ವರದಿಗಾರ: ಐದು ಮಂದಿ ನ್ಯಾಯಾಧೀಶರ ಪೀಠ ಮೂರು ತಲಾಖಿನ ಸಾಂವಿಧಾನಿಕ ಮಾನ್ಯತೆಯ ಕುರಿತಾಗಿ ತನ್ನ ಐತಿಹಾಸಿಕ ತೀರ್ಪನ್ನು ನಾಳೆ ಪ್ರಕಟಿಸಲಿದೆ.
ಐದು ಮಂದಿ ಅರ್ಜಿದಾರ ಮಹಿಳೆಯರಾದ ಸಾಯಿರಾ ಬಾನು, ಅಫ್ರೀನ್ ರಹ್ಮಾನ್, ಇಶ್ರತ್ ಜಹಾನ್, ಗುಲ್ಶನ್, ಪರ್ವೀನ್ ಮತ್ತು ಫರ್ಹಾ ಫೈಝ್ ಇವರುಗಳ ಅರ್ಜಿಯ ಹೊರತಾಗಿ ಅನಿಲ್ ಆರ್ ದಾವೆ ಮತ್ತು ಆದರ್ಶ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ 2015 ರಲ್ಲಿ ಮುಸ್ಲಿಂ ಕುಟುಂಬದ ವಿಚ್ಚೇದನ ಕೇಸೊಂದರಲ್ಲಿ, ಮಹಿಳೆಯರು ತಲಾಖ್ ಮತ್ತು ಬಹುಪತ್ನಿತ್ವದಿಂದಾಗಿ ಲಿಂಗ ತಾರತಮ್ಯಕ್ಕೊಳಪಡುತ್ತಿದ್ದಾರೆಯೇ ಮತ್ತು ಈ ಕುರಿತಾಗಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಸಲ್ಲಿಸಿ ಎಂದಿದ್ದರ ಕುರಿತಾಗಿಯೂ ನಾಳೆ ತೀರ್ಪು ಹೊರ ಬೀಳಲಿದೆ.
ಐದು ಮಂದಿ ನ್ಯಾಯಾಧೀಶರು ಯಾರೆಲ್ಲಾ?
ಸರ್ವ ಧರ್ಮದ ಈ ಸಾಂವಿಧಾನಿಕ ಪೀಠದಲ್ಲಿ ಐದು ಮಂದಿ ನ್ಯಾಯಾಧೀಶರೆಂದರೆ ಮುಖ್ಯ ನ್ಯಾಯಾಧೀಶ ಜೆ ಎಸ್ ಖೇಹರ್, ನ್ಯಾಯಾಧೀಶರಾದಂತಹ ಜೋಸೆಫ್ ಕುರಿಯನ್, ಆರ್ ಎಫ್ ನಾರಿಮನ್, ಯು ಯು ಲಲಿತ್ ಮತ್ತು ನಝೀರ್ ಅಹ್ಮದ್ ಅವರಿದ್ದಾರೆ.
ಬೇಸಿಗೆ ರಜಾಕಾಲದ ಸಮಯದಲ್ಲಿ ಆರು ದಿನಗಳ ಕಾಲ ನಡೆಸಿದ ವಿಚಾರಣೆಯಲ್ಲಿ, ಮೂರು ತಲಾಖ್ ಮುಸ್ಲಿಮರ ಧಾರ್ಮಿಕ ಆಚರಣೆಯಲ್ಲಿರುವ ಕಟ್ಟು ಪಾಡೇ ಅಥವಾ ಅದೊಂದು “ಜಾರಿಗೊಳಿಸಬೇಕಾಗಿ” ಬರುವ ಮೂಲಭೂತ ಹಕ್ಕೇ ಎಂಬುವುದರ ಕುರಿತು ವಿವರವಾಗಿ ವಿಚಾರಣೆ ನಡೆಸಿತ್ತು. ವಿಚಾರಣಾ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು “ದೇವನ ಮುಂದೆ ಪಾಪವೆಂದು ಹೇಳಲ್ಪಡುವ ಕೃತ್ಯವೊಂದು ನ್ಯಾಯದ ಪರವಾಗಿರುವುದೇ? ” ಎಂದು ಸತತವಾಗಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಕುರಿಯನ್ ಕೂಡಾ ಇದನ್ನು ಮತ್ತೊಂದು ಧಾಟಿಯಲ್ಲಿ ಪ್ರಶ್ನಿಸಿದ್ದರು.
ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಪರ ವಕೀಲ ಕಪಿಲ್ ಸಿಬಲ್ ತನ್ನ ಭಾವೋದ್ರಿಕ್ತ ವಾದದಲ್ಲಿ ಮುಸ್ಲಿಮರನ್ನು “ರಣಹದ್ದುಗಳು ಭೇಟೆಯಾಡುತ್ತಿರುವ ಸಣ್ಣ ಹಕ್ಕಿಗಳು” ಎಂದು ಬಣ್ಣಿಸಿದ್ದರು. ಅವರ ಗೂಡುಗಳನ್ನು ಸುಪ್ರೀಂ ಕೋರ್ಟ್ ರಕ್ಷಿಸಬೇಕಾಗಿದೆ, ಮುಸ್ಲಿಮರು ಸುಪ್ರೀಂ ಕೋರ್ಟಿನಲ್ಲಿ ತಮ್ಮ ಧಾರ್ಮಿಕ ಆಚರಣೆ ಮತ್ತು ವೈಯುಕ್ತಿಕ ಕಾನೂನಿನ ರಕ್ಷಣೆಯ ಬಹಳ ನಿರೀಕ್ಷೆಯಲ್ಲಿದ್ದಾರೆಂದು ಒತ್ತಿ ಹೇಳಿದ್ದರು.
