ವರದಿಗಾರ-ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ಗೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
2008ರ ಸೆಪ್ಟೆಂಬರ್ 29ರಂದು ನಡೆದಿದ್ದ ಮಾಲೆಗಾಂವ್ ಸ್ಫೋಟದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಪ್ರಗ್ಯಾ ಠಾಕೂರ್ ಮತ್ತು ಕರ್ನಲ್ ಪುರೋಹಿತ್ ರನ್ನು ಪ್ರಮುಖ ಆರೋಪಿಗಳಾಗಿ ಪರಿಗಣಿಸಿತ್ತು. ಒಂಬತ್ತು ವರ್ಷಗಳ ಜೈಲುವಾಸದ ನಂತರ ಕೆಲವು ಷರತ್ತುಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಜಾಮೀನು ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಬಳಿಕ ಬಾಂಬೆ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ನ್ಯಾಯಾಮೂರ್ತಿ ಆರ್.ಕೆ ಅಗರ್ವಾಲ್ ಮತ್ತು ಎ.ಎಂ ಸಪ್ರೆ ನೇತೃತ್ವದ ಪೀಠವು ಪುರೋಹಿತ್ ಅವರಿಗೆ ಜಾಮೀನು ನೀಡಿದೆ. ಕಳೆದ ವಾರ ಜಾಮೀನು ಅರ್ಜಿಯನ್ನು ನಿರಾಕರಿಸಿದ ಬಾಂಬೆ ಹೈಕೋರ್ಟ್ ವರ್ತನೆಯನ್ನು ಪ್ರಶ್ನಿಸಿ ಪುರೋಹಿತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
