ರಸ್ತೆ ನಿಯಮ ಪಾಲನೆಯಿಂದ ಸುರಕ್ಷಿತ ಪ್ರಯಾಣ ಸಾಧ್ಯ : ಅಲ್ತಾಪ್ ಬಿಳುಗುಳ ಅಭಿಮತ

ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನಕ್ಕೆ ಚಾಲನೆ
ವರದಿಗಾರ (ಫೆ 12) : ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದೆ ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಬೇಕಿದ್ದು ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿದಾಗ ಮಾತ್ರ ಸುರಕ್ಷಿತ ಪ್ರಯಾಣ ಸಾಧ್ಯ ಎಂದು ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ ಸಂಸ್ಥಾಪಕಾಧ್ಯಕ್ಷ ಅಲ್ತಾಪ್ ಬಿಳುಗುಳ ಹೇಳಿದರು.
ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ ವತಿಯಿಂದ ಕೊಟ್ಟಿಗೆಹಾರದಲ್ಲಿ ಶುಕ್ರವಾರ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿರಾಡಿ ಘಾಟ್ ಹಿನ್ನಲೆಯಲ್ಲಿ ಚಾರ್ಮಾಡಿ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಈ ರಾಷ್ಟ್ರೀಯ ಹೆದ್ದಾರಿಯೂ ಗ್ರಾಮೀಣ ಭಾಗದ ಮೂಲಕ ಹಾದು ಹೋಗಿರುವುದರಿಂದ ದನಕರುಗಳು ಸೇರಿದಂತೆ ಇತರ ಜಾನುವಾರುಗಳು ರಸ್ತೆಯಲ್ಲಿ ಕಂಡು ಬರುವುದರಿಂದ ಚಾಲಕರು ಎಚ್ಚರ ವಹಿಸಬೇಕು. ಕೆಲವೆಡೆ ರಸ್ತೆ ಬದಿಯಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದ್ದು ಆ ನಿಯಮಗಳನ್ನು ಪಾಲನೆ ಮಾಡಿ ಎಂದರು.
ಬಣಕಲ್ ರಿವರ್ವ್ಯೂವ್ ಶಾಲೆಯ ನಿರ್ದೇಶಕರಾದ ಎ.ಸಿ. ಇಮ್ರಾನ್ ಮಾತನಾಡಿ ಚಾರ್ಮಾಡಿ ಘಾಟ್ನಲ್ಲಿ ಮಂಗ. ಅಳಿಲು ಸೇರಿದಂತೆ ಕಾಡು ಪ್ರಾಣಿಗಳಿರುವುದರಿಂದ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಚಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ತಿಂಡಿ ತಿನಿಸುಗಳ ಪೊಟಣ್ಣಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದರು.
ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ನ ತಾಲ್ಲೂಕು ಅಧ್ಯಕ್ಷ ನದೀಮ್ ಅಹ್ಮದ್ ಮಾತನಾಡಿ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಚಾರ್ಮಾಡಿ ಘಾಟ್ ಮೂಲಕ ಸುಮಾರು 25 ಕಿ.ಮಿ ಹಾದು ಹೋಗಿದ್ದು ಕಡಿದಾದ ತಿರುವುಗಳು, ಪ್ರಪಾತಗಳಿರುವುದರಿಂದ ವೇಗಮಿತಿಯಲ್ಲಿ ಎಚ್ಚರಿಕೆಯಿಂದ ಪ್ರಯಾಣ ಮಾಡುವ ಅಗತ್ಯವಿದೆ ಎಂದರು.
ಕೊಟ್ಟಿಗೆಹಾರದಲ್ಲಿ ರಸ್ತೆ ಸುರಕ್ಷತೆಯ ಕರಪತ್ರಗಳನ್ನು ಪ್ರಯಾಣಿಕರಿಗೆ ನೀಡಿ ಅರಿವು ಮೂಡಿಸಲಾಯಿತು. ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟ್ನ ನಝೀರ್ ಬಿಳುಗುಳ, ಜಂಶೀದ್, ಸ್ಥಳೀಯರಾದ ಸಾಧಿಕ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.
