ವರದಿಗಾರ(03-02-2018): ವಿವಾದಿತ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕೆಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಸೀಮ್ ರಿಝ್ವಿ ಹೇಳಿದ್ದಾನೆ.
ಶುಕ್ರವಾರದಂದು ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ನಮಾಝ್ ನಿರ್ವಹಿಸಿದ ರಿಝ್ವಿ, ನಂತರ ರಾಮ ಜನ್ಮಭೂಮಿಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ರನ್ನು ಭೇಟಿಯಾಗಿದ್ದನು.
ಈ ಸಂದರ್ಭದಲ್ಲಿ “ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಮಂದಿರವನ್ನು ವಿರೋಧಿಸಿ, ಬಾಬರೀ ಮಸೀದಿಯ ನಿರ್ಮಾಣಕ್ಕೆ ಆಗ್ರಹಿಸುವಂತಹ ಮೂಲಭೂತ ಮನೋಸ್ಥಿತಿಯನ್ನು ಹೊಂದಿರುವಂತಹ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕು. ಅಂಥಹಾ ಮುಸ್ಲಿಮರಿಗೆ ಭಾರತದಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾನೆ.
ಮೂಲಭೂತವಾದಿ ಮುಸ್ಲಿಮ್ ಪಂಡಿತರು ದೇಶದ ನಾಶಕ್ಕೆ ಪ್ರಯತ್ನಿಸುತ್ತಿದ್ದು, ಅವರು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನಕ್ಕೆ ಹೋಗಬೇಕೆಂದು ಹೇಳಿದ್ದಾನೆ.
ರಿಝ್ವಿಯ ಪ್ರಚೋಧನಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿಯಾ ಪಂಡಿತರು ಆತನ ಬಂಧನಕ್ಕಾಗ್ರಹಿಸಿದ್ದಾರೆ. ಆತನು ಕೋಮು ಭಾವನೆಗಳನ್ನು ಪ್ರಚೋಧಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಶಿಯಾ ಉಲಮಾ ಕೌನ್ಸಿಲ್ ಅಧ್ಯಕ್ಷ ಮೌಲಾನಾ ಇಫ್ತಿಕಾರ್ ಹುಸೈನ್ ಇಂಕ್ವಿಲಾಬಿ, “ರಿಝ್ವಿ ಓರ್ವ ಕ್ರಿಮಿನಲ್, ಆತನು ವಕ್ಫ್ ಆಸ್ತಿಯ ಕಬಳಿಕೆ ಹಾಗೂ ಅಕ್ರಮ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾನೆ” ಎಂದು ಆರೋಪಿಸಿದರು.
“ಆತನ ವಿರುದ್ಧ ಕ್ರೈಮ್ ಬ್ರಾಂಚ್-ಸಿಐಡಿಯಿಂದ ಚಾರ್ಜ್ ಶೀಟ್ ದಾಖಲಾಗಿದ್ದು, ಇದೀಗ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಈ ರೀತಿಯ ನಾಟಕವನ್ನಾಡುತ್ತಿದ್ದಾನೆ” ಎಂದು ಇಂಕ್ವಿಲಾಬಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಆಡಳಿತವಿದ್ದಾಗ ರಿಝ್ವಿ ಮುಲಾಯಂ ಸಿಂಗ್ ಹಾಗೂ ಆಝಮ್ ಖಾನ್ ರ ಆಶ್ರಯದಲ್ಲಿದ್ದನು. ಇದೀಗ ಬಿಜೆಪಿ ಆಡಳಿತದಲ್ಲಿ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಬಯಸುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 8ರಿಂದ ಸುಪ್ರೀಂ ಕೋರ್ಟ್ ಬಾಬರೀ ಮಸೀದಿ-ರಾಮಜನ್ಮಭೂಮಿ ವಿವಾದವನ್ನು ಆಲಿಸಲಿದೆ.
