ವಿದೇಶ ಸುದ್ದಿ

ಮಸ್ಕತ್: ಜೀವನ್ಮರಣದಲ್ಲಿದ್ದ ಕರಾವಳಿಯ ವ್ಯಕ್ತಿಗೆ ಆಸರೆಯಾದ ಸೋಶಿಯಲ್ ಫೋರಮ್

ವರದಿಗಾರ (ಮಸ್ಕತ್, ಮಾ. 27) :  ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ತವರಿಗೆ ಹಿಂತಿರುಗಲು ಸಾಧ್ಯವಾಗದೆ ಅನಾರೋಗ್ಯಪೀಡಿತರಾಗಿ ಜೀವನ್ಮರಣ ಹೋರಾಟದಲ್ಲಿದ್ದ ಕರಾವಳಿಯ ವ್ಯಕ್ತಿಯೊಬ್ಬರನ್ನು ಪಾರುಗೊಳಿಸುವಲ್ಲಿ ಮಸ್ಕತ್ ಸೋಶಿಯಲ್ ಫೋರಮ್ ಯಶಸ್ವಿಯಾಗಿದೆ. ಹಳೆಯಂಗಡಿ ಚೇಳಾರ್ ನಿವಾಸಿ ಮುಹಮ್ಮದ್ ಕಬೀರ್ ಎಂಬವರೇ ಒಮಾನ್ ನ ಮಸ್ಕತ್ ನಗರದಲ್ಲಿ ಸಂಕಷ್ಟಕ್ಕೀಡಾಗಿದ್ದ ವ್ಯಕ್ತಿಯಾಗಿದ್ದು, ನಿರಂತರ 10 ದಿನಗಳ ಕಾಲ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಊರಿಗೆ ಕಳುಹಿಸಲು ಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು  ಮುಗಿಸಿ ಮಸ್ಕತ್ ವಿಮಾನ ನಿಲ್ದಾಣದ ಮೂಲಕ ಇಂದು (ಮಾರ್ಚ್ 27) ಬೀಳ್ಕೊಡಲಾಗಿದೆ ಎಂದು ಅವರ ಬಿಡುಗಡೆಯ ಉಸ್ತುವಾರಿ ವಹಿಸಿಕೊಂಡಿದ್ದ ಸೋಶಿಯಲ್ ಫೋರಮ್ ನ ಅಬ್ದುಲ್ ಹಮೀದ್  ತಿಳಿಸಿದ್ದಾರೆ. ಈಗಾಗಲೇ ಮನೆಯವರಿಗೆ ಘಟನೆಯ ಎಲ್ಲ ಮಾಹಿತಿಗಳನ್ನು ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಬೇಕಾದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಅಪರೂಪದ ಪ್ರಕರಣ: ಸಂತ್ರಸ್ತ 50ರ ಹರೆಯದ ಕಬೀರ್ ಅವರು 2013 ರಲ್ಲಿ ದುಬೈಗೆ ಉದ್ಯೋಗಕ್ಕೆ ತೆರಳಿದ್ದು 5 ವರ್ಷಗಳ ಕಾಲ ದಣಿವರಿಯದೆ ದುಡಿದಿದ್ದಾರೆ. ಈ ಮಧ್ಯೆ ಅವರು ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಪತ್ರಗಳನ್ನು ಕಳೆದುಕೊಂಡಿದ್ದು ಊರಿಗೆ ಹಿಂತಿರುಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಮೂತ್ರಕೋಶದಲ್ಲಿ ತೊಂದರೆ ಕಾಣಿಸಿಕೊಂಡಾಗ ಒಮಾನ್ ಮಾರ್ಗವಾಗಿ ಊರಿಗೆ ಹಿಂತಿರುಗಲು ಪ್ರಯತ್ನಿಸಿದ್ದರು. ಆದರೆ ಒಮಾನ್ ನ ಮಸ್ಕತ್ ನಗರಕ್ಕೆ ತಲುಪಿದ ಅವರಿಗೆ ಆರೋಗ್ಯ ಪರಿಸ್ಥಿತಿ ಉಲ್ಬಣಿಸಿ ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಆದರೆ ಅವರಲ್ಲಿ ಸರಿಯಾದ ದಾಖಲೆ ಪತ್ರಗಳು ಇಲ್ಲದಿರುವುದರಿಂದ ಪ್ರಕರಣವು ಜಟಿಲಗೊಂಡಿತ್ತು.

ನಗರದಲ್ಲಿ ಅನಾಥರಾಗಿ ಬಿದ್ದಿದ್ದ ಕಬೀರ್ ಅವರನ್ನು ಗಮನಿಸಿದ ಸೋಶಿಯಲ್ ಫೋರಮ್ ಈ ಪ್ರಕರಣವನ್ನು ಬಗೆಹರಿಸುವ ಕಾನೂನಾತ್ಮಕ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಒಮಾನ್ ಪೊಲೀಸ್ ಇಲಾಖೆ ಮತ್ತು ಭಾರತೀಯ ರಾಯಭಾರ ಕಚೇರಿ ಮತ್ತು ಆಸ್ಪತ್ರೆಯ ಆಡಳಿತ ವಿಭಾಗದೊಂದಿಗೆ ಸಮಾಲೋಚನೆ ನಡೆಸಿತ್ತು. ಭಾರತೀಯ ರಾಯಭಾರಿ ಕಚೇರಿಯು ಅತ್ಯುತ್ತಮ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ಸ್ಪಂದಿಸಿತು.

ಇದೀಗ ಕಬೀರ್ ಅವರು ಚೇತರಿಸಿಕೊಳ್ಳುತ್ತಿದ್ದು ತಕ್ಷಣವೇ ಅವರಿಗೆ ಇನ್ನೊಂದು ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಅವರನ್ನು ಊರಿಗೆ ತಲುಪಿಸಲು ಬೇಕಾದ ತುರ್ತು ನಿರ್ಗಮನ ಪಾಸ್ ಪೋರ್ಟ್ ಮತ್ತು ಗಾಲಿಕುರ್ಚಿ ಸಹಿತ ಪ್ರಯಾಣದ ವಿಮಾನದ ಟಿಕೇಟನ್ನು ವ್ಯವಸ್ಥೆಗೊಳಿಸಿ ಮಾರ್ಚ್ 27ರಂದು ಮಂಗಳವಾರ ಸಂಜೆ ಕಬೀರ್ ಅವರು ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.

ಕೃತಜ್ಞತೆ: ಪ್ರರಣದ ಸುಖಾಂತ್ಯಕ್ಕೆ ಸಹಕರಿಸಿದ ಸೋಶಿಯಲ್ ಫೋರಮ್ ಕಾರ್ಯಕರ್ತರಾದ ಮುಹಮ್ಮದ್ ಆಸಿಫ್, ಸಂಶುದ್ದೀನ್, ನೂರುದ್ದೀನ್, ಯೂಸುಫ್ ಮುಕ್ಕ, ಮುಆಝ್, ಆಸಿಫ್ ಹಳೆಯಂಗಡಿ, ಅಬ್ದುಲ್ ಸಲಾಮ್ ತುಂಬೆ ಮುಂತಾದವರಿಗೆ ಸೋಶಿಯಲ್ ಫೋರಮ್ ಕೃತಜ್ಞತೆ ಸಲ್ಲಿಸುತ್ತದೆ.

ಅಲ್ಲದೆ ಕಬೀರ್ ಅವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿದ ಹಾಗೂ ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ ಪಾಪ್ಯುಲರ್ ಫ್ರಂಟಿನ ನವಾಝ್ ಉಳ್ಳಾಲ ಅವರಿಗೂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಸೋಶಿಯಲ್ ಫೋರಂ ತನ್ನ  ಪ್ರಕಟಣೆಯಲ್ಲಿ ತಿಳಿಸಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group