ಪ್ರಜಾಪ್ರಭುತ್ವ ಹಳ್ಳ ಹಿಡಿಯುತ್ತಿದೆ: ಜ್ಞಾನ ಪ್ರಕಾಶ್ ಸ್ವಾಮೀಜಿ ಆತಂಕ

ವರದಿಗಾರ (ಜ.6): ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಎಲ್ಲರಿಗೂ ಮತದಾನದ ಹಕ್ಕನ್ನು ತಂದು ಕೊಟ್ಟರು. ಆದರೆ ಇಂದು ಅದನ್ನು ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಹಳ್ಳ ಹಿಡಿಯುತ್ತಿದೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಮಂಡ್ಯದ ಲೋಕಸರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭ್ಯುದಯ ಯುವಕರ ಸಂಘ ಹಾಗೂ ಭೀಮಾ ಸೇನಾ ಸಮಿತಿ, ಕಲ್ಪವೃಕ್ಷ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ದಿನಾಚರಣೆ’ ಕಾರ್ಮಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಆಶಯಗಳಿಗೆ ಅಪಮಾನ ಮಾಡಲಾಗುತ್ತಿದೆ. ಯುವಕರು ಸಂಘಟಿತರಾಗುವ ಮೂಲಕ ಶೋಷಣೆಯ ವಿರುದ್ಧ ನಿಲ್ಲಬೇಕೆಂದು ಅವರು ಕರೆ ನೀಡಿದ್ದಾರೆ. ಸಾಮಾಜಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಸಲಹೆ ನೀಡಿದರು.
ಕನ್ನಂಬಾಡಿ ಅನೆಕಟ್ಟು ನಿರ್ಮಾಣಕ್ಕೆ ನಕಾಶೆ ಮಾಡಿದ್ದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಹೇಳುತ್ತಾ, ಇತಹಾಸವನ್ನು ನೆನಪಿಸಿದರು. ತಮ್ಮ ಮನೆಯ ಆಭರಣಗಳನ್ನು ಅಡವಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟೆ ನಿರ್ಮಾಣ ಮಾಡಿದರು. ಆದರೆ ಕಟ್ಟೆಯ ನಿರ್ಮಾಣದ ಕೀರ್ತಿ ವಿಶ್ವೇಶ್ವರಯ್ಯರಿಗೆ ಕೊಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
