸಂವಿಧಾನ ಹಾಗು ಪ್ರಜಾಪ್ರಭುತ್ವ ಉಳಿಸುವತ್ತ ಮುನ್ನಡೆಯಲಿ ಎಂಬುದೇ ಪ್ರತಿಯೊಬ್ಬ ಜಾತ್ಯಾತೀತ ಪ್ರಜೆಯ ಆಶಯ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group