ಗುಜರಾತ್: ಕುದುರೆ ಸಾಕಿದ್ದಕ್ಕಾಗಿ ಹಾಗೂ ಸವಾರಿ ನಡೆಸಿದ್ದಕ್ಕಾಗಿ ದಲಿತ ಯುವಕನ ಕೊಲೆ

ವರದಿಗಾರ(ಮಾ.30): ಕುದುರೆ ಸಾಕಿದ್ದಕ್ಕಾಗಿ ಹಾಗೂ ಕುದುರೆ ಸವಾರಿ ನಡೆಸಿದ್ದಕ್ಕಾಗಿ ದಲಿತ ಯುವಕನೋರ್ವನು ‘ಮೇಲ್ಜಾತಿ’ಯವರಿಂದ ಹತ್ಯೆಗೀಡಾದ ಘಟನೆ ಗುಜರಾತಿನಿಂದ ವರದಿಯಾಗಿದೆ.
ಗುಜರಾತಿನ ಭಾವನಗರ ಜಿಲ್ಲೆಯ ತಿಂಬಿ ಗ್ರಾಮದ 21 ರ ಹರೆಯದ ದಲಿತ ಯುವಕ ಪ್ರದೀಪ್ ರಾಥೋಡ್ ಎರಡು ತಿಂಗಳ ಹಿಂದೆ ಕುದುರೆ ಖರೀದಿಸಿದ್ದನು. ಇದು ಗ್ರಾಮದ ‘ಮೇಲ್ಜಾತಿ’ಯವರ ಕೋಪಕ್ಕೆ ಕಾರಣವಾಗಿತ್ತು ಹಾಗೂ ಅತನನ್ನು ಗುರುವಾರದಂದು ರಾತ್ರಿ ಕೊಲೆ ಮಾಡಲಾಗಿದೆ.
ಬೆದರಿಕೆಗಳಿಗೆ ಮಣಿದು ಕುದುರೆಯನ್ನು ಮಾರಾಟ ಮಾಡಲು ಪ್ರದೀಪ್ ತೀರ್ಮಾನಿಸಿದ್ದನು, ಆದರೆ ತಾನು ಅವನ ನಿರ್ಧಾರ ಬದಲಿಸುವಂತೆ ಮಾಡಿದ್ದೆನು ಎಂದು ಆತನ ತಂದೆ ಕಾಲುಭಾಯಿ ರಾಥೋಡ್ ತಿಳಿಸಿದರು.
ಪ್ರದೀಪ್ ಗುರುವಾರದಂದು ರಾತ್ರಿ ತಮ್ಮದೇ ತೋಟದಲ್ಲಿ ಕುದುರೆ ಸವಾರಿ ನಡೆಸುತ್ತಿದ್ದನು. ಆದರೆ ಆತನು ಹಿಂತಿರುಗದ ಕಾರಣ ಗಾಬರಿಯಾದ ಮನೆಯವರು ಆತನ ಹುಡುಕಾಟಕ್ಕಿಳಿದರು. ಹತ್ಯೆಗೀಡಾದ ಪ್ರದೀಪನ ಮೃತದೇಹವು ತೋಟದ ರಸ್ತೆಯಲ್ಲಿ ಬಿದ್ದಿತ್ತು. ಸ್ವಲ್ಪ ದೂರದಲ್ಲಿ ಕುದುರೆಯ ಮೃತದೇಹವೂ ಕಂಡು ಬಂದಿದೆ ಎಂದು ಆತನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
3000 ಜನರು ವಾಸಿಸುತ್ತಿರುವ ಗ್ರಾಮದಲ್ಲಿ ಶೇ.10% ದಲಿತರಾಗಿದ್ದಾರೆ.
