ರಾಜ್ಯ ಸುದ್ದಿ

ಅನಂತ್ ಕುಮಾರ್ ಹೆಗ್ಡೆಯ ಸಂವಿಧಾನ ಬದಲಾವಣೆಯ ಹೇಳಿಕೆ ಬಗ್ಗೆ ಪ್ರಶ್ನಿಸಿದ ದಲಿತ ಮುಖಂಡರಿಗೆ ಅಮಿತ್ ಶಾ ಸಭೆಯಿಂದ ಗೇಟ್ ಪಾಸ್ !!

ವರದಿಗಾರ (ಮಾ 30) : ಕರುನಾಡ ಜಾಗೃತಿ ಯಾತ್ರೆ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶುಕ್ರವಾರ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ದಲಿತ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಸಂವಿಧಾನ ಬದಲಾವಣೆಯ ಕುರಿತಾಗಿ ನೀಡಿರುವ ಹೇಳಿಕೆಯ ಪ್ರಶ್ನೆಗೆ ಉತ್ತರ ಕೊಡಲಾಗದೆ ಚಡಪಡಿಸಿದ ಅಮಿತ್ ಶಾ, ನಂತರ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ನಡೆಸಿದರೂ ಪಟ್ಟು ಬಿಡದ ದಲಿತ ಮುಖಂಡರನ್ನು ಸಭೆಯಿಂದಲೇ ಹೊರ ಹಾಕಿದ ಘಟನೆ ನಡೆದಿದೆ.

ಇಂದಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಬಹುತೇಕ ದಲಿತ ಮುಖಂಡರನ್ನು ಆಹ್ವಾನಿಸಲಾಗಿತ್ತು. ಸಂವಾದದಲ್ಲಿ ಬಿಜೆಪಿಯ ದಲಿತ ಮುಖಂಡ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಹಲವರು ಅನಂತ್ ಕುಮಾರ್ ಹೆಗ್ಡೆಯ ಸಂವಿಧಾನದ ಕುರಿತಾಗಿನ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ಇದಕ್ಕುತ್ತರಿಸುತ್ತಾ ಅಮಿತ್ ಶಾ, ಹೆಗ್ಡೆ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಲೇ ಸಭೆಯಲ್ಲಿ ಗೊಂದಲವೇರ್ಪಟ್ಟಿತು. ಕೋಪೋದ್ರಿಕ್ತರಾದ ದಲಿತ ಮುಖಂಡರಾದ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಜನ ಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯಕುಮಾರ್, ಹಾಗಿದ್ದರೆ ಹೆಗ್ಡೆಯನ್ನು ಇನ್ನೂ ಯಾಕೆ ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ? ಇಂದಿನ ಸಂವಾದ ಕಾರ್ಯಕ್ರಮ ನಿಮ್ಮ ಚುನಾವಣಾ ಗಿಮಿಕ್, ದಲಿತರನ್ನು ಓಲೈಸಲು ಮಾಡಿರುವ ನಾಟಕ ಎನ್ನುತ್ತಾ ಆಕ್ರೋಶ ವ್ಯಕ್ತಪಡಿಸುತ್ತಾ ಧಿಕ್ಕಾರ ಕೂಗಿದರು.

ಒಂದು ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪೊಲೀಸರ ಮಧ್ಯ ಪ್ರವೇಶದಿಂದಾಗಿ ಸ್ವಲ್ಪದರಲ್ಲೇ ತಪ್ಪಿ ಹೋಯಿತು. ಚೋರನಹಳ್ಳಿ ಶಿವಣ್ಣ ಅವರ ಪರ ವಹಿಸಿ ಮಾತನಾಡಿದ ಬಹುತೇಕ ದಲಿತ ಮುಖಂಡರು, ಅವರು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದಾರೆ, ಉತ್ತರಿಸಿ ಎಂದು ಹೇಳಿದಾಗ ಅಸಹಾಯಕರಾದ ಅಮಿತ್ ಶಾ,  ಸಭಿಕರಲ್ಲಿ ‘ಕುಳಿತುಕೊಳ್ಳಿ, ಕುಳಿತುಕೊಳ್ಳಿ’ ಎಂದಷ್ಟೆ ಹೇಳುತ್ತಿದ್ದರು. ಈ ವೇಳೆ ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ನಗರ್ಲೆ ವಿಜಯ್‍ಕುಮಾರ್ ಅವರನ್ನು ಪೊಲೀಸರು ಹೊರಗಡೆಗೆ ಎಳೆದೊಯ್ದರು. ಈ ವೇಳೆ ಆಕ್ರೋಶಿತರಾಗಿ ಪ್ರತಿಕ್ರಿಯಿಸಿದ ಅವರು, ‘ನಮ್ಮನ್ನು ಸಂವಾದಕ್ಕೆ ಆಹ್ವಾನಿಸಿ ಅವಮಾನ ಮಾಡುತ್ತಿದ್ದಾರೆ. ದಲಿತರ ಮೇಲೆ ಸವಾರಿ ಮಾಡಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಇವರಿಗೆ ಧಿಕ್ಕಾರ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ. ದಲಿತರ ಭಾವನೆಗೆ ಧಕ್ಕೆ ಬಂದರೆ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ಹೊರನಡೆದರು.

ಘಟನೆಯ ವೀಡಿಯೋ

ಕೃಪೆ : ಸುದ್ದಿ ಟಿವಿ

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group