ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಹಾಗೂ ಕೊಲೆಯ ವೀಡಿಯೋ ಹರಡದಂತೆ ತಡೆಯಲು ಮನವಿ
ವರದಿಗಾರ(04-02-2018): ರಾಜಸ್ಥಾನದ ರಾಜಸಮಂದ್ ನಲ್ಲಿ ಡಿಸೆಂಬರ್ 6ರಂದು ಹಿಂದುತ್ವ ಮತಾಂಧನೊಬ್ಬನಿಂದ ಭೀಕರ ಹತ್ಯೆಗೊಳಗಾದ ಅಫ್ರಾಝುಲ್ ನ ಪತ್ನಿ ಗುಲ್ಬಹಾರ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ತನ್ನ ಪತಿಯ ಹತ್ಯೆ ಪ್ರಕರಣದ ತನಿಖೆಯ ಸ್ಥಿತಿಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಶೇಷ ರಾಷ್ಟ್ರೀಯ ತನಿಖಾ ತಂಡವೊಂದನ್ನು ನೇಮಿಸುವಂತೆ ಮನವಿ ಸಲ್ಲಿಸಿದ್ದಾರೆ. ಇದಲ್ಲದೇ ತನ್ನ ಪತಿಯ ಕೊಲೆಯ ದೃಶ್ಯಗಳನ್ನೊಳಗೊಂಡಿರುವ ವೀಡಿಯೋಗಳನ್ನು ತಡೆಯುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದು ಇತರ ಮತಾಂಧರಿಗೆ ಇದೇ ತರಹ ಹತ್ಯೆ ನಡೆಸುವುದಕ್ಕೆ ಪ್ರೇರಣೆಯಾಗಬಹುದೆಂದು ಅವರು ಭಯ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮತಾಂಧ ಶಕ್ತಿಗಳು ಹೇರುತ್ತಿರುವ ಲವ್ ಜಿಹಾದ್ ಆರೋಪಗಳು ಹಸಿ ಸುಳ್ಳಾಗಿದ್ದು, ಇಂತಹ ಮಿಥ್ಯೆ ಹರಡದಂತೆ ಸಾರ್ವಜನಿಕ ಸಂದೇಶಗಳ ಮೂಲಕ ಜನರಿಗೆ ಮಾಹಿತಿ ನೀಡುವುದು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕರ್ತವ್ಯವಾಗಿದೆ ಎಂದು ಅವರು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದಿಸುವ, ಅವರ ವಿರುದ್ಧ ಹಿಂಸೆಯನ್ನು ಪ್ರೇರೇಪಿಸುವ, ಅವರನ್ನು ಕೆಟ್ಟವರೆಂದು ತೋರಿಸುವ ಧ್ವೇಷ ಭಾಷಣಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಅವರು ಮನವಿ ಸಲ್ಲಿಸಿದ್ದಾರೆ.
ತನಗೆ ಸೂಕ್ತ ಪರಿಹಾರ ಧನವನ್ನು ಒದಗಿಸುವಂತೆಯೂ ಅವರು ಕೇಳಿಕೊಂಡಿದ್ದಾರೆ. ಅವರಿಗೆ ಪಶ್ಚಿಮ ಬಂಗಾಳ ಸರಕಾರದಿಂದ ರೂ.2 ಲಕ್ಷ ಹಾಗೂ ರಾಜಸ್ಥಾನ ಸರಕಾರದಿಂದ ರೂ.3 ಲಕ್ಷ ಪರಿಹಾರ ಧನ ದೊರಕಿದೆ. ಆದರೆ, ಅವರು ತನಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರ ಭವಿಷ್ಯಕ್ಕೆ ಯಾವುದೇ ರೀತಿಯ ಆರ್ಥಿಕ ವ್ಯವಸ್ಥೆಯು ಇಲ್ಲವೆಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ತನಗೆ ನ್ಯಾಯ ದೊರಕಿಸಲು ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸುವಂತೆಯೂ ಅವರು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.
