ಬಿಜೆಪಿಯ ಕೋಮು ಪ್ರಚೋದಕ ‘ಮಂಗಳೂರು ಚಲೋ ಜನ ಸುರಕ್ಷಾ ಯಾತ್ರೆ’ಗೆ ಅವಕಾಶ ನೀಡದಿರಲು ಎಸ್ ಡಿ ಪಿ ಐ ಆಗ್ರಹ

ವರದಿಗಾರ (ಮಾ 3) : ಮಾರ್ಚ್ 03 ರಿಂದ 06 ರ ತನಕ ಬಿಜೆಪಿ ಸುಳ್ಳು ಹಿಂದೂ ಕಾರ್ಯಕರ್ತರ ಹತ್ಯೆಯ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಸಂಕೋಲೆಯಿಂದ ಮತ್ತು ಕುಶಲನಗರ ಎರಡು ಕಡೆಗಳಿಂದ ಜನಸುರಕ್ಷಾ ಯಾತ್ರೆಯ ಹೆಸರಿನಲ್ಲಿ ಮಂಗಳೂರಿನಲ್ಲಿ ಹೊರ ಜಿಲ್ಲೆಗಳಿಂದ ಜನರನ್ನು ಕರೆಸಿ ಮಾರ್ಚ್ 06 ರಂದು ನಡೆಸಲುದ್ದೇಶಿಸಿರುವ “ಮಂಗಳೂರು ಚಲೋ”ಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
ಬಿಜೆಪಿ ಜನ ಸುರಕ್ಷಾ ಯಾತ್ರೆಯು ಕುಶಲನಗರ, ಮಡಿಕೇರಿ,ಸುಳ್ಯ,ಪುತ್ತೂರು, ಬಿಸಿರೋಡು ಮತ್ತು ಅಂಕೋಲ,ಕುಮುಟ,ಹೊನ್ನಾವರ, ಭಟ್ಕಳ, ಬೈಂದೂರು,ಕುಂದಾಪುರ,ಉಡುಪಿಯಿಂದ ಯಾತ್ರೆಯ ಮೂಲಕ ಬಂದು ಮಂಗಳೂರಿನಲ್ಲಿ ಪಾದಯಾತ್ರೆ ಹಾಗೂ ಸಮಾವೇಶ ನಡೆಯುತ್ತದೆ ಎಂದು ಅದರ ಸಂಘಟಕರು ತಿಳಿಸಿರುವರು.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಮತ್ತು ಸಂಘಪರಿವಾರದ ಕಾರ್ಯಕರ್ತರಿಂದ ಎರಡು ಮುಗ್ಧ ಜೀವಗಳು(ದೀಪಕ್ ರಾವ್,ಬಶೀರ್) ಬಲಿಯಾಗಿ, ಎರಡು ಮುಸಲ್ಮಾನರು ಚೂರಿ ಇರಿತಕ್ಕೊಳಗಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಇನ್ನೇನು ಜಿಲ್ಲೆಯು ಶಾಂತಿಯತ್ತ ಬರುತ್ತಿರುವಾಗ ಮತ್ತೆ ಸುಳ್ಳು ಹತ್ಯೆಯ ಪಟ್ಟಿಯನ್ನು ಇಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಜಿಲ್ಲೆಯಲ್ಲಿ ಶಾಂತಿಯನ್ನು ಕದಡುವ ಹುನ್ನಾರ ಬಿಜೆಪಿ ನಡೆಸುತ್ತಿದೆ.
ಬಿಜೆಪಿ ಜಿಲ್ಲೆಯಲ್ಲಿ ಮಂಗಳೂರು ಚಲೋ ಜನ ಸುರಕ್ಷಾ ಯಾತ್ರೆಯ ಮೂಲಕ ಗಲಭೆಗೆ ಮುನ್ನುಡಿ ಹಾಕಿ ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸುವ ತಂತ್ರಗಾರಿಕೆಯೂ ಇದರ ಹಿಂದಿದೆ. ತಮ್ಮ ರಾಜಕೀಯ ಲಾಭಕ್ಕೋಸ್ಕರ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಇಲಾಖೆಗೆ 23 ಕೊಲೆಯ ಸುಳ್ಳು ವರದಿಯ ಪಟ್ಟಿಯನ್ನು ರವಾನಿಸಿ ಮುಜುಗರಕ್ಕೀಡಾದ ಅದೇ ಪಟ್ಟಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಜನ ಸುರಕ್ಷಾ ಯಾತ್ರೆ ನಡೆಸುತ್ತಿದೆ.
ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಬಹಳಷ್ಟು ರಕ್ತಪಾತಗಳನ್ನು ನಡೆಸಿದೆ 23 ಮುಸಲ್ಮಾನರನ್ನು ಮಾತ್ರವಲ್ಲದೆ 13 ಮಂದಿ ಅಮಾಯಕ ಹಿಂದುಗಳನ್ನು(ವಿನಾಯಕ ಬಾಳಿಗ, ಪ್ರವೀಣ್ ಪೂಜಾರಿ,ಹರೀಶ್ ಪೂಜಾರಿ,ಪ್ರತಾಪ್ ಮರೋಳಿ,ಕೃಷ್ಣಯ್ಯ ಪಾಟಾಳಿ,ಭಾಸ್ಕರ್ ಕುಂಭ್ಳೆ,ಶ್ರೀನಿವಾಸ್ ಬಜಾಲ್,ಹರೀಶ್ ಭಂಡಾರಿ ಕುಳಾಯಿ,ಶಿವರಾಜ್ ಕೋಡಿಕೆರೆ,ಪ್ರಕಾಶ್ ಕುಳಾಯಿ,ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್, ಕೇಶವ ಪೂಜಾರಿ ಸೂರಿಂಜೆ)ಬರ್ಬರವಾಗಿ ಹತೈಗೈದಂತಹ ಸಂಘಪರಿವಾರ ಮತ್ತು ಬಿಜೆಪಿಗೆ ಯಾವ ನೈತಿಕತೆ ಇದೆ ಹಿಂದೂ ಧರ್ಮದ ಬಗ್ಗೆ ಮಾತನಾಡಲು. ರಾಜಕೀಯ ಲಾಭಕ್ಕಾಗಿ ಮತ್ತು ಅವರ ಸಿದ್ಧಾಂತವನ್ನು ವಿರೋಧಿಸುವ ಯಾರನ್ನು ಬೇಕಾದರೂ ಹತೈಗೈಯುವ ಬಿಜೆಪಿ ಮತ್ತು ಸಂಘಪರಿವಾರದಿಂದ ಜನರು ದೂರ ಹೋಗುವ ಸಂದರ್ಭದಲ್ಲಿ ಸುಳ್ಳು ಆರೋಪಗಳನ್ನು ಹಾಕಿ ಮತ್ತೆ ರಾಜಕೀಯ ಲಾಭಕ್ಕಾಗಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ ಅಮಾಯಕರ ರಕ್ತ ಹೀರುಲು ಬಿಜೆಪಿ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೆ ಇಡೀ ದೇಶದಲ್ಲಿಯೇ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿನಲ್ಲಿ ಬಂದು ಯಾವ ಸೀಮೆಯ ಭಾಷಣ ಮಾಡಬಹುದು. ಪ್ರಚೋದನಾಕಾರಿ ಭಾಷಣ ಮಾಡುವಲ್ಲಿ ನಿಪುಣರಾದ ಯೋಗಿಯಿಂದ ಜಿಲ್ಲೆಯ ಶಾಂತಿ ಹದೆಗೆಡುವ ಎಲ್ಲಾ ಸನ್ನಿವೇಶವು ಇದೆ.
ಈಗಾಗಲೇ ಉಡುಪಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರ ಪ್ರಚೋದಿತ ಭಾಷಣದಿಂದ ಆವೇಶಭರಿತರಾದ ಬಿಜೆಪಿಯ ಕಾರ್ಯಕರ್ತರು ಮಂಗಳೂರಿನ ಕಸಬ ಬೆಂಗ್ರೆಯಲ್ಲಿ ನಡೆಸಿದ ಘಟನೆ ಮಾಯುವ ಮುನ್ನವೇ ಈ ರೀತಿಯ ಮಂಗಳೂರು ಚಲೋ ದ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮ ಅಶಾಂತಿ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲಿಕ್ಕಾಗಿದೆ.
ಆದುದರಿಂದ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಸಹಜ ಸ್ಥಿತಿಗೆ ಬಂದಿರುವ ಜಿಲ್ಲೆಯ ಸ್ಥಿತಿಯನ್ನು ಬೇರೆ ಜಿಲ್ಲೆಯಿಂದ ಬಂದು ಶಾಂತಿಯನ್ನು ಹದೆಗೆಡುವ ಬಿಜೆಪಿಯ ಯಾವ ಕಾರ್ಯಕ್ರಮಕ್ಕೂ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದು,ನೀಡಿದಲ್ಲಿ ಅದರಿಂದ ಉಂಟಾಗುವ ಎಲ್ಲಾ ಅನಾಹುತಗಳಿಗೆ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗುತ್ತದೆ ಎಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
