ವರದಿಗಾರ ವಿಶೇಷ

ಬಿಜೆಪಿ ಐಟಿ ಸೆಲ್ ಮಾಜಿ ಕಾರ್ಯಕರ್ತನಿಂದ ಬಹಿರಂಗಗೊಂಡ  ಬಿಜೆಪಿಯ ‘ಅನೈತಿಕ’ ರಣತಂತ್ರ!

ರೂ. 300 – ರೂ.1000 ದೈನಿಕ ವೇತನ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗಾಗಿ ಹೋರಾಡುವ ಕಾಲಾಳುಗಳು

ಸುಳ್ಳು ಸುದ್ದಿಯೇ ಇವರ ಪ್ರಧಾನ ಬಂಡವಾಳ!

ಕ್ರೈಂ ನ್ಯೂಸ್ ಹುಡುಕಿ ಅದಕ್ಕೆ ‘ಹಿಂದೂ-ಮುಸ್ಲಿಮ್’ ಬೆರೆಸಿ ಧ್ವೇಷ ಹರಡುವ ದುಷ್ಕರ್ಮಿಗಳು!

ವರದಿಗಾರ: ದೇಶದ ರಾಜಕೀಯದಲ್ಲಿ ಸಾಮಾಜಿಕ ಜಾಲತಾಣವು ವಿಶೇಷ ಪಾತ್ರವನ್ನು ವಹಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದಲ್ಲಿ ಸಾಮಾಜಿಕ ಜಾಲತಾಣವನ್ನು ರಾಜಕೀಯ ರಣತಂತ್ರದ ಭಾಗವಾಗಿ ಮೊದಲು ಯಶಸ್ವಿಯಾಗಿ ಉಪಯೋಗಿಸಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿಯ ಯಶಸ್ಸನ್ನು ಕಂಡು ಆಮ್ ಆದ್ಮಿ ಪಾರ್ಟಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳೂ ತಡವಾಗಿ ಸಮಾಜಿಕ ಜಾಲತಾಣವನ್ನು ತಮ್ಮ ರಣತಂತ್ರದಲ್ಲಿ ಸೇರಿಸಿಕೊಂಡವು. ದೇಶದಲ್ಲಿ ಬಲಿಷ್ಟವಾಗಿರುವ ಐಟಿ ಸೆಲ್ ಹೊಂದಿರುವ ಪಕ್ಷ ಬಿಜೆಪಿ ಎನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ.

ಸುಳ್ಳು ಸುದ್ದಿ, ವದಂತಿ, ಕೋಮು ಧ್ವೇಷಗಳನ್ನು ಹರಡುವ ಸಂದೇಶಗಳೇ ಬಿಜೆಪಿಯ ಪ್ರಮುಖ ಬಂಡವಾಳ ಎಂದು ಹಲವು ಆರೋಪಗಳು ಹೊರಬಂದಿದ್ದರೂ, ಸ್ಪಷ್ಟವಾದ ಪುರಾವೆಗಲಿರಲಿಲ್ಲ. ಈ ಹಿಂದೆ ಹಿರಿಯ ಪತ್ರಕರ್ತೆ ಸ್ವಾತಿ ಚತುರ್ವೇದಿಯವರು ಈ ಬಗ್ಗೆ ತನ್ನ ತನಿಖಾ ವರದಿಯನ್ನು ‘ಐ ಆಮ್ ಎ ಟ್ರಾಲ್‘ (I am a Troll) ಎಂಬ ಪುಸ್ತಕದ ಮೂಲಕ ಪ್ರಕಟಿಸಿದ್ದರು. ಹಲವು ಐಟಿ ಸೆಲ್ ಕಾರ್ಯಕರ್ತರನ್ನು ಸಂದರ್ಶಿಸಿ ತಯಾರಿದ ಈ ತನಿಖಾ ವರದಿ ಬಿಜೆಪಿಯ ‘ಅನೈತಿಕ’ ಕಾರ್ಯತಂತ್ರಗಳನ್ನು ಬಹಿರಂಗಗೊಳಿಸಿತ್ತು.

ಇದೀಗ ಯೂಟ್ಯೂಬರ್ ಧ್ರುವ ರತೀ ಬಿಜೆಪಿಯ ಮಾಜಿ ಐಟಿ ಸೆಲ್ ಕಾರ್ಯಕರ್ತನೋರ್ವನ ಜೊತೆ ವೀಡಿಯೋ ಕರೆಯ ಮೂಲಕ ನಡೆಸಿದ ಸಂದರ್ಶನವನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಸಂದರ್ಶನದಲ್ಲಿ ರಾಜಸ್ತಾನ ಮೂಲದ ಬಿಜೆಪಿಯ ಮಾಜಿ ಐಟಿ ಸೆಲ್ ಕಾರ್ಯಕರ್ತ ಮಹಾವೀರ್, ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಸೂಚಿಯ ಬಗ್ಗೆ ವಿವರಿಸಿದ್ದಾರೆ.

ಸಂದರ್ಶನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು:

*ಬಿಜೆಪಿ ಐಟಿ ಸೆಲ್ ಹಲವು ಸಾಮಾಜಿಕ, ರಾಜಕೀಯ ನಾಯಕರು, ಬಾಲಿವುಡು ತಾರೆಯರು ಹಾಗೂ ಭಾರತೀಯ ಸೇನೆಯ ಹೆಸರಲ್ಲಿ ಫೇಸ್ಬುಕ್ ನಲ್ಲಿ ನಕಲಿ ಪೇಜ್’ಗಳನ್ನು ತಮ್ಮ ಸುಳ್ಳು ಸುದ್ದಿ, ವದಂತಿ ಹಾಗೂ ಕೋಮು ಭಾವನೆಗಳನ್ನು ಉದ್ರೇಕಿಸುವ ಸಂದೇಶಗಳನ್ನು ಹರಡಲು ಉಪಯೋಗಿಸುತ್ತಿದೆ.

*ಬಿಜೆಪಿ ಐಟಿ ಸೆಲ್ ನಲ್ಲಿ ‘ಸೂಪರ್ 150‘ ಎಂಬ 150 ಮಂದಿಯ ತಂಡವಿದ್ದು, ಇವರು ನಾಯಕತ್ವವನ್ನು ವಹಿಸುತ್ತಾರೆ. ಈ 150 ಮಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಅವಕಾಶವಿರುತ್ತದೆ.

*ಮಹಾವೀರ್ ಅವರನ್ನು , 2012 ರಲ್ಲಿ ಬಿಜೆಪಿ ಐಟಿ ಸೆಲ್ ಸ್ಥಾಪನೆಯಾದಾಗ ಅದರಲ್ಲಿ ಸೇರಿಸಿಕೊಳ್ಳಲಾಗಿತ್ತು. 2015ರಲ್ಲಿ ಅವರು ಐಟಿ ಸೆಲ್ ನಿಂದ ಹೊರಬಂದರು.

*ಮಹಾವೀರ್ ಪ್ರಕಾರ ಬಿಜೆಪಿ ಐಟಿ ಸೆಲ್ ದೇಶದ ವಿವಿಧ ಭಾಗಗಳಿಂದ ಸುಮಾರು 20,000 ಸದಸ್ಯರನ್ನು ಹೊಂದಿದೆ.

*’ಸೂಪರ್ 150‘ ತಂಡದ ಸದಸ್ಯರು ಸಂದೇಶಗಳನ್ನು ತಯಾರಿಸಿ ದೇಶದಾದ್ಯಂತ ಹರಡಿಕೊಂಡಿರುವ ತಂಡಕ್ಕೆ ಇ ಮೇಲ್ ಹಾಗೂ ಇತರ ವ್ಯವಸ್ಥೆಗಳ ಮೂಲಕ ಏಕ ಕಾಲದಲ್ಲಿ ಕಳುಹಿಸುತ್ತಾರೆ. ನಂತರ ಪೂರ್ವ ನಿರ್ಧರಿತ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶಗಳನ್ನು ಪೋಸ್ಟ್ ಮಾಡಲಾಗುತ್ತದೆ. ಈ ಮೂಲಕ ಯಾವುದೇ ವಿಷಯವನ್ನು ‘ಟ್ರೆಂಡ್‘ ಮಾಡಲು ಸಾಧ್ಯವಾಗುತ್ತದೆ.

*ಬಿಜೆಪಿ ಐಟಿ ಸೆಲ್ ನಿಂದ ಹಲವು ವೆಬ್ ಸೈಟ್ ಗಳನ್ನು ನಡೆಸಲಾಗುತ್ತಿದೆ. 5-10 ದೊಡ್ದ ವೆಬ್ ಸೈಟ್ ಗಳಿದ್ದಲ್ಲಿ ಸಾವಿರಕ್ಕಿಂತಲೂ ಹೆಚ್ಚು ಸಣ್ಣ-ಸಣ್ಣ ವೆಬ್ ಸೈಟ್ ಗಳಿವೆ. ಈ ವೆಬ್ ಸೈಟ್ ಗಳಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ದೇಶದಾದ್ಯಂತ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಗೆ ‘ಹಿಂದೂ-ಮುಸ್ಲಿಮ್’ ಸೇರಿಸಿ ಈ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುತ್ತಿದೆ. ಬಿಜೆಪಿ ಐಟಿ ಸೆಲ್ ನಿಂದ ನಡೆಸಲಾಗುತ್ತಿರುವ ಪ್ರಮುಖ ವೆಬ್ ಸೈಟ್ಗಳು: InsistPost.com, Newshourpress.com, newstrend.news, viralinindia.com

*ಬಿಜೆಪಿ ಐಟಿ ಸೆಲ್ ನಿಂದ ನಡೆಸಲಾಗುತ್ತಿರುವ newstrend.news ವೆಬ್ ಸೈಟ್ ಅಲೆಕ್ಸಾ ರಾಂಕಿಂಗ್ ಪ್ರಕಾರ ಭಾರತದ ‘ಟಾಪ್ 10’ ವೆಬ್ ಸೈಟ್ ಗಳಲ್ಲೊಂದಾಗಿದೆ. ಅಂದರೆ, ಭಾರತದ ಎಲ್ಲಾ ಮಾಧ್ಯಮಗಳ ಅಧಿಕೃತ ವೆಬ್ ಸೈಟ್ ಗಳಿಂಗಿಂತ ಹೆಚ್ಚು ಓದುಗರು ಇವರ ಸುಳ್ಳು ಸುದ್ದಿಯನ್ನು ಹರಡುವ newstrend.news ವೆಬ್ ಸೈಟ್ ಹೊಂದಿದೆ. ಮಹಾವೀರ್ ಹೇಳುವಂತೆ, ಪ್ರತೀ ದಿನ 3 – 3.5 ಕೋಟಿ ಜನರು ಇವರ ವೆಬ್ ಸೈಟ್ ಸಂದರ್ಶಿಸುತ್ತಾರೆ.

*ಪ್ರತೀ ಬಿಜೆಪಿ ಐಟಿ ಸೆಲ್ ಸದಸ್ಯರಿಗೆ ಒಂದು ಲಾಪ್ ಟಾಪ್ ಹಾಗೂ 10 ಮೊಬೈಲ್ ಗಳನ್ನು ನೀಡಲಾಗಿತ್ತು. ಇವರೆಲ್ಲರಿಗೂ 10 ನಂಬರ್ ಮೂಲಕ ವಾಟ್ಸಪ್ ಉಪಯೋಗಿಸಿ ಸಂದೇಶಗಳನ್ನು ಹರಡಿವಂತೆ ಆಜ್ಞೆ ನೀಡಲಾಗಿತ್ತು. ಎಲ್ಲಾ ನಂಬರ್ ಗಳ ಮೂಲಕ 80 – 300 ವಾಟ್ಸಪ್ ಗುಂಪುಗಳನ್ನು ಸೇರಿ ಅಲ್ಲಿಯೂ ಸಂದೇಶಗಳನ್ನು, ಸುಳ್ಳು ಸುದ್ದಿಯ ಲಿಂಕ್ ಗಳನ್ನು ಪೋಸ್ಟ್ ಮಾಡಲಾಗುತ್ತದೆ.

*ಮುಸ್ಲಿಮರ ಹೆಸರಲ್ಲೂ ಹಲವು ಫೇಸ್ಬುಕ್ ಪೇಜ್ ಹಾಗೂ ಅಕೌಂಟ್ಗಳನ್ನು ತೆರೆಯಲಾಗುತ್ತಿದೆ. ಅಲ್ಲಿ ಸಾಮಾನ್ಯವಾಗಿ ಇಸ್ಲಾಮಿಕ್ ಸಂದೇಶಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ನಂತರ, ಬಿಜೆಪಿಯು ಮುಸ್ಲಿಮರಿಗೆ ಯಾವ ರೀತಿ ಸಹಾಯ ಮಾಡುತ್ತಿದೆ ಎಂದು ವಿವರಿಸುವ ಸಂದೇಶಗಳನ್ನು ಪೋಸ್ಟ್ ಮಾಡಲಾಗುತ್ತದೆ. ಅಂದರೆ, ಹಿಂದೂಗಳು ಹೆಚ್ಚಿರುವ ಪೇಜ್ ಗಳಲ್ಲಿ ಮುಸ್ಲಿಮ್ ವಿರೋಧಿ ಸಂದೇಶಗಳನ್ನು ಪೋಸ್ಟ್ ಮಾಡಿ, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಕೆರಳಿಸಲಾಗುತ್ತದೆ. ಆದರೆ, ಮುಸ್ಲಿಮರು ಹೆಚ್ಚಿರುವ ಪೇಜ್ ಗಳಲ್ಲಿ ಬಿಜೆಪಿಯನ್ನು ಮುಸ್ಲಿಮರ ಪರವಾಗಿರುವ ಪಕ್ಷ ಎಂಬಂತೆ ಚಿತ್ರಿಸುವ ಮೂಲಕ ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ.

*ಮಹಾವೀರ್ ಪ್ರತಿದಿನ 1000 ರೂಪಾಯಿಗಳ ವೇತನ ಪಡೆಯುತ್ತಿದ್ದರು. ಐಟಿ ಸೆಲ್ ನಲ್ಲಿ ಅತ್ಯಂತ ಕಡಿಮೆ ದೈನಿಕ ವೇತನ ಅಂದರೆ ರೂ.300. ‘ಸೂಪರ್ 150‘ ತಂಡದಲ್ಲಿರುವವರು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಾರೆ.

ವೀಡಿಯೋ ವೀಕ್ಷಿಸಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group