ಬಿಜೆಪಿಯೊಂದಿಗೆ ಮೈತ್ರಿ ಮಾಡದೇ ಇರುತ್ತಿದ್ದರೆ 15 ಸೀಟು ಹೆಚ್ಚು ಗೆಲ್ಲುತ್ತಿದ್ದೆವು: ಚಂದ್ರಬಾಬು ನಾಯ್ಡು

ವರದಿಗಾರ (ಮಾ.30): ಒಂದು ವೇಳೆ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯೊಂದಿಗೆ ಮೈತ್ರಿ ಮಾಡದೇ ಇರುತ್ತಿದ್ದರೆ ಇನ್ನೂ 15 ಸೀಟುಗಳನ್ನು ಗೆಲ್ಲುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಅವರು ಟಿಡಿಪಿಯ 37ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ತಪ್ಪಿನ ಬಗ್ಗೆ ಮಾತನಾಡಿದ್ದಾರೆ.
ಆಂಧ್ರ ವಿಭಜನೆಯ ನಂತರ ನಾವು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಅದು ರಾಜಕೀಯ ಲಾಭಕ್ಕಾಗಿ ಅಲ್ಲ, ಬದಲಾಗಿ ಕೇವಲ ಅಭಿವೃದ್ಧಿಯ ದೃಷ್ಟಿಯಿಂದ ನಡೆಸಲಾದ ಹೊಂದಾಣಿಕೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ವಿಶೇಷ ಸ್ಥಾನಮಾನದ ನಿಟ್ಟಿನಲ್ಲಿ ಅವರು ನಮಗೆ ಮೋಸ ಮಾಡಿದ್ದಾರೆ’’ ಎಂದು ಹೇಳಿದ್ದಾರೆ.
ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಿಕೆಯನ್ನು ರದ್ದುಗೊಳಿಸುವ ಕುರಿತು ಕೇಂದ್ರ ಸುಳ್ಳುಗಳನ್ನು ಹರಡುತ್ತಿದೆ. ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಆದರೆ ಈಗಲೂ ಅದರ ಪ್ರಯೋಜನವನ್ನು ಈಶಾನ್ಯ ರಾಜ್ಯಗಳಿಗೆ ನೀಡಲಾಗುತ್ತಿದೆ. ಹಾಗಿರುವಾಗ ನಮಗೇಕೆ ನೀಡಲಾಗುತ್ತಿಲ್ಲ ? ಎಂದು ಪ್ರಶ್ನಿಸುತ್ತಾ, ‘ಅದು ನಮ್ಮ ಹಕ್ಕು’ ಎಂದು ಹೇಳಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಆಡಳಿತ ಬಿಜೆಪಿಯೊಂದಿಗಿನ ಟಿಡಿಪಿಯ ವಿರಸದ ನಡುವೆಯೇ ಚಂದ್ರಬಾಬು ನಾಯ್ಡು ಅವರ ಈ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಟಿಡಿಪಿ ಈಗಾಗಲೇ ಎನ್ಡಿಎ ಮೈತ್ರಿಕೂಟದಿಂದ ಹೊರನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
