ನಿಮ್ಮ ಬರಹ

ಮಾಡಿ ಮತದಾನ…ಇರಲಿ ದೇಶದ ಮೇಲೆ ಅಭಿಮಾನ

✍ಮನ್ಸೂರ್ ಅಹ್ಮದ್ ಸಾಮಣಿಗೆ

“ನಿನ್ನಾ ಬೆರಳಲಿ ನಾಡಿನ ಭವಿಷ್ಯ ಅಡಗಿವುದು ಮಹನೀಯಾ..

ಶಾಯಿ ಚುಕ್ಕಿಯ ಧರಿಸು ಈದಿನ ದಪ್ಪದಲೇ ಮಹರಾಯ..

ಕರುನಾಡ ನಾಗರೀಕರೆಂದು ಮತ ನೀಡುವಿಕೆಯಲ್ಲಿ ಮುಂದು..

ಹೆಮ್ಮೆಯಿಂದ ತೋರಿ ನಿಮ್ಮ ತೋರು ಬೆರಳನ್ನಾ

ಮಾಡಿ ಮಾಡಿ ಮಾಡಿ ಮತದಾನ,

ಇರಲಿ ದೇಶದ ಮೇಲೆ ಅಭಿಮಾನ.”

 

“ಓಟು ನಿನ್ನ ಅಧಿಕಾರ,ನೀನೆ ಹಾರಿಸು ಸರಕಾರ…

ಓಟು ನೀಡದೆ ನೀನು ಕುಂತರೆ ನಿನಗೆ ನೀನೆ ಮಾಡಿಕೊಳ್ಳುವೆ ಅಪಚಾರ….

ಅರಸ ಯಾರೇ ಆಗಿರಲೀ ಅವನು ನಮ್ಮ ಸೇವಕನು

ಇದನ್ನು ಅರಿತರೆ ಜನ್ಮ ಸಾರ್ಥಕ

ದಾಸನು ಅಲ್ಲಾ ಇಲ್ಲಿ ಯಾವುದೇ ಮತದಾರಾ…

ಹದಿನೆಂಟು ಆದವರೆ ಬನ್ನೀ..ಯುವ ಶಕ್ತಿ ತೋರ್ಬೆರಳ ತನ್ನಿ,

ಐದು ಕೋಟಿ ಓಟು ನೀಡಿ ದಾಖಲೆಯ ಬರೆಯೋಣಾ…

ಮಾಡಿ ಮಾಡಿ ಮಾಡಿ ಮತದಾನ,

ಇರಲಿ ದೇಶದ ಮೇಲೆ ಅಭಿಮಾನ”

 

“ಭ್ರಷ್ಟ ನಾಯಕರ ಹುಟ್ಟಿಗೆ ಕಾರಣ ಮತ ನೀಡದ ಪ್ರಜೆಯೂ..

ಉತ್ತಮ ರಾಷ್ಟ್ರಕೆ ಕೆಚ್ಚಿನ ಪ್ರಜೆಯು ಎಂದೆಂದಿಗೂ ಪ್ರಭುವೂ…

ಬನ್ನಿ ಮನಸು ಮಾಡೋಣ…

ಹೊಸದೇ ಕನಸು ಕಾಣೋನ.

ಇದು ಕರ್ತವ್ಯ ಇದು ಕರ್ತವ್ಯ…

ರಾಷ್ಟ ರಚಿಸೋಣಾ….

ಮಾಡಿ..ಮಾಡಿ..ಮಾಡಿ..ಮತದಾನ…

ಇರಲಿ ದೇಶದ ಮೇಲೆ ಅಭಿಮಾನ”.

ಬಹಳ ಕುತೂಹಲ ಕೆರಳಿಸಿರುವ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗ ಬಿಡುಗಡೆಗೊಳಿಸಿರುವ ಹಾಡುಗಳ ಸಾಲುಗಳಾಗಿವೆ.ಈ  ಹಾಡಿಗೆ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಸಾಹಿತ್ಯವನ್ನು ನೀಡಿದ್ದು,ಬಹಳ ಉತ್ತಮವಾದ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ.ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಬಿಡುಗಡೆಗೊಂಡ ಈ ಹಾಡು ಯಾವುದೇ ಮಾದ್ಯಮದಲ್ಲಾಗಲಿ,ಸೋಶಿಯಲ್ ಮೀಡಿಯಾಗಲಾದ ವಾಟ್ಸಾಪ್,ಫೇಸಬುಕ್,ಟ್ವಿಟ್ಟರ್ ಗಳಲ್ಲಾಗಲಿ ಹರಿದಾಡದೆ ಇರೋದು ಬಹಳ ಅಚ್ಚರಿ ಮೂಡಿಸಿದೆ.ಅದಾವುದೋ ಸಿನಿಮಾ ನಟಿಯೊಬ್ಬಳು ಕಣ್ಣ್ ಸನ್ನೆ ಮಾಡಿರುವ ವಿಡಿಯೋ ರಾತ್ರಿ ಬೆಳಗಾಗುವುದರಲ್ಲಿ ಮಾಧ್ಯಮ,ಸೋಶಿಯಲ್ ಮಿಡಿಯಾಗಲ್ಲಿ ದಾಖಲೆ ಮಾಡಿರೋದು ಮಾತ್ರ ವಿಪರ್ಯಾಸವೇ ಸರಿ. ಚುನಾವಣೆ ಬಂದಾಗ ನಾವೆಷ್ಟು ದುಡ್ಡು ಬಾಚಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಮುಳುಗಿರುವ ಮಾದ್ಯಮಗಳು ಇದೆಲ್ಲಾ ಜಾಗೃತಿ ಮೂಡಿಸುವ ಹಾಡುಗಳು ಪ್ರಸಾರ ಮಾಡಲು ಸಮಯವೆಲ್ಲಿದೆ ಬಿಡಿ.ಅದೇನೇ ಇರಲಿ ಈ ಹಾಡನ್ನು ಕೇಳಿದ  ಹವ್ಯಾಸಿ ಪತ್ರಕರ್ತನಾದ ನಾನು ಪತ್ರಿಕಾ ಮಾಧ್ಯಮದ ಮೂಲಕ ನಾಡಿನ ಮತದಾರ ಬಾಂಧವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದು ಲೇಖನ ಬರೆಯುವ ಮೂಲಕ ಸಮಾಜದ ಜನರಲ್ಲಿ ಜಾಗ್ರತಿ ಮೂಡಿಸುವ ಸಣ್ಣ ಪ್ರಯತ್ನ .ಇದು ನಮ್ಮ ಜವಾಬ್ದಾರಿಯು ಕೂಡ.

ನಮ್ಮದು ಪ್ರಜಾಸತ್ತಾತ್ಮಕ ದೇಶ. ಪ್ರಜೆಗಳ ಮತವನ್ನು ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರಕಾರ ನಡೆಸಬೇಕೆಂಬುದೇ  ಪ್ರಜಾತಂತ್ರದ ಆಶಯ, ಅಭಿಪ್ರಾಯ. ಸರಕಾರವು ಜನಾಭಿಪ್ರಾಯದಂತೆ ನಡೆಯುತ್ತಿರಬೇಕು. ಜನಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಬೆಳಕು, ಔಷಧಿ ಇತ್ಯಾದಿಗಳ ಸಮರ್ಪಕ ಅರಿವು, ಹಂಚಿಕೆ ಎಲ್ಲವನ್ನೂ ಸರಕಾರವೇ ನಡೆಸಬೇಕು. ಈ ಕಾರಣದಿಂದಲೇ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ, ಸರಕಾರ ನಡೆಸಲು ಕಳಿಸುವ ಗುರುತರ ಹೊಣೆಗಾರಿಕೆ ಎಲ್ಲಾ ಜನಗಳದು. ಇಂತಹ ಚುನಾವಣೆಗಳು ಪ್ರಜಾತಂತ್ರದ ಆಧಾರಗಳೂ ಆಗಿವೆ.

ಜನವರಿ 25ನೇ ತಾರೀಖನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದುದು. ಜನತಂತ್ರದ ಮುಖ್ಯ ಅಂಗವೇ ಚುನಾವಣೆಗಳು. ನಾವು ತೀರ್ಮಾನಿಸಿ ಕೊಡುವ ಅಧಿಕಾರ. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ. ಹೀಗಾಗದಿದ್ದಾಗ ಜನವಿರೋಧಿ ಸರ್ಕಾರವನ್ನು ಮತದಾನದ ಮೂಲಕವೇ ಕಿತ್ತೆಸೆಯಲೂಬಹುದು. ಹೀಗೆ ಮತದಾನವು ಪ್ರಜೆಗಳಿಗೆ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ನೀಡಿದೆ. ಇದನ್ನೇ ‘ಜನತಾಧಿಕಾರ’ಎನ್ನುವುದು.

ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಪ್ರಜೆಗಳಿಗೆ ಕೊಟ್ಟಿರುವ ಒಂದು ಬಲವಾದ ಅಂಕುಶ ಎನ್ನಲೂಬಹುದು. ಈ ವ್ಯವಸ್ಥೆ ಪ್ರಜೆಗಳಿಗೆ ಪರೋಕ್ಷವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದೆ. ಇದರಿಂದಲೇ ಭ್ರಷ್ಟ ಸರಕಾರಗಳನ್ನು ಶಾಂತಿಯುತವಾಗೇ ಬದಲಾಯಿಸಲು ಸಾಧ್ಯವಾಗಿರುವುದು. ಆದ್ದರಿಂದಲೇ ಮತದಾನವನ್ನು ಪ್ರಜಾಪ್ರಭುತ್ವದ ‘ಆಧಾರ ಸ್ತಂಭ’ ಎಂದಿರುವುದು. ಮುಕ್ತ ಮತ್ತು ನಿರ್ಭೀತ ಚುನಾವಣೆಗಳು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಾಗಿದ್ದು ರಾಷ್ಟ್ರದ ಪ್ರತಿಷ್ಠೆ ಹಾಗೂ ಮೌಲ್ಯಗಳನ್ನು ಹೆಚ್ಚಿಸುತ್ತದೆ.

ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು ಕೆಲವು ಸ್ಥಳೀಯ ಸಂಸ್ಥೆಗಳಿಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದರೂ ಆ ಹಕ್ಕು ಎಲ್ಲರಿಗೂ ಇರಲಿಲ್ಲ.ಕಂದಾಯ ಕಟ್ಟುವವರಿಗೆ,ಪದವಿ ಓದಿದವರಿಗೆ ಮಾತ್ರ ನೀಡಲಾಗಿತ್ತು.ಈಗ ದೇಶದಲ್ಲಿ ಸರ್ವ್ರತಿಕ ವಯಸ್ಕ ಮತದಾನ ಪದ್ಧತಿ ಜಾರಿಯಲ್ಲಿದ್ದು ಜನರು ಇದನ್ನು ಸದುಪಯೋಗಪಡಿಕೊಳ್ಳಬೇಕು. ಅಭಿವೃದ್ಧಿಯೊಂದಿಗೆ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವ ನಾಯಕನ ಆಯ್ಕೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವು ಇದೆ.ಕಡ್ಡಾಯ ಮತ ಚಲಾಯಿಸಿದರೆ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆಗೆ ನಿಜವಾದ ಅರ್ಥ ಬರಲಿದೆ.

1982ರಲ್ಲಿ ಸಂಸತ್ತು ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಿತು. ವಯಸ್ಕ ಮತದಾನದ ಪದ್ಧತಿಯಲ್ಲಿ ಜಾತಿ, ಧರ್ಮ, ಬಡತನ, ಸಿರಿತನ, ಲಿಂಗ ಭೇದ, ಇತ್ಯಾದಿ ಯಾವುದೇ ತಾರತಮ್ಯಗಳಿಲ್ಲ. ಇದು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿರುತ್ತದೆ. ಅದೇ ರೀತಿ ಎಷ್ಟೇ ಬಲಶಾಲಿ ವ್ಯಕ್ತಿಗಳಾಗಲೀ, ಅವರು ಮತದಾನವನ್ನು ಎದುರಿಸಿ, ಗೆದ್ದು ಅಧಿಕಾರಕ್ಕೆ ಬರಬೇಕು ಮತ್ತು ಈ ಅಧಿಕಾರ ಶಾಶ್ವತವೂ ಅಲ್ಲ ಅಥವಾ ವಂಶಾನುಕ್ರಮವೂ ಅಲ್ಲ, ಇತ್ಯಾದಿ ಉತ್ತಮ ಅಂಶಗಳು ಸಹ ಇದೆ. ಇನ್ನು ಲೋಪಗಳೆಂದರೆ, ಮತ ನೀಡುವವರಿಗೆ ಮತ್ತು ಚುನಾವಣೆಗೆ ನಿಲ್ಲುವವರೆಗೆ ವಿದ್ಯೆ, ಬುದ್ಧಿ ಏನೂ ಬೇಕಾಗಿಲ್ಲ. ವಯಸ್ಸೊಂದೇ ಅರ್ಹತೆ. ಮತ್ಯಾವ ಯೋಗ್ಯತೆಯೂ ಬೇಕಾಗಿಲ್ಲ. ಇದು ಒಳ್ಳೆಯದೋ, ಕೆಟ್ಟದ್ದೋ ಅವರವರಿಗೇ ಬಿಟ್ಟಿದ್ದು.

ಎಲ್ಲಾ ದೇಶಗಳ ಪ್ರಜಾಪ್ರಭುತ್ವವೂ ಒಂದೇ ರೀತಿಯಲ್ಲ. ಅಧ್ಯಕ್ಷ ಪ್ರಧಾನ ಪ್ರಜಾಪ್ರಭುತ್ವದ ಅಮೆರಿಕಾ, ಪ್ರಧಾನಿ ಪ್ರಧಾನದ ಭಾರತ, ಇಂಗ್ಲೆಂಡ್ ಭಿನ್ನತೆಯ ಉದಾಹರಣೆಗಳು. ಇವರೆಲ್ಲಾ ಸರಿಯಾಗಿ ಕೆಲಸ ಮಾಡದಿದ್ದರೆ ಅವರನ್ನು ಬದಲಾಯಿಸಲು ಅವರ ಅವಧಿ ಮುಗಿಯುವವರೆಗೆ ಕಾಯಬೇಕು. ‘ಪ್ರಜೆಗಳೇ ಪ್ರಭುಗಳು’ ಎಂಬುದು ಈಗ ಕೇವಲ ಬಾಯಿಮಾತು.

ಸಂವಿಧಾನದ ಮೂಲಕ ಮತದಾನದ ಹಕ್ಕು ಪಡೆದುಕೊಂಡಿರುವ ಮತದಾರ ಪ್ರಭು ತನ್ನ ನಾಯಕರ ಆಯ್ಕೆಯಲ್ಲಿ ಮತ ಹಾಕುವಾಗ ತನ್ನ ಪ್ರಜ್ಞಾವಂತಿಕೆ ತೋರಿಸಬೇಕು. ಯಾವುದೇ ದುಷ್ಟ ಪ್ರಚೋದನೆಗೆ ಒಳಗಾಗದೆ ಉತ್ತಮ ಚರಿತ್ರೆಯುಳ್ಳ ಪ್ರಜಾಪ್ರತಿನಿಧಿಯನ್ನು ಚುನಾಯಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಪ್ರಜಾತಂತ್ರದ ನಿರ್ವಹಣೆಯಲ್ಲಿ ಕಾಣಿಸಿಕೊಳ್ಳುವ ಲೋಪ-ದೋಷಗಳನ್ನು ತಿದ್ದಲು ಬಲಿಷ್ಠ, ಪ್ರಾಮಾಣಿಕ ವ್ಯವಸ್ಥೆ ಲೋಕಾಯುಕ್ತದಂತಹ ಒಂದು ಸಮಿತಿ, ಅದಕ್ಕೆ ಪೂರ್ಣ ಅಧಿಕಾರ ಇರಬೆಕು.ಚುನಾವಣೆಯಲ್ಲಿ ಹಣ-ಹೆಂಡ ಇತ್ಯಾದಿ ಅಕ್ರಮಗಳು ನಡೆಯದಂತೆ ಸಜ್ಜನರಾದವರು ತಮ್ಮ ತಮ್ಮ ಊರು-ಗ್ರಾಮ-ನಗರಗಳಲ್ಲೇ ‘ಜನಜಾಗೃತಿ’ ನಡೆಸಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯ ಪಕ್ಷ ಹಾಗೂ ಯೋಗ್ಯ ವ್ಯಕ್ತಿಗೆ ಮತ ಹಾಕಬೇಕು. ಜಾಗೃತ ಮತದಾರರು ತಮ್ಮ ಸುತ್ತ-ಮುತ್ತಲಿನ ಮತದಾರರಿಗೂ ಇದೇ ಸಲಹೆ ನೀಡಿ ಅವರು ಕಾರ್ಯಪ್ರವೃತ್ತರಾಗುವಂತೆ ಗಮನಿಸಬೇಕು.

ಮತ ನೀಡುವವರು ತಮ್ಮ ಹೆಸರಲ್ಲಿ ಮತ ಹಾಕಬೇಕು. ಬೇರೆಯವರ ಹೆಸರಲ್ಲಿ ಮತ ನೀಡುವುದು ಪ್ರಜಾಪ್ರಭುತ್ವದ ನಿಯಮಕ್ಕ ದ್ರೋಹ ಬಗೆದಂತೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸ್ವಾತಂತ್ರ್ಯ, ಕಾನೂನು, ನ್ಯಾಯ ಮುಂತಾದ ಮೌಲ್ಯಗಳೇ ಮುಖ್ಯವಾಗಿವೆ. ಪ್ರಜಾಪ್ರಭುತ್ವ ಎಂದರೆ ಇಂಗ್ಲೀಷ್‌ನ Democracy ಎಂಬ ಪದಕ್ಕೆ ಪೂರಕವಾಗಿದೆ. Demos ಎಂದರೆ ಜನರು ಮತ್ತು Kratos ಎಂದರೆ ಅಧಿಕಾರ ಎಂದಾಗುತ್ತದೆ.

ಇತ್ತೀಚಿನ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 5 ಕೋಟಿಗೂ ಹೆಚ್ಚಿನ ಮತದಾರರಿದ್ದಾರೆ.ಇದರಲ್ಲಿ ಸುಮಾರು 2.55 ಕೋಟಿ ಪುರುಷರು ಹಾಗೂ 2.44 ಕೋಟಿ ಮಹಿಳೆಯರು ಮತ್ತು 4,552 ತೃತೀಯ ಲಿಂಗಿಗಳು ಒಳಗೊಂಡಿದ್ದಾರೆ.

2013 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು 4,36,85,749 ಮತದಾರರಿದ್ದರು.

ಅಂಕಿ ಅಂಶಗಳ ಪ್ರಕಾರ 2.33 ಕೋಟಿ ಪುರುಷರು,2.13 ಕೋಟಿ ಮಹಿಳೆಯರು ಹಾಗೂ 2100 ತೃತೀಯ ಲಿಂಗಿಯ ಮತದಾರರಿದ್ದರು.

ಇದೀಗ ಸುಮಾರು 72 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಯುವ ಮತದಾರರೇ ನಿರ್ಣಾಯಕ ಮತದಾರಾಗಿದ್ದರೆ.ಈ ನಿಟ್ಟಿನಲ್ಲಿ ಯುವ ಮತದಾರರು ಕಡ್ಡಾಯ ಮತದಾನ ಮಾಡುವ ಮೂಲಕ ರಾಜ್ಯದಲ್ಲಿ ದಾಖಲೆಯ ಮತದಾನ ಮಾಡಿ ಇಡೀ ದೇಶಕ್ಕೆ ಮಾದರಿ ಯಾಗಬೇಕಾಗಿದೆ.ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಮೇ 12 ರಂದೇ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಮತದಾನದ ಹಕ್ಕನ್ನು ಪಡೆದಿರುವ ಎಲ್ಲಾ ಮತದಾನ ಪ್ರಭುಗಳು ಕಡ್ಡಾಯ ಮತದಾನ ಮಾಡುವ ಮೂಲಕ ಇಡೀ ದೇಶದ ಮೇಲೆ ಅಭಿಮಾನ ತೋರಿಸಬೇಕಾಗಿದೆ.ಯಾವುದೇ ಲೋಭ, ಆಮಿಷಕ್ಕೆ ಒಳಗಾಗದೇ ಯೋಚಿಸಿ, ಉತ್ತಮ ದಕ್ಷವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳುವುದು ಎಲ್ಲರ ಕರ್ತವ್ಯವೂ ಆಗಿರುತ್ತದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group