ಅಭಿಪ್ರಾಯ

ಮಸೀದಿಯೊಳಗಿನ ಮೊಂಡು ತಲವಾರು ಹಾಗೂ ಸಂಶಯಕ್ಕೊಳಗಾದ ಮದ್ರಸಾ!!

ಅಪಪ್ರಚಾರ, ಸಂಶಯ, ಕುತೂಹಲಗಳಿಗೆ ಉತ್ತರವೆಂಬಂತೆ ಮದ್ರಸಾ, ಮಸೀದಿ ಆವರಣದೊಳಗೊಂದು ಸುತ್ತು..

ವಿಶೇಷ ಲೇಖನ: ಜಸ್ಟ್ ಶಾಫಿ (ಕಂದ)

ವರದಿಗಾರ (ಎ.21):  ನಮ್ಮ ಹುಡುಗರಲ್ಲಿ “ಕಾಪಿರಙ” ಅನ್ನುವ ಒಂದು ಪದಬಳಕೆಯಿದೆ. ನಮ್ಮ ಶುಕ್ರವಾರದ ಪ್ರಾರ್ಥನೆಯ ವೇಳೆ ನಾವು ವಾಸಿಸುವ ಈ ಮಣ್ಣಿನಲ್ಲಿ ಶಾಂತಿ ನೆಲೆಸಲಿ ಎಂದು ದುವಾ ಮಾಡಲಾಗುತ್ತದೆ. ಹಾಗೆಯೇ ನಮ್ಮ ಮಸೀದಿಗಳಲ್ಲಿ ಒಂದು ಮೊಂಡು ತಲವಾರು ಇರುತ್ತದೆ. ಎಕ್ಸ್ಯೂಸ್ -“ಮೊಂಡು ತಲವಾರು” ಮಾರ್ರೆ, ಗಡಿಬಿಡಿ ಮಾಡಿಕೊಂಡು ಪೊಲೀಸರಿಗೆ ಫೋನಾಯಿಸಬೇಡಿಯಷ್ಟೇ. ಹಾಗೆಯೇ ನಾವು ದಿನಾ ಯಾವುದಾದರೊಂದು ನ್ಯೂಸ್ ಸಂಸ್ಥೆಯ ಪ್ರಧಾನ ಸುದ್ಧಿಯಾಗಿರುತ್ತೇವೆ. ನಾನು ಹೇಳ ಹೊರಟಿರುವುದು ಇನ್ಸೈಡ್ ಮುಸ್ಲಿಮ್ಸ್ ಸ್ಟೋರಿ.

ನೀವು ಆಡಿಕೊಳ್ಳುವ ಹಾಗೆ ಇಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮಿತಿಯಿದೆ, ಧರ್ಮವನ್ನು ವಿಶ್ಲೇಷಣೆ ಮಾಡಿದರೆ ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ ಅನ್ನುವಂತಹದ್ದೇನೂ ಇಲ್ಲ. ತಸ್ಲೀಮ ನಸ್ರೀನ್ ,ಸಲ್ಮಾನ್ ರಶ್ದಿಗಳೆಲ್ಲ ನಿಮ್ಮನ್ನ ಸಖತ್ ಯಾಮಾರಿಸಿದ್ದಾರೆ ಅಂತ ನಿಮಗೆ ಗೊತ್ತಾಗದಿರಲು ನಮ್ಮಂತಹ ಬರವಣಿಗೆಯ ಚೂರು ಪಾರು ಸಾಮರ್ಥ್ಯ ಇರುವ ಮುಸ್ಲಿಂ ಹುಡುಗರ ತೀರಾ ಸೋಮಾರಿತನವೂ ಕಾರಣವೆಂದರೆ ನಿಮಗೆ ಗೊಂದಲದ ಮೇಲೆ ಗೊಂದಲ ಎದುರಾಗಬಹುದು. ಅದೆಲ್ಲ ಹೋಗ್ಲಿ ಅತ್ಲಾಗೆ . ಮುಸ್ಮಿಮರ ನಿಗೂಢತೆಗಳ ಬಗ್ಗೆ ನಮಗೇ ಗೊತ್ತಿಲ್ಲದ್ದನ್ನೆಲ್ಲ ತಿಳಿದುಕೊಂಡು ಕಂಗಾಲಾಗಿರುವ ನಿಮ್ಮನ್ನೆಲ್ಲ ನಾನು ನಮ್ಮ ಮಸೀದಿಗಳಿಗೆ, ಮದ್ರಸಾಗಳಿಗೆ, ಮೊಹಲ್ಲಾಗಳಿಗೆಲ್ಲ ರೌಂಡ್ ಹೊಡೆಸಿ ಕರೆತಂದು ಇಲ್ಲೇ ಬಿಟ್ ಬಿಡ್ತೇನೆ ಧೈರ್ಯವಾಗಿರಿ.

ಹೀಗೆ ತೀರಾ ಮೊನ್ನೆ ಮೊನ್ನೆ “ಕಾಪಿರಙ”ಲೆ ಬಿಲ್ ಬಾಕಿ ಇದೆ ಅಂತ ಕೆಲಸಕ್ಕಿರುವ ಒಬ್ಬ ಸಣ್ಣ ಹುಡುಗ ಹೇಳಿದಾಗ ಬಿಗಿಯಾದ ಕೈಯ ಮುಷ್ಟಿಯನ್ನು ನಿಗ್ರಹಿಸಿ ತಮ್ಮನ ಪ್ರೀತಿಯಲ್ಲಿ ನಗುತ್ತಾ ಹೇಳಿದ್ದೆ ” ಮನುಷ್ಯರೆಲ್ಲರೂ ಒಂದೇ,ಅವರು ಇವರು ಅಂತ ನನ್ನ ಮುಂದೆ ಇನ್ನೊಮ್ಮೆ ಹೇಳಿದರೆ ಕೆನ್ನೆಗೆ ಬಾರಿಸ್ತೇನೆ ಅಂತ” . ಆ ಹುಡುಗ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದ. ನಾನು ಹುಟ್ಟುವಾಗಲೇ ಕಲಿತ ಬ್ಯಾರಿ ಭಾಷೆ ಸರಿ ಇಲ್ಲವೇನೋ ಎಂಬ ಅನುಮಾನ ಮೊದಲ ಬಾರಿಗೆ ಕಾಡಿದ ಹಾಗೆ ತಬ್ಬಿಬ್ಬಾಗಿ ಸುಧಾರಿಸಿಕೊಂಡ.

ನಮ್ಮ ಆಡು ಭಾಷೆಯಲ್ಲಿ ಮುಸ್ಲಿಮರೇತರರಿಗೆ “ಕಾಪಿರಙ” ಅನ್ನುವ ಪದ, ಕೊಂಕಣಿಯಲ್ಲಿ ಮುಸ್ಲಿಮರನ್ನು “ಮಪ್ಲೋ” ಅಂದಷ್ಟೇ ಸಾಮಾನ್ಯ. , ತುರುಕ್ರು ಸಾಬಿ ಅಂತೆಲ್ಲ ಕರೆದಷ್ಟೇ ಸಾಮಾನ್ಯ ಪದ. ಹೀಗೆ ನಾವೆಲ್ಲ ನಙಲಙ ಕಾಪಿರಙ ಪೊರ್ಬುಙ ಅಂತೆಲ್ಲ ಹೇಳಿ ಬೆಳೆದ ಊರಿಗಳಿಗೆಲ್ಲ ಒಂದು ಮಸೀದಿ ಇರುತ್ತದೆ ಮತ್ತು ಅಲ್ಲೊಂದು ವಾರ ಇಡೀ ನಿದ್ರೆ ಮಾಡುವ ಮೊಂಡು ತಲವಾರು. ಶುಕ್ರವಾರದ ದಿನ ಮಾತ್ರ ಆಝಾನ್ ಕೊಡುವ ಮುಅಝ್ಝಿನ್ ಅದನ್ನೆತ್ತಿ ಪ್ರವಚನ ನೀಡಲು ಬರುವ ಮುಖ್ಯ ಗುರುಗಳ ಕೈಗೆ ಕೊಡುತ್ತಾರೆ. ಗಂಭೀರ ಮುಖ ಭಾವದಲ್ಲಿ ನಿಂತು ತನ್ನ ಮಾತೃ ಭಾಷೆಯಲ್ಲದ ಅರೆಬಿಕ್ ನಲ್ಲಿ ಓದಬೇಕಾದ ಪ್ರವಚನದ ಗೆರೆಗಳನ್ನು ಕೋಟ್ ಮಾಡಲು ಹಿಡಿದುಕೊಂಡ ಗ್ರಂಥದ ಅಡಿಯಲ್ಲಿ ಅವರ ಎರಡೋ ಮೂರೋ ಬೆರಳಿಗೆ ಸಿಲುಕಿಕೊಂಡು ಆ ತಲವಾರು ನೇತಾಡುತ್ತಿರುತ್ತದೆ. ಪ್ರವಚನದ ಮಧ್ಯೆ ಸಣ್ಣ ವಿರಾಮಕ್ಕೆ ಕುಳಿತುಕೊಳ್ಳುವಾಗ ಅವರು ಆ ತಲವಾರನ್ನು ತನ್ನ ಎಡಬದಿಯಲ್ಲಿ ನಾಜೂಕಾಗಿ ನಿಲ್ಲಿಸಿ ಮತ್ತೆ ನಿಲ್ಲುವಾಗ ಎತ್ತಿಕೊಳ್ಳುತ್ತಾರೆ. ಪ್ರವಾದಿವಯವರು ಪ್ರವಚನ ನೀಡುವಾಗ ಅಂದಿನ ನಾಯಕನ ಸಂಪ್ರದಾಯದಂತೆ ತಲವಾರು ಹಿಡಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅದು ಶೈತಾನನಿಗೆ ಹತ್ತಿರ ಸುಳಿಯದಂತೆ ಎಚ್ಚರಿಕೆ ಕೊಡಲು ರೂಪಕವಾಗಿ ಹಿಡಿಯಲಾಗುತ್ತದೆ ಅಂತ ನನಗೆ ಸಿಕ್ಕಿದ ಜ್ಞಾನ.
ಇಂತಿಪ್ಪ ಮೊಂಡು ತಲವಾರು ಈಗೀಗ ಬಹುತೇಕ ಮಸೀದಿಗಳಲ್ಲಿ ಮರದ ಕೋಲುಗಳಾಗಿ ಪರಿವರ್ತಿತವಾಗಿದೆ. ಕೋಲಿನ ತುದಿಗೆ ಕಮಂಡಲದ ಹಿಡಿಯಂತೆ ಮಾಡಿರುತ್ತಾರೆ. ಹಿಡಿದುಕೊಳ್ಳಲು ಅನುಕೂಲವಾಗಲಿ ಅಂತ ಇರಬಹುದು. ಇನ್ನು ಕೆಲವು ಮಸೀದಿಗಳಲ್ಲಿ ತಲವಾರಿಗೆ ಕಬ್ಬಿಣದ ಬದಲು ಮರ ಬಳಸಲಾಗುತ್ತದೆ. ಸಂಪ್ರದಾಯ ಮಾತ್ರ ಆಗಿರುವುದರಿಂದ ಯಾರನ್ನೂ ಕಡಿಯಲು ಇಲ್ಲವಾದ್ದರಿಂದ ಈ ಬದಲಾವಣೆಗಳು ಬಂದಿರಬಹುದು. ಆ ಬದಲಾವಣೆಗಳನ್ನು ಮಾಡಲು ಮಸೀದಿಯ ಆಡಳಿತ ಮಂಡಳಿಯಲ್ಲಿರುವ ಹಿರಿಯರು ಚರ್ಚಿಸುತ್ತಾರೆ. ಪಾಪ ಮುಸ್ಲಿಮರು ಭಯೋತ್ಪಾದಕರು ಅಂತ ಚರ್ಚೆ ಆಗುವಾಗ ತಲವಾರು ತಾಪತ್ರಯ ತಮದೊಡ್ಡದಿರಲಿ ಅಂತ ಅವರ ನಿಲುವಾಗಿರಬಹುದು. ನಮಗೂ ಅಷ್ಟೇ ಎಲ್ಲಿ ಸುತ್ತಮುತ್ತ ಕೋಮುಗಲಭೆ ಬುಗಿಲೆದ್ದರೂ “ಮಕ್ಕಳೇ ಯಾರ ಮೇಲೂ ಅನ್ಯಾಯವೆಸಗಬೇಡಿ, ಅಮಾಯಕರನ್ನ ತೊಂದರೆಗೀಡುಮಾಡುವುದನ್ನು ಅಲ್ಲಾಹ್ ಮೆಚ್ಚಲಾರ, ಹಾಗೇನಾದ್ರೂ ಯಾರಾದ್ರೂ ನಮ್ಮ ಕಡೆ ದಾಳಿಗೈದರೆ ನಾವೇ ಮುಂದೆ ನಿಂತು ನಿಮಗೆ ಪ್ರತಿದಾಳಿಗೆ ಅವಕಾಶ ಕೊಡ್ತೇವೆ. ಈಗ ಗುಂಪುಗೂಡದೆ ಮನೆಗೆ ತೆರಳಿ” ಅಂತ ಆಡಳಿತ ಮಂಡಳಿಯ ಹಿರಿಯ ತಲೆಗಳು ನಿಭಾಯಿಸುವುದಿದೆ. ಅದಿರ್ಲಿ ಬಿಡಿ.

ಇನ್ನು ನಮ್ಮ ಮದ್ರಸಗಳದ್ದು ಒಂಥರಾ ಉಪವಾಸ ಹಿಡಿದವನ ದೈವ ನಿಷ್ಠೆ. ಎಷ್ಟೇ ಕಷ್ಟ ಆದರೂ ಚಿಲ್ಲರೆ ಸಂಬಳ ಮತ್ತು ಊರಿನವರು ಕೊಡುವ ಊಟಕ್ಕೆ ಆಸು ಪಾಸಿನ ಊರಿನಿಂದ ಬಂದು ಮದ್ರಸದ ಪಕ್ಕ ಇರುವ ತಂಗು ಕೋಣೆಗಳಲ್ಲಿ ಉಳಿದುಕೊಂಡು ವಾರಕ್ಕೊಮ್ಮೆ ಊರಿಗೆ ಹೋಗಿ ಬಂದು ಧಾರ್ಮಿಕ ಶಿಕ್ಷಣ ಕೊಡುವ ಶಿಕ್ಷಕರ ನಿಷ್ಠೆ, ಮುದ್ದು ನಿದ್ದೆಯಲ್ಲಿರುವ ಎಳೆಮಗಳನ್ನು ಎಬ್ಬಿಸಲು ಕಸಿವಿಸಿಯಾದರೂ ಎಬ್ಬಿಸಿ ಬ್ರಶ್ ಮಾಡಿಸಿ ಹೊಟ್ಟೆಗೊಂದಿಷ್ಟು ಬಿಸ್ಕಿಟ್ಟು ಹಾಲು ತುರುಕಿ ಓಡಿಸುವ ಅಪ್ಪ ಅಮ್ಮನ ದೇವ ನಿಷ್ಠೆ, ಯಾವಾಗ ಶುಕ್ರವಾರವಾಗಿ ಮದ್ರಸಕ್ಕೆ ರಜೆ ಸಿಗ್ತದೆ ಅಂತಲೇ ಕಾಯುವಂತಹ ಒಲ್ಲದ ಮನಸ್ಸಿನ ಮಕ್ಕಳೂ ಕುರ್’ಆನ್ ಎದೆಗೊತ್ತಿ ಚುಮು ಚುಮು ಚಳಿಗೆ, ಕೊಡೆ ಮಡಚಿ ಹಾಕುವ ಮಳೆಗೆ ಮದ್ರಸದ ಕಡೆ ಹೆಜ್ಜೆ ಇಡುವ ಮಕ್ಕಳ ನಿಷ್ಠೆ , ಗ್ರಾಮಾಂತರ ಪ್ರದೇಶಗಳಲ್ಲಿ ಸಿಡಿಲು ಬಡಿದು ಕರೆಂಟು ಕೈ ಕೊಟ್ಟರೆ ಇದ್ದ ಬದ್ದ ಎಮರ್ಜನ್ಸಿ ಪವರ್ ಸಪ್ಲೈ ,ದೂರದ ಮಕ್ಕಳಿಗೆ ಮನೆ ತಲುಪಲು ವಾಹನ ಎಂದೆಲ್ಲಾ ನೆರವು ಹಿಡಿದು ಓಡುವ ಊರ ಯುವಕರ ನಿಷ್ಠೆಯೆಲ್ಲಾ ಸೇರಿಕೊಂಡು ನಮ್ಮ ಮದ್ರಸಗಳು ಕಾರ್ಯಾಚರಿಸುತ್ತವೆ.
ನಮ್ಮ ಕುಮಾರಣ್ಣನಿಂದ ಒಂದೊಮ್ಮೆ ಭಯಾತ್ಪಾನೆಯ ಆಪಾದನೆಗೆ ಈಡಾಗಿದ್ದ, ಬಿಜೆಪಿಯವರಿಗೆ ಆರೆಸ್ಸೆಸ್ಸಿಗರಿಗೆ ಊರು ಊರುಗಳಲ್ಲಿ ಸಣ್ಣ ಮಕ್ಕಳ ಯುವಕರ ತಲೆ ಕೆಡಿಸುವ ಬೈಟಕ್ ಗಳಿಗೆಲ್ಲ ಉತ್ತಮ ಸರಕಾಗುವ ಈ ಮದ್ರಸಗಳಲ್ಲಿ ನಮಗೆ ದೊರಕುವ ಮೊದಲ ಪಾಠ “ಅದಬುನ್ ಅ” ಅರ್ಥಾತ್ ವಿನಯ ವಿನಮೃತೆ ಅಂತೆಲ್ಲ ಕರೆಯಬಹುದಾದ ಅರೆಬಿಕ್ ಶಬ್ಧ. ಅದು ಮುಂದುವರಿದು ಊಟ ಮಾಡುವ ಮುಂಚೆ ಕೈ ತೊಳೆಯುವುದು, ದೈಹಿಕ ವಿಸರ್ಜನೆಗಳ ನಂತರ ಅಂಗ ಶುದ್ಧಿ ಮಾಡುವುದು, ನಮಾಜ್ ಗೆ ಮುಂಚಿನ ಶುದ್ಧಿ , ಅಪ್ಪ ಅಮ್ಮನನ್ನು ಹಿರಿಯರನ್ನು ಗೌರವಿಸುವುದು, ಸ್ವಲ್ಪ ದೊಡ್ಡ ತರಗತಿಗಳಿಗೆ ದಾಟಿದಂತೆ ಕುಟುಂಬಿಕರಲ್ಲದ ಬೆಳೆದ ಹೆಣ್ಣು ಮಕ್ಕಳ ಮುಂದೆ ದೃಷ್ಟಿ ತಗ್ಗಿಸುವುದು, ಜನಾಬತ್ ನಿಂದ ಹಿಡಿದು ಜನಾಝದ ವರೆಗೆ ,ಮರಣ ಹೊಂದಿದ ವ್ಯಕ್ತಿಯನ್ನು ಸ್ನಾನ ಮಾಡಿಸುವ ಬಗ್ಗೆ, ಕಡ್ಡಾಯ ದಾನಗಳ ಬಗ್ಗೆ, ದಾರಿಯಲ್ಲಿನ ಅಡೆತಡೆಗಳನ್ನು ನೀಗಿಸುವ, ಕಷ್ಟದಲ್ಲಿರುವವರಿಗೆ ನೆರವಾಗುವ ಸಾಮಾಜಿಕ ಒಳಗೊಳ್ಳುವಿಕೆಗಳ ಬಗ್ಗೆ ಯೆಲ್ಲಾ ಪಾಠ ಇರುತ್ತದೆ.

ಈ ಮದ್ರಸಗಳಲ್ಲಿ ನೀವು ಅಪೇಕ್ಷಿಸುವ ಭಯೋತ್ಪಾದನೆಗೆ ಏನಾದರೂ ಉದಾಹರಣೆ ಕೊಡಬೇಕಿದ್ದರೆ ಸೂರ್ಯಾಸ್ತದ ವೇಳೆಯ ನಮಾಜ್ ಗೆ ಮುಂಚೆ ನಡೆಯುವ ದೇವಸ್ಮರಣೆಗೆ ಸಮಯಕ್ಕೆ ತಲುಪದೆ ಶಾಲೆ ಬಿಟ್ಟು ಬಂದು ಸೈಕಲ್ ಏರಿ ಊರು ಸುತ್ತುವ, ಕಬಡ್ಡಿ ಆಡಿ ಮೊಣಕಾಲಿನ ಮಾಂಸ ಕಳಚಿಸಿಕೊಳ್ಳುವ, ಕ್ರಿಕೆಟ್ ಗೆ ನಿಂತರೆ ಬಾಲ್ ಕಾಣದಾಗುವವರೆಗೆ ಆಡುವ ನಮ್ಮಂತಹ ಪೋಕ್ರಿ ಹುಡುಗರ ಬೆನ್ನ ಮೇಲೆ ಬೀಳುವ ಉಸ್ತಾದರ ನಾಗರ ಬೆತ್ತದ ಏಟು. ಇನ್ನು ಲವ್ ಜಿಹಾದ್ ನ ಮಾತಂತೂ ಬಿಡಿ. ಪಕ್ಕದ ಬೆಂಚಿನಲ್ಲಿ ಕೂತ ನಖಾಬು ಹಾಕಿಕೊಂಡ ಹುಡುಗಿಯರನ್ನೂ ಕಣ್ಣೆತ್ತಿ ನೋಡಬೇಕು ಎಂದು ಯಾವನಿಗೂ ಅನ್ನಿಸದಷ್ಟು ಗಂಭೀರ ಮೌನ ಉಸ್ತಾದರೇನಾದರೂ ಕುರ್ಚಿಯಲ್ಲಿ ಕುಳಿತು ಕುರ್’ಆನ್ ಪಾರಾಯಣ ಮಾಡುವ ನಮ್ಮನ್ನೇ ದಿಟ್ಟಿಸುತ್ತಿದ್ದರೆ. ಶೈತಾನನ ಸೈನ್ಯದಲ್ಲಿ ಅರ್ಧದಷ್ಟು ಸೇನಾನಿಗಳು ಹುಡುಗಿಯರು ಅಂತೆಲ್ಲ ಆಗಾಗ ರಿಮೈಂಡರ್ ಕೂಡ ದೊರಕುತ್ತಿರುತ್ತದೆ.

ಹು, ಇಂತಹ ಮನುಷ್ಯನೆಂಬ ಅಡ್ನಾಡಿ ಕ್ರೂರಿ ಅತ್ಯಾಚಾರಿ ಸುಳ್ಳ ವಂಚಕ ಕುಡುಕ ಎಲ್ಲಾ ಏನೆಲ್ಲಾ ಆಗಬಲ್ಲ ಮನುಷ್ಯನೆಂಬ ಮೃಗವನ್ನು ಶಿಸ್ತು ಪ್ರಮಾಣಿಕತೆ ಸತ್ಯಸಂಧತೆ ಕರುಣೆ ಪರೋಪಾರಗಳಿಗೆ ಚಿಕ್ಕಂದಿನಿಂದಲೇ ಪಳಗಿಸಲು ಪ್ರಯತ್ನಿಸುವ ನಮ್ಮ ಮದ್ರಸದಿಂದಿಳಿದು ಹೊರಟರೆ ನಮ್ಮ ಊರು ಸುತ್ತಾಡಿಕೊಂಡು ಬರಬಹುದು.

ಇರಿ – ಪತ್ರಿಕೆಯಲ್ಲಿ ಓದುವ, ಜನರ ಬಾಯಿಂದ ಬಾಯಿಗೆ ಬಾಯಿಗೆ ಹರಿದು ಕಿವಿ್ಗೆ ಬಿದ್ದ -ಧರ್ಮಯುಧ್ಧದ ರಣಕಹಳೆ ಮೊಳಗಿಸುತ್ತಾ ಚುನಾವಣೆ ಭಾಷಣ ಮಾಡುವ ರಾಜಕಾರಣಿಗಳು-ಸಾಬಿಯೊಬ್ಬನ ಅಕಲ್ ಮಂದ್ ಸನ್ನಿವೇಶಗಳನ್ನು ಫೋಟೋಷಾಪ್ ಮಾಡಿ ಎದ್ದೇಳಿ ಹಿಂದುಗಳೇ ಎದ್ದೇಳಿ ಅನ್ನುವ ಸೋಷಿಯಲ್ ಮೀಡಿಯಾದ ಮೀಸೆ ಚಿಗುರದ ಧರ್ಮ ರಕ್ಷಕರು, ಬಡಪಾಯಿ ಲಾರಿ ಚಾಲಕನೊಬ್ಬನ ನಸೀಬು ಕೆಟ್ಟು ದಾರಿ ತಪ್ಪಿ ಉಲ್ಟಾ ಹೋಗಲು ನೋಡುವಾಗ ಆದ ಅಪಘಾತಕ್ಕೆ ಅಯ್ಯೋ ನನ್ನ ಕೊಲ್ಲೋಕ್ ಬಂದ್ರೂ ಅಂತ ಗೋಳಾಡಿದ ಸಂಸದರ ಬಾಯಲ್ಲೆಲ್ಲಾ ಮುಸ್ಲಿಮರ ಬಗ್ಗೆ ಕೇಳಿದವರಿಗೆ, ಮುಸ್ಲಿಮರ ಮೊಹಲ್ಲಾದ ಅಂಗಳದಿಂದ ಒಬ್ಬ ಹುಡುಗ ನೇರಪ್ರಸಾರ ಮಾಡುವ ಸುದ್ಧಿಗಳು ಡೈಜಸ್ಟ್ ಆಗದೆ ಹೊಟ್ಟೆ ಉಬ್ಬರಿಸಿದರೆ ಕಷ್ಟ.

ನೀವೆಲ್ಲಾ ಸ್ವಲ್ಪ ಇಲ್ಲೇ ಮದ್ರಸದ ಹೊರಗೆ ವಿರಮಿಸುತ್ತಾ ಅಂಕಿ ಅಂಶಗಳ ಪ್ರಕಾರ ವಿದ್ಯೆ ಸಾಮಾಜಿಕ ಪ್ರಾತಿನಿಧ್ಯದಲ್ಲಿ ದಲಿತರಿಗಿಂತಲೂ ಕೆಳಸ್ಥರದಲ್ಲಿ ಬದುಕುವವರ ಮನೆಯ ಪುಟ್ಟ ಪುಟ್ಟ ಹೆಣ್ಣುಮಕ್ಕಳು ಶಾಲೆಯ ಸಮಯದ ನಡುವೆ ದೊರಕುವ ಪುಟ್ಟ ಸಮಯದಲ್ಲಿ ಬದುಕಿನ ಮೌಲ್ಯಗಳನ್ನು ಕಲಿಯಕಲೂ ಹೊಂದಿಸಿದ ಅಖ್ಲಾಕ್ ದೀನಿಯಾತ್ (ಜೀವನಕ್ರಮದ ಪುಸ್ತಕ) ಹಿಡಿದುಕೊಂಡು ಕಿಟಕಿಯಿಂದ ಪಿಳಿ ಪಿಳಿ ಇಣುಕುವುದನ್ನು ನೋಡುತ್ತಿರಿ. ಸ್ವಲ್ಪ ಬಿಡುವಾದ ನಂತರ ಮೊಹಲ್ಲಾದೊಳಗೂ ಕರೆದುಕೊಂಡು ಹೋಗುತ್ತೇನೆ‌. ಅಲ್ಲಿಯವರೆಗೆ ಸ್ವಲ್ಪ ಟ್ರಿಕ್ಕೀ ಟ್ರಿಕ್ಕೀ ಪ್ರಶ್ನೆ ಎಲ್ಲಾ ಕಮೆಂಟ್ ಮಾಡಿ ನನ್ನನ್ನ ಪ್ರೊವೋಕ್ ಮಾಡ್ತಿರಿ , ರಾಜಕಾರಣಿಗಳು ಚುನಾವಣೆಗೆ ಮುಂಚೆ ಪ್ರೊವೋಕ್ ಮಾಡೋ ತರಾನೇ  ಹ ಹ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group