ನಿಮ್ಮ ಬರಹ

ಅತ್ಯಾಚಾರವನ್ನು ಸಮರ್ಥಿಸುವುದು ಧರ್ಮವಲ್ಲ – ದುಷ್ಕರ್ಮ

ಲೇ : ಇಸ್ಮತ್ ಪಜೀರ್

ಕಾಶ್ಮೀರದ‌ “ಕಟುವಾ” ದ ನನ್ನ ಮಗಳು‌ ಆಸಿಫಾಳ ಸರಣಿ ಅತ್ಯಾಚಾರ ಮತ್ತು ಕೊಲೆಯನ್ನು ಜಗತ್ತಿನಾದ್ಯಂತವಿರುವ ಮಾನವತಾವಾದಿಗಳು ಖಂಡಿಸುತ್ತಿದ್ದರೆ ನಮ್ಮ ದೇಶದ ಹಿಂದೂ‌‌ ಧರ್ಮವನ್ನು ಗುತ್ತಿಗೆಗೆ‌ ಪಡೆದುಕೊಂಡಂತಾಡುತ್ತಿರುವ‌ ಕೆಲವು ಸಂಘಟನೆಗಳು ಸಂಭ್ರಮಿಸುತ್ತಿವೆ. ಇನ್ನು ಕೆಲವರು ಅತ್ಯಾಚಾರವನ್ನೇ ಸಮರ್ಥಿಸುತ್ತಿದ್ದಾರೆ. ಮತ್ತೆ ಕೆಲವರು ಆರೋಪಿಗಳ ಪರವಾಗಿ ಬೀದಿಗಿಳಿದಿದ್ದಾರೆ.ಅದರಲ್ಲಿ ಲಜ್ಜೆಗೆಟ್ಟ “ಬಲಾತ್ಕಾರೀ ಜನತಾ ಪಾರ್ಟಿ” ಯ ಜನಪ್ರತಿನಿಧಿಗಳೂ ಇದ್ದಾರೆ. ಉಳಿದ‌ ಕೆಲವರು ಆರೋಪಿಗಳ ವಿರುದ್ಧ ವಾದಿಸಲು ಮುಂದೆ ಬಂದ ಮಾನವತಾವಾದಿ ಹಿಂದೂ ಧರ್ಮೀಯ ವಕೀಲೆಯೊಬ್ಬರಿಗೆ ಕೊಲೆ ಬೆದರಿಕೆ ಮತ್ತು ಬಹಿಷ್ಕಾರ ಹಾಕುತ್ತಿದ್ದಾರೆ.

ಉನಾವೋ ಅತ್ಯಾಚಾರ ಪ್ರಕರಣದಲ್ಲಿ ಸ್ವತಃ ಜನಪ್ರತಿನಿಧಿಯೊಬ್ಬ ಸಹೋದರ ಸಮೇತ ಭಾಗಿಯಾಗಿದ್ದಾನೆ.‌ ಇದು ಅಚ್ಚೇ ದಿನ್…!!

ಅಚ್ಚೇ ದಿನ್ ನಲ್ಲಿ ಭಾರತದ ಮಾನ ವಿಶ್ವದ ಮುಂದೆ ಮೂರು ಕಾಸಿಗೆ ಹರಾಜಾಗುತ್ತಿದೆ.ಮುಂದೊಂದು ದಿನ ಭಾರತಕ್ಕೆ “ರೇಪಿಸ್ಟ್ ಗಳ ರಾಜಧಾನಿಯೆಂಬ‌” ಹೆಸರು ಬಂದರೂ ಆಶ್ಚರ್ಯವಿಲ್ಲ.

ಅತ್ಯಾಚಾರವೇ ಮಹಾಪರಾಧ. ಸೈಕೋಪಾತ್ ಗಳು ಮಾತ್ರ ಈ ರೀತಿ ಮುಗ್ಧ ಕಂದಮ್ಮಗಳನ್ನು ಅತ್ಯಚಾರ ಮಾಡಬಲ್ಲರು.ಸರಣಿ ಅತ್ಯಾಚಾರಗೈಯಬಲ್ಲರು ಮತ್ತು ಕೊಲ್ಲಬಲ್ಲರು. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ಸಮರ್ಥನೆ ನೋಡಿದರೆ ಈ ದೇಶ ಸೈಕೋಪಾತ್ ಗಳ ಸ್ವರ್ಗವಾಗುತ್ತಿದೆಯೋ ಎಂದು ಭಯವಾಗುತ್ತಿದೆ. ಕೆಡುಕನ್ನು ಜಾತಿ ಧರ್ಮಗಳ ಹೆಸರಲ್ಲಿ ಸಮರ್ಥಿಸುವುದನ್ನು ಧರ್ಮವೆನ್ನುವುದಾದರೆ ಅಂತಹವವರು ಅನುಸರಿಸುವ ಧರ್ಮದ ಬಗ್ಗೆ ವಾಕರಿಕೆ ಬರುತ್ತದೆ.ವಸುದೈವ ಕುಟುಂಬಕಂ, ಲೋಕಾ ಸಮಸ್ತಾ ಸುಖಿನೋ ಭವಂತು… ಎಂದೆಲ್ಲಾ ಬೋಧಿಸಿದ ಹಿಂದೂ ಧರ್ಮವಂತೂ ಇಂತಹ ಸೈಕೋಪಾತ್ ತತ್ವವನ್ನು ಕಲಿಸಿಲ್ಲ.

ಬಿಹಾರದಲ್ಲಿ ಮುಸ್ಲಿಮನೊಬ್ಬ ಆರರ ಹರೆಯದ ಹಿಂದೂ ಧರ್ಮದ ಮಗುವನ್ನು ಅತ್ಯಾಚಾರಗೈದಿಲ್ಲವೇ….? ಎಂದು ಕೆಲವು ಸೈಕೋಪಾತ್ ಗಳು ಪ್ರಶ್ನಿಸುತ್ತಿದ್ದಾರೆ.ಹಾಗಾದ್ರೆ ಇದು ಅದಕ್ಕೆ ಪ್ರತೀಕಾರವೇ….?

ಸಾದತ್ ಹಸನ್ ಮಂಟೋನ   ಕತೆ “ಷರೀಫಾನ್” ನಲ್ಲಿ ಇಂತಹದ್ದೇ ಘಟನೆಯೊಂದು ಬರುತ್ತದೆ.” ತನ್ನ ಮಗಳನ್ನು ಯಾರೋ ಒಬ್ಬ ಹಿಂದೂ ಅತ್ಯಾಚಾರಗೈದದ್ದಕ್ಕೆ ಪ್ರತೀಕಾರವಾಗಿ ಮುಸ್ಲಿಂ ತಂದೆಯೊಬ್ಬ ಹಿಂದೂ ಹೆಣ್ಣುಮಗಳನ್ನು ಅತ್ಯಾಚಾರಗೈದು ಪ್ರತೀಕಾರ ತೀರಿಸುತ್ತಾನೆ. ಆತ ವಾಸ್ತವದಲ್ಲಿ ಅತ್ಯಾಚಾರಗೈಯುವ ಮನಸ್ಥಿತಿಯವನಲ್ಲ. ಆದರೆ ತನ್ನ ಮಗಳನ್ನು ಹಿಂದೂಗಳು ಅತ್ಯಾಚಾರಗೈದು ಕೊಂದಿದ್ದಾರೆ ಎಂಬುವುದಕ್ಕೆ ಪ್ರತೀಕಾರವಾಗಿ ತನ್ನೊಳಗೆ ತನ್ನ ಹೆಂಡತಿ ಮತ್ತು ಮಗಳ ಅಗಲಿಕೆಯ ನೋವು ಸಹಿಸಲಾರದೇ ಆತ ಪ್ರತೀಕಾರಕ್ಕಾಗಿ, ತನ್ನ ಕುಟುಂಬದ ದುರಂತ ಅಂತ್ಯದೊಂದಿಗೆ ಯಾವ ಸಂಬಂಧವೂ ಇಲ್ಲದ ಹಿಂದೂ ಬಾಲೆಯನ್ನು ಅತ್ಯಾಚಾರಗೈಯುತ್ತಾನೆ. ಯಾರೋ ಹಿಂದೂಗಳು ತನ್ನ ಮಗಳನ್ನು ಅತ್ಯಾಚಾರಗೈದಿದ್ದಾರೆಂದು ಅದಕ್ಕೆ ಪ್ರತೀಕಾರ  ತೀರಿಸುವ ಸಲುವಾಗಿ ಒಂದು ಹಿಂದೂ ಬಾಲೆಯನ್ನು ಅತ್ಯಾಚಾರಗೈಯುತ್ತಾನೆ.ಆತನ ರೋಷ ಅತ್ಯಾಚಾರಕ್ಕೆ ಪ್ರತೀಕಾರ ಸಲ್ಲಿಸಿದ ಬಳಿಕವೇ ಇಳಿಯುತ್ತದೆ.ಆ ವರೆಗೆ ರೋಷದ ಕೈಗೆ ಬುದ್ಧಿಯನ್ನು ನೀಡಿರುತ್ತಾನೆ. ಎಲ್ಲಾ ಮುಗಿದ ಬಳಿಕ ತಾನು ಪ್ರತೀಕಾರ ಸಲ್ಲಿಸಿದ ಹಿಂದೂ ಬಾಲೆಯ ಮುಖದಲ್ಲಿ ಆತನಿಗೆ ತನ್ನದೇ ಮೃತ ಮಗಳ ಮುಖ ಕಾಣುತ್ತದೆ.” ಇಂದಿನ ಅತ್ಯಾಚಾರಕ್ಕೆ ಅತ್ಯಾಚಾರದ ಮೂಲಕ ಪ್ರತೀಕಾರ ಎಂದು ವಾದಿಸುವವರ  ಸೈಕೋಪಾತ್  ಮನೋಸ್ಥಿತಿಗೆ ಮಂಟೋನ ಈ ಕತೆ ಕೈಗನ್ನಡಿ ಹಿಡಿಯುತ್ತದೆ.

ಬಿಹಾರದ‌ ಪ್ರಕರಣವನ್ನು ಸಮರ್ಥಿಸಿ ಒಬ್ಬನೇ ಒಬ್ಬ ಒಬ್ಬ‌‌ ಮುಸ್ಲಿಂ ಬೀದಿಗಿಳಿದಿಲ್ಲ ಎನ್ನುವುದು ಅಷ್ಟೇ ವಾಸ್ತವ. ಒಂದು ವೇಳೆ ಇಳ್ದಿದ್ದರೂ ನಾನವರನ್ನೂ ಇದೇ ಧಾಟಿಯಲ್ಲಿ ಜಾಡಿಸುತ್ತಿದ್ದೆ. ಅಥವಾ ಈ ವರೆಗೆ ಯಾವುದಾದರೂ ಅತ್ಯಾಚಾರವನ್ನು ಸಮರ್ಥಿಸಿ ಮುಸ್ಲಿಮನೊಬ್ಬ ಬೀದಿಗಿಳಿದು ಪ್ರತಿಭಟಿಸಿದಿದ್ದರೆ ತೋರಿಸಿ. ಅಂತಹದ್ದನ್ನು ಯಾರಾದರೂ ಇಸ್ಲಾಮ್ ಎಂದರೆ‌ ಅಂತಹ ಇಸ್ಲಾಮಿಗೆ ನನ್ನದೊಂದು‌‌ ಧಿಕ್ಕಾರ. ಪ್ರವಾದಿ (ಸ) ನಮಗೆ ಸ್ಪಷ್ಟವಾಗಿ ಬೋಧಿಸಿದ್ದೇನೆಂದರೆ ” ತನ್ನವರು ಮಾಡುವ ತಪ್ಪನ್ನು ಸಮರ್ಥಿಸುವಾತ ನನ್ನವನಲ್ಲ”

ಅತ್ಯಾಚಾರ ಮುಸ್ಲಿಂ ಮಾಡಿದ್ರೂ ಹಿಂದೂ ಮಾಡಿದ್ರೂ ತಪ್ಪು. ಆದರೆ‌ “ಕಟುವಾ”ದ ಹಿಂದೂ ಏಕ್ತಾ ಮಂಚ್ ಮಾಡಿದ್ದೇನು?

ಮುಗ್ದ ಕಂದಮ್ಮಳ‌ ಅತ್ಯಾಚಾರವನ್ನು‌‌ ಸಮರ್ಥಿಸಿದ್ದು, ಆರೋಪಿಗಳನ್ನು ಬಂಧಿಸದಂತೆ‌ ಪ್ರತಿಭಟನೆ ಮಾಡಿದ್ದು, ಅಧಿಕಾರದ ಸ್ಥಾನದಲ್ಲಿ ‌ಕೂತ ಬಿಜೆಪಿಯ ಲಜ್ಜೆಗೆಟ್ಟ ಮಂತ್ರಿಗಳೂ ಭಾಗವಹಿಸಿದ್ದು…

ಉನ್ನಾವೋದಲ್ಲಿಯೂ ಇದೇ ನಡೆಯಿತು…

ಉನಾವೊ ಪ್ರಕರಣದ ಆರೋಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅದೆಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾನೆಂದರೆ ಆತನ ಮಾನ ಹರಾಜಾದ ಬಳಿಕವೂ ಆತ ” ಆರೋಪ ಯಾರ ಮೇಲೆ ಬಂದಿಲ್ಲ ಹೇಳಿ, ಭಗವಾನ್ ರಾಮನ ಮೇಲೂ‌‌ ಆರೋಪವಿತ್ತೆಂದು ತನ್ನನ್ನು ತಾನು ಧರ್ಮದ ಗುರಾಣಿ ಹಿಡಿದು ಸಮರ್ಥಿಸುತ್ತಾನೆ. ಇದನ್ನು ನೀವು ಹಿಂದೂ ಧರ್ಮವೆನ್ನುವುದಾದರೆ ಅಂತಹ ಹಿಂದೂ ಧರ್ಮಕ್ಕೆ ನನ್ನ ಧಿಕ್ಕಾರ. ನನಗೆ ಬೇಕಿರುವುದು ಸ್ವಾಮಿ ವಿವೇಕಾನಂದ, ಗಾಂಧೀಜಿ ಬೋಧಿಸಿದ , ಅನುಸರಿಸಿದ‌‌ ಹಿಂದೂ ಧರ್ಮ…

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group