ರಾಜ್ಯ ಸುದ್ದಿ

ಐಕ್ಯತೆಯಿಂದ ಕೋಮುವಾದಿ ಶಕ್ತಿಗಳನ್ನು ಮೆಟ್ಟಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ: ಜ್ಞಾನ ಪ್ರಕಾಶ್ ಸ್ವಾಮೀಜಿ

ವರದಿಗಾರ (ಎ.9): ಐಕ್ಯತೆಯಿಂದ ಕೋಮುವಾದಿ ಶಕ್ತಿಗಳನ್ನು ಮೆಟ್ಟಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.

ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಮೈಸೂರಿನ ರಾಜೀವನಗರದ ಅಲ್‍ಬದರ್ ವೃತ್ತದ ಬಳಿ ಆದಿತ್ಯವಾರ ಹಮ್ಮಿಕೊಂಡಿದ್ದ ‘ಜನಾಧಿಕಾರಕ್ಕಾಗಿ ಜನಾಂದೋಲನ’ ಬೃಹತ್ ಸಮಾವೇಶನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕೋಮುವಾದಿ ಶಕ್ತಿಗಳಿಂದ ಪ್ರಜಾಪ್ರಭುತ್ವ ನಾಶವಾಗುತ್ತಿರುವ ಪರಿಸ್ಥಿತಿಯಲ್ಲಿ ಎಸ್‍ಡಿಪಿಐ ಜನಾಧಿಕಾರಕ್ಕಾಗಿ ಜನಾಂದೋಲನದಂತಹ ಜನಜಾಗೃತಿ ಸಮಾವೇಶವನ್ನು ನಡೆಸುತ್ತಿರುವುದು ಅನಿವಾರ್ಯವಾಗಿದೆ. ನಾವೆಲ್ಲರೂ ಜೊತೆಗೂಡುವ ಸಮಯ ಸನ್ನಿಹಿತವಾಗಿದೆ ಮತ್ತು ಅಧಿಕಾರದತ್ತ ಹೆಜ್ಜೆಯಿಡಬೇಕಾದಂತಹ ಅನಿವಾರ್ಯತೆಯಿದ್ದು ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕಾಗಿದೆ. ಒಂದು ವೇಳೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ, ಶೋಷಿತ ದಮನಿತ ವರ್ಗಗಳು ಒಂದಾದರೆ ಕೆಂಪು ಕೋಟೆಯನ್ನೂ ನಮ್ಮದಾಗಿಸಬಹುದು. ಐಕ್ಯತೆಯಿಂದ ಕೋಮುವಾದಿ ಶಕ್ತಿಗಳನ್ನು ಮೆಟ್ಟಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಕೆಲವರಿಂದ ಕೆಲವರಿಗಾಗಿ ಮಾತ್ರ ಸೀಮಿತವಾಗಿದೆ. ದೇಶದಲ್ಲಿ ಕೋಮು ಶಕ್ತಿಗಳು ವಿಜೃಂಭಿಸುತ್ತಿದೆ. ನೀವು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ರ ಅನುಯಾಯಿಗಳಾಗಿರುವುದರಿಂದ ಸ್ವಾಭಿಮಾನಿಗಳಾಗಿ. ಆಮಿಷಗಳಿಗಾಗಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಎಂದು ಅವರು ಕರೆ ನೀಡಿದರು. ಎಸ್‍ಡಿಪಿಐ ಯು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವಂತಹ ಕೆಲಸ ಮಾಡುತ್ತಿರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಗಳನ್ನು ಆಶೀರ್ವದಿಸಿ ಎಂದು ಹೇಳಿದರು.

ಜನನಾಯಕನಾಗಲು ನನ್ನನ್ನು ಆರಿಸದಿರಿ, ಜನಸೇವಕನಾಗುವುದಕ್ಕಾಗಿ ಆರಿಸಿ: ಅಬ್ದುಲ್ ಮಜೀದ್

5 ವರ್ಷಗಳಿಗೊಮ್ಮೆ ಮತವನ್ನು ಕೇಳುವ ಶಾಸಕನಾಗಲು ನಾನು ಇಚ್ಛಿಸುವುದಿಲ್ಲ. ಜನನಾಯಕನಾಗಲು ನನ್ನನ್ನು ಆರಿಸದಿರಿ, ಬದಲಾಗಿ ಜನರ ಸೇವಕನಾಗುವುದಕ್ಕಾಗಿ ಚುನಾಯಿಸಿ ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರ ಎಸ್‍ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಹೇಳಿದ್ದಾರೆ.

ರಾಜಕೀಯವೆಂದರೆ ಅಧಿಕಾರಕ್ಕೆ ಬಂದು ಜನರ ಸೇವೆ ಮಾಡುವುದಾಗಿದೆ. ಆದರೆ ಇಂದು ಅಧಿಕಾರಕ್ಕೆ ಬಂದವರು ತಮ್ಮನ್ನೇ ಅಭಿವೃದ್ಧಿಗೊಳಿಸುವುದಲ್ಲಿ ನಿರತರಾಗಿದ್ದಾರೆ ಎಂದು ಅಬ್ದುಲ್ ಮಜೀದ್ ಖೇಧ ವ್ಯಕ್ತಪಡಿಸಿದರು. ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವೆಂದು ನರಸಿಂಹರಾಜ ಕ್ಷೇತ್ರ ಖ್ಯಾತಿ ಪಡೆದಿರುವುದು ಇಲ್ಲಿನ ಜನಪ್ರತಿನಿಧಿಯ ನಿಷ್ಕ್ರೀಯತೆಯನ್ನು ಸೂಚಿಸುತ್ತದೆ. ಕಳೆದ ಹಲವು ವರ್ಷಗಳಿಂದ ಈ ದೇಶದ ಅಲ್ಪಸಂಖ್ಯಾತರ, ದಲಿತರ ಮತ್ತು ಹಿಂದುಳಿದ ವರ್ಗದ ಮೇಲೆ ಯಾವುದೇ ರೀತಿಯ ಅನ್ಯಾಯವಾದರೂ ಕೇಳುವವರರೇ ಇರಲಿಲ್ಲ. ಆದರೆ ಇಂದು ಎಲ್ಲ ರೀತಿಯ ಅನ್ಯಾಯದ ವಿರುದ್ಧ ಪ್ರಶ್ನಿಸಲು, ಜನಪ್ರತಿನಿಧಿಗಳನ್ನು ಎಚ್ಚರಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಂಚೂಣಿಯಲ್ಲಿದೆ. ಎಸ್‍ಡಿಪಿಐ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಭದ್ರತೆಯಿರುವ ನಾಳೆಗಳಿಗಾಗಿ ಮತ್ತು ಜನರ ಸಮಸ್ಯೆಯ ಪರ ವಿಧಾನಸೌಧದೊಳಗೂ ಹೊರಗೂ ಧ್ವನಿಯಾಗಲು ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಆಶಯ-ಆದರ್ಶಗಳನ್ನು ಜಾರಿಗೆ ತರಲು ಮತ್ತು ಸರ್ವರಿಗೂ ಸಮಪಾಲು-ಸಮಬಾಳು ಇರುವ ಸುಂದರ ದೇಶದ ಸ್ಥಾಪನೆಗಾಗಿ ಎಸ್‍ಡಿಪಿಐ ಪಣತೊಟ್ಟಿದೆ. ನರಸಿಂಹರಾಜ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್‍ಡಿಪಿಐಯನ್ನು ಚುನಾಯಿಸಿ ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಹೂಡೆ ವೆಂಕಟೇಶ್

ಭಾರತೀಯ ಸಾಮಾಜಿಕ ಪರಿವರ್ತನಾ ಚಳುವಳಿಯ ರಾಜ್ಯ ಸಂಚಾಲಕ ಹೂಡೆ ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ನಿರಂತರವಾಗಿ ದೇಶವನ್ನು ಆಳುತ್ತಾ ಬಂದಿರುವ ಇವರೆಡೂ ರಾಷ್ಟ್ರೀಯ ಪಕ್ಷಗಳು ದೇಶದ ಅಭಿವೃದ್ಧಿಗಾಗಿ ಯೋಚಿಸಲ್ಲ ಹಾಗೂ ದೇಶದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯಾವುದೇ ಯೋಚನೆ ಮತ್ತು ಯೋಜನೆಯನ್ನು ಹಾಕದೆ ನಿರಂತರವಾಗಿ ವಂಚಿಸುತ್ತಲೆ ಬಂದಿದೆ. ಅಧಿಕಾರ ಚಲಾಯಿಸುವುದು ಹೇಗೆ ಎಂಬುವುದು ಮುಸ್ಲಿಮರ ಮತ್ತು ದಲಿತರ ರಕ್ತದಲ್ಲಿ ಕರಗತವಾಗಿದೆ. ನಕಲಿ ಜಾತ್ಯಾತೀತ ಪಕ್ಷಗಳಿಂದ ಮತ್ತು ಕೋಮುವಾದಿಗಳ ಕೈಗಳಿಂದ ಅಧಿಕಾರವನ್ನು ಪಡೆದು ದೇಶವನ್ನು ಕಟ್ಟಬೇಕಾಗಿದೆ. ಅದಕ್ಕಾಗಿ ಹುಟ್ಟಿದ ಸ್ವಾಭಿಮಾನಿ ಚಳುವಳಿಯಾಗಿದೆ ಎಸ್‍ಡಿಪಿಐ ಎಂದು ಹೇಳಿದರು.

ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾದರೆ ಇತಿಹಾಸ ನಿರ್ಮಾಣವಾಗಲಿದೆ: ನ್ಯಾಯವಾದಿ ಶರಫುದ್ದೀನ್

ಎಸ್‍ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಶರಫುದ್ದೀನ್ ಮಾತನಾಡಿ, ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾದರೆ ಇತಿಹಾಸ ನಿರ್ಮಾಣವಾಗಲಿದೆ. ಅದೇ ಇತಿಹಾಸವು ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಪ್ರಜಾಪ್ರಭುತ್ವ, ಸಂವಿಧಾನವನ್ನು ಗೌರವಿಸುವ ಎಸ್‍ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಅವರು ಕರೆ ನೀಡಿದರು.

ಮೈಸೂರು ನಗರಾಧ್ಯಕ್ಷ ಅಝಾಂ ಪಾಶ ಪ್ರಸಾವಿಕವಾಗಿ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಫ್, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ಮೈಸೂರು ಅಬೂ ಹನೀಫ ಮಸೀದಿಯ ಖತೀಬರಾದ ಮೌಲನಾ ನೂರುದ್ದೀನ್ ಸಂದಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ರಾಜ್ಯ ಕಾರ್ಯದರ್ಶಿಗಳಾದ ಅಲ್ಫೋನ್ಸೋ ಪ್ರಾಂಕೋ, ಅಕ್ರಂ ಹನಸ್, ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಮೈಸೂರು ನಗರ ಪಾಲಿಕೆ ಸದಸ್ಯರಾದ ಸ್ವಾಮಿ, ರೇಶ್ಮಾ ಜಬೀನ್, ದಲಿತ ಮುಖಂಡರಾದ ಚೋರ್ನಳ್ಳಿ ಶಿವಣ, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಆಲೂರು ಮಲ್ಲಣ್ಣ, ಮಹಾದೇವ್, ರಿತೇಶ್, ಪ್ರಸನ್ನ ಚಕ್ರವರ್ತಿ, ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಕೌಶನ್ ಬೇಗ್ ಸ್ವಾಗತಿಸಿ, ಚೇತನ್ ವಂದಿಸಿ, ಅಪ್ಸರ್ ಹಾಗೂ ಜಾಫರ್ ಪಾಶ ಕಾರ್ಯಕ್ರಮ ನಿರೂಪಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group