ಬಿಜೆಪಿ-ಸಂಘಪರಿವಾರದಿಂದಲೇ ಕಾನೂನು ಸುವ್ಯವಸ್ಥೆ ಹಾಳು: ಗ್ರಹ ಸಚಿವ ರಾಮಲಿಂಗಾ ರೆಡ್ಡಿ

ವರದಿಗಾರ (ಜ.4): ಬಿಜೆಪಿ ಮತ್ತು ಸಂಘಪರಿವಾರದಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಗ್ರಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಬಿಜೆಪಿ ಪರಿವರ್ತನಾ ಯಾತ್ರೆ’ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣದಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ’ ಎಂದಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿ ಮತ್ತು ಸಂಘಪರಿವಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ಅಂಕಿ ಅಂಶಗಳನ್ನು ಫೆಬ್ರವರಿ 5ರಂದು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದು, ಬಿಜೆಪಿ ನಾಯಕರಲ್ಲಿ ಭಯದ ವಾತಾವರಣ ಸೃಷ್ಠಿಸಿದೆ.
ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗಾ ರೆಡ್ಡಿ, ‘ಗುಜರಾತಿಗರು ಎನ್ ಕೌಂಟರ್ ಸ್ಪೆಷಲಿಸ್ಟ್’ ಎಂದು ಬಣ್ಣಿಸಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 60 ಮಂದಿ ಕರಸೇವಕರು ರೈಲಿನಲ್ಲಿ ಮೃತಪಟ್ಟರು. ಅದಲ್ಲದೆ 2 ಸಾವಿರ ಜನರ ಕೊಲೆಯಾಗಿತ್ತು ಎಂದು ಗುಜರಾತಿನ ಕರಾಳ ಮುಖವನ್ನು ನೆನಪಿಸಿದರು. ಈ ಘಟನೆಗೆ ಸಂಬಂಧಿಸಿ ಮೋದಿಗೆ ಅಮೇರಿಕಾ ವೀಸಾ ನೀಡಲು ನಿರಾಕರಿಸಿತ್ತು ಎಂದು ಹೇಳಿದ್ದಾರೆ.
ಮೋದಿಯವರ ಭಾಷಣದಲ್ಲಿ ‘ರಾಜ್ಯ ಸರಕಾರ ಹಗರಣ, ಭ್ರಷ್ಟಾಚಾರದಲ್ಲಿ ತೊಡಗಿದೆ’ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಆರೋಪದಿಂದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಜೈಲು ಸೇರಿದ್ದರು. ವೇದಿಕೆಯಲ್ಲಿ ಯಡಿಯೂರಪ್ಪರನ್ನು ಮಧ್ಯದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮೋದಿಗೆ ಯಾವ ಹಕ್ಕಿದೆ ಎಂದು ಅವರು ಪ್ರಶ್ನಿಸುತ್ತಾ, ಚುನಾವಣೆಯ ಸಂದರ್ಭದಲ್ಲಿ ಮೋದಿ ಚುನಾವಣೆ ಗಿಮಿಕ್ ಮಾಡಲು ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
