ನಿಮ್ಮ ಬರಹ

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳ ಪಾತ್ರ

ಮನ್ಸೂರ್ ಅಹ್ಮದ್ ಸಾಮಾನಿಗೆ (ಹವ್ಯಾಸಿ ಪತ್ರಕರ್ತ )

ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ವ್ಯವಸ್ಥೆ. ಭಾರತ ದೇಶದಲ್ಲಿ ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಇರುದರಿಂದ ಜನರೇ ನೇರವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ನಂತರದ ಸ್ಥಾನವನ್ನು ಮಾಧ್ಯಮ ಕ್ಷೇತ್ರಕ್ಕೆ ನೀಡಿದೆ.ಹಾಗೆಯೇ ಮಾಧ್ಯಮ ವಲಯವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಬವೆಂದು ಕರೆಯಲಾಗುತ್ತದೆ.
ಮಾಧ್ಯಮಗಳು ಜನಸಾಮಾನ್ಯರ ಮನಸ್ಸಿನಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಮಾನವೀಯತೆ ಪದದ ಅರ್ಥವನ್ನು ಮರೆತಂತೆ ವರ್ತಿಸತೊಡಗಿದ್ದಾರೆ. ಸ್ವಾರ್ಥಿ ರಾಜಕಾರಣಿಗಳು ಸೇವಾ ಮನೋಭಾವವನ್ನು ದೂರ ತಳ್ಳುತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯ ಗುಣಗಳನ್ನು ಮೂಡಿಸುವಂತಹ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಆದ್ದರಿಂದ ಮಾಧ್ಯಮಗಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ.

ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆದರೂ ಇಡೀ ಪ್ರಜಾಪ್ರಭುತ್ವವನ್ನು ತಹಬದಿಗೆ ತರುವ ಶಕ್ತಿಯನ್ನು ಮಾಧ್ಯಮ ಹೊಂದಿದ್ದು, ಕಳೆದ ಕೆಲವು ದಶಕಗಳಿಂದ ಶಾಸಕಾಂಗ, ಕಾರ್ಯಂಗ, ನ್ಯಾಯಂಗಗಳ ಸಾರಥಿ ಮಾಧ್ಯಮವೇ ಆಗಿರುವುದರಿಂದ ಮಾಧ್ಯಮವನ್ನು ಪ್ರಜಾಪ್ರಭುತ್ವದ ಮೊದಲನೇ ಅಂಗವೆಂದೂ ಕರೆದರೂ ತಪ್ಪಾಗಲಾರದು. ಇಷ್ಟೆಲ್ಲಾ ಶಕ್ತಿಯನ್ನು ಹೊಂದಿರುವ ಮಾಧ್ಯಮವೇ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದರೆ ಏನಾಗಬಹುದು ನೀವೇ ಹೇಳಿ. ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಒಂದು ಉದ್ದಿಮೆಯಾಗಿ ಬೆಳೆದಿದೆ. ವಿಶ್ವಾಸಾರ್ಹತೆ ಮಾಧ್ಯಮಗಳ ಮೂಲ ಮಂತ್ರ. ಆದರೆ ಈಗ ಬದಲಾದ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಹಾಗೂ ಬಂಡವಾಳಶಾಹಿಗಳ ಪ್ರವೇಶದಿಂದ ಮಾಧ್ಯಮ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಮಾದ್ಯಮಗಳು ಈ ಕಾರಣಕ್ಕಾಗಿ ಇಂದು ರಾಜಕಾರಣಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಹಳ ಅಪಾಯಾಕಾರಿ ಬೆಳವಣಿಗೆ ಕೂಡ.

ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದ ಅಂಚಿನಲ್ಲಿದೆ. ಜನರೇ ನೇರವಾಗಿ ಪ್ರತಿನಿಧಿಗಳನ್ನು ಆಯ್ಕೆಮಾಡುವ ಅವಕಾಶವಿರುದರಿಂದಲೋ, ರಾಜಕಾರಣಿಗಳ ಸ್ವಾರ್ಥದಿಂದಲೋ ಹಲವಾರು ಅಯೋಗ್ಯ ಅಭ್ಯರ್ಥಿಗಳು ಗ್ರಾಮಪಂಚಾಯತಿಯಿಂದ ಹಿಡಿದು ಲೋಕಸಭೆಯ ಸದಸ್ಯರ ವರೆಗೂ ಆಯ್ಕೆಯಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯ ದಿಕ್ಕು ತಪ್ಪುತ್ತಿದೆ. ಹಲವು ಕ್ರಿಮಿನಲ್ಗಳು, ದೊಡ್ಡ ದೊಡ್ಡ ಉದ್ಯಮಿಗಳು, ರಿಯಲ್ ಎಸ್ಟೇಟ್ ಮಾಲೀಕರುಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ದೊಡ್ಡ ದುರಂತವೇ ಸರಿ. ಇಂತಹ ಭ್ರಷ್ಟ , ಅಯೋಗ್ಯ ಜನರಿಂದ ಈ ದೇಶವನ್ನು ಕಾಪಾಡುವ ಶಕ್ತಿ ಇರುವುದು ಮಾಧ್ಯಮಗಳಿಗೆ ಮಾತ್ರ ಎಂಬುವುದು ಅಕ್ಷರಶಃ ಸತ್ಯ. ಇಂದಿಗೂ ಕೂಡ ಹಳ್ಳಿಯ ಜನರು ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಸತ್ಯಕ್ಕೆ ಹತ್ತಿರವಾದ ಮಾಹಿತಿಯೆಂದು ನಂಬುತ್ತಾರೆ. ಜೊತೆಗೆ ಮಾಧ್ಯಮಗಳ ಮೇಲೆ ಅತ್ಯಂತ ಹೆಚ್ಚಿನ ವಿಶ್ವಾಸವನ್ನಿಟ್ಟಿದ್ದಾರೆ. ಜನರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಾಗಿದೆ.

ಮಾಧ್ಯಮಗಳು ಪ್ರಜಾಪ್ರಭುತ್ವ ರಾಜ್ಯದಲ್ಲಿ ಕೆಲವೊಮ್ಮೆ ಪೂರಕವಾಗಿಯೂ, ಕೆಲವೊಮ್ಮೆ ಮಾರಕವಾಗಿಯೂ ಕೆಲಸ ಮಾಡುತ್ತವೆ. ಕೆಲವೊಂದು ಸಂದರ್ಭದಲ್ಲಿ ಮಾಧ್ಯಮ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇತೀಚಿನ ದಿನಗಳಲ್ಲಿ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಕೆಲವೊಂದು ಮತೀಯವಾದಿಗಳು ಹಾಗೂ ಮೂಲಭೂತವಾದಿಗಳು ಅಶಾಂತಿಯನ್ನು ಉಂಟುಮಾಡಿ ಭಯದ ವಾತಾವರಣದಲ್ಲಿ ಇರುವಂತೆ ಮಾಡಿದೆ. ಕಳೆದ ಕೆಲವು ದಿನಗಳ ಅಂತರದಲ್ಲಿ ೨ ಅಮಾಯಕರ ಹೆಣಗಳು ಬಿದ್ದಿರೋದು ಇದಕ್ಕೆ ಸಾಕ್ಷಿ. ಅದೇನೇ ಇದ್ದರೂ ಇಂತಹ ಕೋಮು ಘರ್ಷಣೆಗಳಾದಾಗ ಮಾಧ್ಯಮ ಬಹಳ ಸಂಯಮದಿಂದ ಸಮಾಜದಲ್ಲಿ ಶಾಂತಿ ಕದಡದೆ ಧರ್ಮ ಧರ್ಮದ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಅದರಲ್ಲೂ ದೃಶ್ಯ ಮಾಧ್ಯಮ ಬಹಳ ಎಚ್ಚರಿಕೆಯಿಂದ ವರದಿಯನ್ನು ನೀಡಬೇಕಾಗಿದೆ. ಮಾಧ್ಯಮಗಳಿಗೆ ಸುದ್ದಿಯೇ ಪ್ರಮುಖ ಜೀವಾಳ. ಬ್ರೇಕಿಂಗ್ ಸುದ್ದಿಯನ್ನು ಕೊಡುವ ಭರದಲ್ಲಿ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯುವ ಕೆಲಸವನ್ನು ಕೆಲವು ದೃಶ್ಯ ಮಾಧ್ಯಮಗಳು ಮಾಡುತ್ತವೆ. ಘರ್ಷಣೆಗಳ ಸಂದರ್ಭದಲ್ಲಿ ವರದಿ ಮಾಡೋ ವರದಿಗಾರರು ಸುದ್ದಿಯನ್ನು ಕೊಡುವ ಭರದಲ್ಲಿ ಸಮಾಜದ ಶಾಂತಿಗೆ ಭಂಗ ಬರದಂತೆ ಕಾರ್ಯನಿರ್ವಹಿಸಬೇಕು.

ದೀಪಕ್ ರಾವ್ ಹಾಗೂ ಬಷೀರ್ ಅಹ್ಮದ್ ಹತ್ಯೆಯಿಂದ ಇಡೀ ಕರಾವಳಿಯೇ ತಲ್ಲಣಗೊದಿತ್ತು. ಎರಡು ಅಮಾಯಕರ ಹತ್ಯೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದವಾಗಿತ್ತು. ಇದೇ ಸಂದರ್ಭದಲ್ಲಿ ಪುಕ್ಕಟೆ ಪ್ರಚಾರ ಪಡೆಯಲು ಹೊರಟ ಹಿಂದೂ ಜಾಗರಣ ವೇದಿಕೆಯ ಭರತ್ಎಂಬಾತ 5 ಜನರ ತಂಡ ಪೊದೆಯಲ್ಲಿ ಅಡಗಿ ಕುಳಿತು, ಬೈಕ್ ಅಡ್ಡಗಟ್ಟಿ ತಲವಾರಿನಿಂದ ಹಲ್ಲೆಗೆ ಯತ್ನಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ಹೇಳಿದ ಸಂದರ್ಭ, ಅಷ್ಟರಲ್ಲೇ ಪ್ರಾಥಮಿಕ ತನಿಖೆಯೂ ಇಲ್ಲದೆ ಟೀ ವಿ ಚಾನೆಲೊಂದರಲ್ಲಿ ‘ಅನ್ಯಕೋಮಿನ ಐವರಿಂದ ಹಿಂದೂ ಜಾಗರಣ ವೇದಿಕೆಯ ಮುಖಂಡನ ಹತ್ಯೆಗೆ ಯತ್ನ’ ಎಂಬ ಬ್ರೇಕಿಂಗ್ ಸುದ್ದಿ ವರದಿಯಾಗುತ್ತದೆ. ಮತ್ತೆ ಪೋಲೀಸರ ಪ್ರಾಥಮಿಕ ತನಿಖೆಯಿಂದ ಆತ ಕೇವಲ ಪ್ರಚಾರಕ್ಕಾಗಿ ಸುಳ್ಳು ನಾಟಕವಾಡಿದ ಬಗ್ಗೆ ಪೊಲೀಸರೇ ವರದಿಯನ್ನು ಕೊಡುತ್ತಾರೆ. ಇಲ್ಲಿ ಹಲ್ಲೆಯ ನಾಟಕೀಯ ಬೆಳವಣಿಗೆ ಮಾದ್ಯಮದಲ್ಲಿ ವರದಿಯಾಗಿದೆ. ಬದಲಾಗಿ ಆತ ಯಾತಕ್ಕಾಗಿ ಹಲ್ಲೆಯ ನಾಟಕವಾಡಿದ ?ಆತನಿಗೆ ಸಮಾಜದಲ್ಲಿ ಮತ್ತೆ ಶಾಂತಿ ಕದಡಬೇಕಾದ ಹುನ್ನಾರವಿತ್ತೇ ? ಅದರ ಹಿಂದೆ ಯಾವುದೊ ರಾಜಕೀಯ ಪಕ್ಷಗಳ ಹುನ್ನಾರವಿತ್ತೇ ?ಅದ್ಯಾವುದನ್ನೂ ಆ ಮಾಧ್ಯಮ ವರದಿ ಮಾಡೋ ಗೋಜಿಗೆ ಹೋಗದಿರೋದು ವಿಪರ್ಯಾಸವೇ ಸರಿ. ಈ ಥರ ಕೋಮು ಘರ್ಷಣೆಗಳ ಸಮಯದಲ್ಲಿ ಸಮಾಜದಲ್ಲಿ ಜಾತಿ, ಜಾತಿಗಳ ನಡುವೆ ವಿಷಬೀಜವನ್ನು ಬಿತ್ತಿ ಅಶಾಂತಿಗೆ ಕಾರಣರಾದ ರಾಜಕೀಯ ವ್ಯಕ್ತಿಗಳನ್ನು ಕರೆದು ‘ಡಿಬೇಟ್’ ಮಾಡಿ ತನ್ನ ಟಿ.ಆರ್.ಪಿ ಹೆಚ್ಚಿಸುವುದರ ಬಗ್ಗೆ ಯೋಚಿಸುವುದರ ಬದಲಾಗಿ, ಕೋಮು ಸೌಹಾರ್ದತೆಯನ್ನು ಸಾರುವ ಸಮಾನ ಮನಸ್ಕರನ್ನು ಕರೆಸಿ ಸಮಾಜದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವಲ್ಲಿ ಮಾಧ್ಯಗಳು ಶ್ರಮಿಸಬೇಕು. ಅಂತಹ ಸಮಯದಲ್ಲಿ ಜಾತಿ, ಧರ್ಮ, ಮತ, ಪಂಗಡ ನೋಡದೆ ಸಮಾಜದಲ್ಲಿ ಅಶಾಂತಿಯನ್ನು ಕದಡುವವರ ವಿರುದ್ಧ ನಿರ್ದ್ರಕ್ಷಿಣ್ಯವಾಗಿ ವರದಿಯನ್ನು ಮಾಡಬೇಕು. ಮಾಧ್ಯಮ
ಧರ್ಮ – ಧರ್ಮದ ನಡುವಿನ ಸೇತುವೆಯಾಗಿ ಕೆಲಸ
ಮಾಡುವಂತಾಗಬೇಕು. ಹಾಗಿದ್ದಲ್ಲಿ ಮಾತ್ರ ಮಾಧ್ಯಮ ಪ್ರಜಾಪ್ರಭುತ್ವದ ಕಣ್ಣಾಗಿ ಇರಲು ಸಾಧ್ಯ.

ಕರ್ನಾಟಕದಲ್ಲಿ ಎಂತಹ ವಿಕೃತ ಮನಸ್ಸಿನ ಮಾದ್ಯಮಳಿವೆ ಎಂದರೆ, ಸಾವಿನ ವಿಚಾರದಲ್ಲೂ ಕೆಲವೊಮ್ಮೆ ಮಾಧ್ಯಮಗಳು ವಿಕೃತ ಮನೋಭಾವವನ್ನು ತೋರಿಸುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಮಂಗಳೂರಿನಲ್ಲಿ ‘ಟಾರ್ಗೆಟ್’ ತಂಡದ ಇಲಿಯಾಸ್ ಕೊಲೆ ನಡೆದ ಸಂದರ್ಭದಲ್ಲಿ ಪ್ರಜಾ ಟಿ.ವಿ ಎಂಬ ದೃಶ್ಯ ಮಾಧ್ಯಮದಲ್ಲಿ ಬ್ರೇಕಿಂಗ್ ಸುದ್ದಿ “ಫ್ಲ್ಯಾಟಿಗೆ ನುಗ್ಗಿ ಇಲಿಯಾಸ್ ನ ಪರಲೋಕಕ್ಕೆ ಪಾರ್ಸಲ್”. ವ್ಯಕ್ತಿ ಎಂಥಹ ತಪ್ಪನ್ನೇ ಮಾಡಿರಲಿ ಅವರವರ ತಂದೆ, ತಾಯಿ, ಮಡದಿ, ಮಕ್ಕಳಿಗೆ ದುಃಖ ಆಗದೆ ಇರತ್ತಾ? ಇಂತಹ ಬ್ರೇಕಿಂಗ್ ಸುದ್ದಿ ನೋಡಿದಾಗ ಅವರ ಮನಸ್ಸಿಗೆ ಹೇಗಾಗಬಹುದು?
ಡಾ:ಯು.ಆರ್ ಅನಂತಮೂರ್ತಿ ಸಾವು ಸಂಭವಿಸಿದ ದಿನ ಕೆಲವು ವಿಕೃತ ಮನೋಭಾವದ ಕಿಡಿಗೇಡಿಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಸಿದಾಗ ಪಬ್ಲಿಕ್ ಟಿ.ವಿ.ಯ ಎಚ್.ಆರ್ ರಂಗನಾಥ್ ಅಂತವರ ವಿರುದ್ಧ ಆಕ್ರೋಶ ವ್ಯಕ್ತಪಡಿಸದ್ದನ್ನೂ ಕೂಡ ನಾವು ಮರೆಯುವಂತಿಲ್ಲ. ಹುಟ್ಟಿ ಬೆಳೆದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಸಾವು ಯಾವಾಗ ಹೇಗೆ ಸಂಭವಿಸತ್ತೆ ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ.

ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿಯಲ್ಲಿ ನಟ, ನಿರ್ದೇಶಕ ಪ್ರಕಾಶ್ ರೈ ಬರೆಯುತ್ತಿದ್ದ “ಇರುದೆಲ್ಲವ ಬಿಟ್ಟು” ಎಂಬ ಹೆಸರಿನ ಅಂಕಣವನ್ನು ದೈನಿಕ ಪತ್ರಿಕೆಯೊಂದು ಹಠಾತ್ತಾಗಿ ಸ್ಥಗಿತಗೊಳಿಸಿದೆ. ಈ ಕುರಿತು ಪತ್ರಿಕೆಯು ಯಾವುದೇ ಮಾಹಿತಿಯನ್ನೂ ರೈ ಅವರಿಗೆ ನೀಡಿರಲಿಲ್ಲ ಎನ್ನಲಾಗಿದೆ. ಇದರ ಬಗ್ಗೆ ಟ್ವಿಟ್ಟರಿನಲ್ಲಿ ಪ್ರಸ್ತಾಪಿಸಿರುವ ರೈ “ಕಾಣದ ಕೈಗಳ ಆಟ ನಮಗೆ ಕಾಣದೇನೋ”ಎಂದು ಟ್ವೀಟ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ರಾಜ್ಯದಲ್ಲಿ ಮಾಧ್ಯಮದ ಮೇಲೆ ಬಾಹ್ಯ ಹಸ್ತಕ್ಷೇಪವನ್ನು ಎತ್ತಿ ತೋರಿಸುತ್ತಿದೆ. ಹಿಂದೊಮ್ಮೆ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯಬೇಕಿದ್ದರೆ “ಧರ್ಮಶಾಲಾದಲ್ಲಿ ಇಂದು ಧರ್ಮಯುದ್ಧ” ಎಂದು ಕೇಸರಿ ಬಣ್ಣದಲ್ಲಿ ಲೀಡ್ ಸುದ್ದಿ ಮಾಡೋ ಕೆಲವು ಪತ್ರಿಕೆಗಳು ನಮ್ಮ ಕಣ್ಣ ಮುಂದೆ ಇದೆ. ಕ್ರೀಡೆಯಲ್ಲೂ ಧರ್ಮವನ್ನು ಬೆರೆಸುವ ಪರ್ತಕರ್ತರು ಭಾರತ ಕ್ರಿಕೆಟ್ ತಂಡದಲ್ಲಿ ಬರೀ ಹಿಂದೂಗಳು ಮಾತ್ರವೇ ಅಲ್ಲದೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ಇರುದನ್ನು ಮರೆತಂತಿದೆ. ‘ಲವ್ ಜಿಹಾದ್’ ಕೂಡ ಮಾಧ್ಯಮಗಳ ಸೃಷ್ಟಿಯಾಗಿದೆ. ನ್ಯಾಯಾಂಗ ತನಿಖೆಯಿಂದ ‘ಲವ್ ಜಿಹಾದ್’ ಅಸ್ತಿತ್ವದಲ್ಲಿ ಇಲ್ಲ ಎನ್ನುವುದು ಸಾಬೀತಾಗಿದ್ದರೂ ಇಂದು “ಲವ್ ಜಿಹಾದ್” ಹೆಸರಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿದರೂ ಕಾನೂನು ಕೈಗೆತ್ತಿಗೊಳ್ಳುವ ಕೆಲವೊದು ‘ಧರ್ಮ ರಕ್ಷಕರು’ ಹುಟ್ಟಿಕೊಂಡಿದ್ದು, ಇದೇ ಕಾರಣಕ್ಕಾಗಿ ಮೂಡಿಗೆರೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋದು ನಿಮಗೆಲ್ಲ ಗೊತ್ತಿರೋ ಸಂಗತಿ ಕೂಡ. ಇಂತಹ ಕಪೋಲ ಕಲ್ಪಿತ ಪದಗಳ ಹುಟ್ಟು ಹಲವಾರು ಜೀವಕ್ಕೆ ಕುತ್ತಾಗಿದೆ. ಧರ್ಮ-ಧರ್ಮದ ನಡುವೆ ಬಿರುಕು ಮೂಡಿಸುವಂತಹ ಮಾಧ್ಯಮಗಳು ಪ್ರಜಾಪ್ರಭುತ್ವ ರಾಜ್ಯದಲ್ಲಿ ಮಾರಕವಾಗಿದೆ.

‘ಭಾರತ ಪ್ರಕಾಶಿಸುತ್ತಿದೆ’ ಎಂದು ಹೇಳಿ ಬೀಗುತಿದ್ದ ಅಂದು ಅಧಿಕಾರ ಚುಕ್ಕಾಣಿ ಹಿಡಿದಿದ್ದ ರಾಜಕೀಯ ಪಕ್ಷವೊಂದು, ಇಂದು ಅದೇ ಭಾರತ ಅಪಾಯದ ಅಂಚಿನಲ್ಲಿದೆ ಎಂದು ಹೇಳುವ ಮಟ್ಟಕ್ಕೆ ತಂದು ನಿಲ್ಲುಸಿದೆ. ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ಭಾರತ ಪ್ರಜಾಪ್ರಭುತ್ವದ ಮೂರನೇ (ಕಣ್ಣು )ಅಂಗವಾದ ನ್ಯಾಯಾಂಗದ ಕಾರ್ಯವೈಕರಿ ಮತ್ತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಕೆಲವೊಂದು ತೀರ್ಪು ನೀಡುವ ಸಂದರ್ಭದಲ್ಲಿ ಬಾಹ್ಯ ಹಸ್ತಕ್ಷೇಪ ಮಾಡಿರೋ ಬಗ್ಗೆ ನ್ಯಾಯಾಧೀಶರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದ ಮಾನವ ಹಕ್ಕು ಸಭೆಯಲ್ಲಿ ಭಾರತದ ಪ್ರತಿನಿಧಿ ಮಾನವ ಹಕ್ಕುಗಳ ಹೊರಟಗಾರ, ತೆಹೆಲ್ಕಾ ಪತ್ರಿಕೆಯ ಮಾಜಿ ಸಂಪಾದಕ ಅಜಿತ್ ಶಾಹಿಯವರು ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿವರಿಸುತ್ತಾ ಬಿ.ಜೆ.ಪಿ ಪಕ್ಷದ ಅಧೀನದಲ್ಲಿರುವ ಸಂಘಪರಿವಾರ ಕಾನೂನು ಕೈಗೆತ್ತಿಕೊಂಡು ಅಲ್ಪಸಂಖ್ಯಾತರ ಹಾಗೂ ದಲಿತರ ಮೇಲೆ ಮಾಡುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ,
ಅಸಮಾಧಾನ ವ್ಯಕ್ತಪಡಿಸಿದ್ದನ್ನು ನಾವು ಉಲ್ಲೇಖಿಸಬಹುದಾಗಿದೆ.

ರಿಪಬ್ಲಿಕ್ ಟಿ.ವಿ ಯ ಅರ್ನಾಬ್ ತನ್ನ ಪತ್ರಕರ್ತನಿಗೆ ಕಾಂಗ್ರೆಸ್ ಸಂಸದರಾದ ಶಶಿ ತರೂರ್ ಗೆ ಕಿರುಕುಳ ನೀಡಲು ಆದೇಶಿಸಿದ್ದನ್ನು ದಿಕ್ಕರಿಸಿ ದೀಪು ಅಭಿ ವರ್ಗೀಸ್ ಎಂಬ ಪತ್ರಕರ್ತ ರಾಜನಾಮೆ ನೀಡಿ “ಐ ಜಸ್ಟ್ ವಾಂಟ್ ಟು ಟಾಕ್ ವಿಥ್ ಶಶಿ ತರೂರ್” ಎಂದು ಟ್ವೀಟ್ ಮಾಡಿದ್ದಾರೆ. ಈ ಕ್ರಮಕ್ಕಾಗಿ ವರ್ಗೀಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಲವರಿಂದ ಪ್ರಶಂಸೆಗೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂತಹ ಪತ್ರಕರ್ತರಿಂದಾಗಿ ಇಂದು ಮಾಧ್ಯಮಗಳು ಒಂದಿಷ್ಟು ನಂಬಲಾರ್ಹವಾಗಿದೆ. ಸುದ್ದಿ ಮಾದ್ಯಮದ ಮಾಲೀಕರನ್ನು ಎದುರು ಹಾಕಿಕೊಂಡು ಕಾರ್ಯನಿರ್ವಹಿಸಲು ಹೇಗೆ ತಾನೇ ಸಾಧ್ಯ? ಪ್ರಜಾಪ್ರಭುತ್ವ ಉಳಿಯಬೇಕಾದರೆ ಪತ್ರಕರ್ತರು ಸಾಮಾಜಿಕ ಕಳಕಳಿಯಿಂದ ಕೆಲಸಮಾಡಬೇಕು. ಹಲವಾರು ಸಮಸ್ಯೆಗಳ ಮದ್ಯೆಯೂ ಸಮಾಜದ ಹಿತದೃಷ್ಟಿಯಿಂದ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಲೇಖನ, ವರದಿಗಳನ್ನು ಬರೆದು ಸರಕಾರಗಳ ಗಮನವನ್ನು ಸೆಳೆದ ಅನೇಕ ಪತ್ರಕರ್ತರು ನಮ್ಮಲ್ಲಿ ಹಲವರಿದ್ದಾರೆ. ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಸಮಾಜದ ಹಿತಕ್ಕಾಗಿ ದುಡಿದ ಅನೇಕ ಪತ್ರಕರ್ತರ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ.

ಉತ್ತಮ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಿ, ಪ್ರಜೆಗಳು ಮತ್ತು ಸರಕಾರದ ಮಧ್ಯೆ ಕೊಂಡಿಯಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಾಗಿದೆ. ಸಾರ್ವಜನಿಕರು ಮಾಧ್ಯಮಗಳ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಮಾಧ್ಯಮಗಳು ಕೆಲಸ ಮಾಡುವ ಆವಶ್ಯಕತೆಯಿದೆ. ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಮಾಧ್ಯಮ ಸದಾ ಹದ್ದಿನ ಕಣ್ಣಿಟ್ಟಿರಬೇಕು. ಸಂವಿಂಧಾನದ ಕಾವಲು ನಾಯಿಯಂತೆ ಅತ್ಯಂತ ವಿಶ್ವಾಸದಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು. ಅದು ಮಾಧ್ಯಮದ ಜವಾಬ್ದಾರಿಯೂ ಕೂಡ ಆಗಿದೆ.

ಮನ್ಸೂರ್ ಅಹ್ಮದ್ ಸಾಮಾನಿಗೆ (ಹವ್ಯಾಸಿ ಪತ್ರಕರ್ತ)

ವಿ.ಸೂ: ಈ ಲೇಖನದಲ್ಲಿ ಅಭಿವ್ಯಕ್ತಗೊಂಡ ಅಭಿಪ್ರಾಯಗಳು ಲೇಖರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಲೇಖಕರ ಅಭಿಪ್ರಾಯವೂ ‘ವರದಿಗಾರ’ನ ನಿಲುವೂ ಒಂದೇ ಆಗಿರಬೇಕೆಂದಿಲ್ಲ. ಲೇಖಕರು ನೀಡಿರುವ ಮಾಹಿತಿಗಳು ಹಾಗೂ ಅವರ ಅಭಿಪ್ರಾಯಗಳಿಗೆ ‘ವರದಿಗಾರ’ ತಂಡ ಜವಾಬ್ದಾರರಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group