ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಿರುವ ಯಡಿಯೂರಪ್ಪ ಮಾನಸಿಕ ಅಸ್ವಸ್ಥ: ಸಿದ್ದರಾಮಯ್ಯ

ವರದಿಗಾರ (6.5.2018): ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎನ್ನುತ್ತಿರುವ ಯಡಿಯೂರಪ್ಪ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಹೇಳಿದ್ದಾರೆ. ಮಿಷನ್ 150 ಠುಸ್ಸಾಗಿ ಈಗ ಅದು ಬರೀ 50 ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ಬರೊಬ್ಬರಿ 23 ಕೇಸುಗಳಿದೆ. ಕಳಂಕಿತರನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಕರ್ನಾಟಕದ ಮತದಾರರರು ಅವರನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಜಾತ್ಯಾತೀತ ಮನುಷ್ಯ. ಎಲ್ಲ ಜಾತಿ, ಧರ್ಮಗಳನ್ನು ಪ್ರೀತಿಸುತ್ತೇನೆ. ನನ್ನನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗರಿಗಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿಯು ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ರೈತರಿಗೆ ಏನು ಮಾಡಿದ್ದಾರೆ ಎಂಬುವುದನ್ನು ಜನರಿಗೆ ಹೇಳಲಿ. ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರ ಮಾತಿಗೆ ಕಿಮ್ಮತ್ತಿಲ್ಲ. ಈ ರಾಜ್ಯದ ಜನತೆ ಬುದ್ಧಿವಂತರು. ಯಡಿಯೂರಪ್ಪ ಅವರನ್ನು ಒಪ್ಪಿಕೊಳ್ಳಲ್ಲ. ಸ್ವತಃ ಅಧಿಕಾರದಲ್ಲಿರುವ ಬಿಜೆಪಿ ಇದುವರೆಗೂ ಸಾಲಮನ್ನಾ ಮಾಡಲಿಲ್ಲ ಮತ್ತು ನುಡಿದಂತೆ ನಡೆಯಲಿಲ್ಲ. ಆಡಳಿತ ನಡೆಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಧರ್ಮಗಳ ಮದ್ಯೆ ಸಂಘರ್ಷವನ್ನು ಉಂಟು ಮಾಡುವುದು, ಸಮಾಜಕ್ಕೆ ಬೆಂಕಿ ಹಚ್ಚೋದು, ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಯ ಕೆಲಸ. 224 ಕ್ಷೇತ್ರಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಥವಾ ಕ್ರಿಸ್ಚಿಯನ್ ಸಮುದಾಯಕ್ಕೆ ಸೇರಿದವರಿಗೆ ಟಿಕಿಟ್ ನೀಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ನನ್ನ ವಿರುದ್ಧ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಪ್ರಣಾಳಿಕೆಯು ಸುಳ್ಳಿನ ಕಂತೆ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಸಾಲ ಮನ್ನಾ ಎಂಬುವುದು ಕೇವಲ ರಾಜಕೀಯ ಗಿಮಿಕ್ ಎಂದು ಹೇಳಿದ್ದಾರೆ.
