ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಸೀರತ್-ಉನ್-ನಬಿ (ಸ.ಅ.) ಕಾರ್ಯಕ್ರಮ

ವರದಿಗಾರ (ಫೆ.12): ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಒಮಾನ್ ಇದರ ವತಿಯಿಂದ 2017-18ರ ಸೀರತ್-ಉನ್-ನಬಿ (ಸ.ಅ.) ಕಾರ್ಯಕ್ರಮ ಮಸ್ಕತ್’ನ ಕೋರಲ್ ಸೆಲೆಬ್ರೇಷನ್ ಹಾಲ್,ಅಲ್ ವಾದಿ ಟವರ್ಸ್ ವಾದಿ ಕಬೀರ್’ನಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಸೂದ್ ಶೇಖ್ ಚಂದಾವರ, “ತನ್ನ ಸಮುದಾಯದೊಂದಿಗೆ ಇತರ ಸಮುದಾಯದ ಕುಂದು ಕೊರತೆಯನ್ನು ನಿವಾರಿಸುವುದರೊಂದಿಗೆ ಬಡ, ನಿರ್ಗತಿಕ ಮತ್ತು ಹಿಂದುಳಿದವರನ್ನು ಮೇಲೆತ್ತುವಲ್ಲಿ ಮತ್ತು ಕೀಳರಿಮೆಯನ್ನು ಕಿತ್ತೊಗೆಯುವಲ್ಲಿ ಪ್ರವಾದಿ ಸ.ಅ ರವರ ಪಾತ್ರ ಅಪಾರ. ಆದ್ದರಿಂದಲೇ ಪ್ರವಾದಿಯವರು ಪ್ರಪಂಚಕ್ಕೇ ಆದರ್ಶ ವ್ಯಕ್ತಿಯಾಗಿ ಮೂಡಿಬಂದರು. ತಪ್ಪುಗಳು ತನ್ನವರಿಂದಾದರೂ ಎಳ್ಳಷ್ಟೂ ಅನ್ಯಾಯಕ್ಕೆ ಸಹಕರಿಸದೆ ನ್ಯಾಯದ ಪರವಾಗಿ ನಿಂತ ಪ್ರವಾದಿವರ್ಯರ ಜೀವಿತಾವಧಿಯಲ್ಲಿನ ಪ್ರತಿಯೊಂದು ಆಗು ಹೋಗುಗಳು ನಮಗೆ ಪ್ರೇರಣೆಯಾಗಿದ್ದು ಅವರ ದಾರಿಯಲ್ಲಿ ಸಾಗಬೇಕಾಗಿರುವುದು ನಮ್ಮ ನಮ್ಮೆಲ್ಲರ ಕರ್ತವ್ಯ”ಎಂದರು.
ಸರ್ಫರಾಝ್ ಹುಬ್ಬಳ್ಳಿ ಮಾತನಾಡಿ, ನಬಿಯವರ ಸೀರತ್ ಚಾಚೂ ತಪ್ಪದೆ ಪಾಲಿಸುತ್ತಾ, ಒಳಿತುಗಳೇ ತುಂಬಿರುವ ಅವರ ಜೀವನದ ಪ್ರತೀ ಹೆಜ್ಜೆಯನ್ನೂ ಮಾದರಿಯಾಗಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ನಿಹಾರ್ ಅಹ್ಮದ್ ಎರ್ಮಾಲ್ ಮನ್ಸೂರ್ ಮಾತನಾಡಿ, ಸಂಸ್ಥೆಯು ಪ್ರತೀ ವರ್ಷವು ನಡೆಸಿಕೊಂಡು ಬರುತ್ತಿರುವ ಸೀರತ್-ಉನ್-ನಬಿ ಕಾರ್ಯಕ್ರಮವು ಹೆಸರಿಗಷ್ಟೇ ಸೀಮಿತವಾಗದೆ ಇಲ್ಲಿ ಸಿಕ್ಕಿರುವ ಸೀರತ್ ಉಪದೇಶ ಮತ್ತು ಉದ್ದೇಶವನ್ನು ಹಿತೈಷಿಗಳೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಅಗತ್ಯವಿರುವ ಕೊರತೆಯ ಕೈಗಳಿಗೆ ಸಹಾಯ ಹಸ್ತ ಚಾಚುತ್ತಾ ಭರವಸೆಯ ಬೆಳಕಾಗುವಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತಿದೆ. ಅದು ಇನ್ನಷ್ಟು ಬಲವಾಗಲು ಯುವಕರು ನಮ್ಮೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಇಂಡಿಯನ್ ಪ್ರವಾಸಿ ಫೋರಂ ಅಧ್ಯಕ್ಷರಾದ ಮುಹಮ್ಮದ್ ಅನ್ವರ್ ಮೂಡಬಿದ್ರೆ, ಡಿ.ಕೆ.ಎಸ್.ಸಿ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹಮಾನ್, ಸೋಶಿಯಲ್ ಫೋರಂ ಅಧ್ಯಕ್ಷರಾದ ಅಬ್ದುಲ್ ಹಮೀದ್ ಪಾಣೆಮಂಗಳೂರು ಉಪಸ್ಥಿತರಿದ್ದರು. ಸಂಸ್ಥೆಯ ಹಿತೈಷಿಯೂ ಸಲಹೆಗಾರರೂ ಆದ ಶಾಹೇಬ್ಝಾದ ಮಹಮೂದ್ ದುಆ ನೆರವೇರಿಸಿದರು.
ಮಕ್ಕಳಿಗಾಗಿ ಕಿರಾಅತ್, ನಾತ್, ಭಾಷಣ, ಆಟೋಟ ಸ್ಪರ್ದೆಯ ಜೊತೆಗೆ ರಕ್ಷಕ ಪ್ರೇಕ್ಷಕರಿಗಾಗಿ ಕಿರಾಅತ್, ನಾತ್ ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಸಭಿಕರಿಗಾಗಿ ಕ್ವಿಝ್ ಕಾರ್ಯಕ್ರಮವು ಏರ್ಪಡಿಸಿ ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಯಶಸ್ವಿಯಾಗಿತ್ತು.
ಸಂಸ್ಥೆಯ ಸಂಕ್ಷಿಪ್ತ ಕಾರ್ಯ ರೂಪು ರೇಷೆಯನ್ನು ಸಯ್ಯದ್ ಮೊಹಿದಿನ್ ಸಾಹೇಬ್ ಸಾಸ್ಥಾನ್ ನೆರೆದ ಸಭಿಕರ ಮುಂದಿಟ್ಟರು. ಎ.ಕೆ ಮೊಹಿಯುದ್ದೀನ್ ಮಂಗಳೂರು ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು. ನೂರ್ ಪಡುಬಿದ್ರೆ ಮತ್ತು ತಂಡ ಮಕ್ಕಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಸಮೀರ್ ಅಹ್ಮದ್ ಉಡುಪಿ ಬಹುಮಾನ ವಿತರಿಸಿದರು. ನಿಯಾಝ್ ಅಹ್ಮದ್ ಮಂಗಳೂರು ಸ್ವಾಗತಿಸಿ, ಅನ್ಸಾರ್ ಕಾಟಿಪಳ್ಳ ನಬಿಯವರ ಸೀರತ್ ಕವನವನ್ನು ವಾಚಿಸುವುದರ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು. ಶಾಕಿರ್ ಅಹ್ಮದ್ ಮಂಗಳೂರು ಕಿರಾಅತ್ ಮತ್ತು ಧನ್ಯವಾದಗಳನ್ನು ಸಮರ್ಪಿಸಿದರು.
