ವರದಿಗಾರ (ಫೆ 2) : ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವ ವಿಕೃತರಿಗೆ ಮರಣದಂಡಣೆ ಶಿಕ್ಷೆ ವಿಧಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸುಪ್ರೀಮ್ ಕೋರ್ಟಿನಲ್ಲಿ ಕೇಂದ್ರ ಸರಕಾರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, “ಇದು ದುರಂತ, ಕೇಂದ್ರ ಸರಕಾರದ ಕರುಣಾಜನಕ ತೀರ್ಮಾನ! ದೇಶದ ರಾಜಧಾನಿಯಲ್ಲಿ 8 ತಿಂಗಳ ಮಗುವೊಂದರ ಮೇಲೆ ಅತ್ಯಾಚಾರವಾಗಿದೆ, ಆದರೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಅಗತ್ಯವಿಲ್ಲವೆಂದು ಯಾರಿಗಾದರೂ ಹೇಳಲು ಹೇಗೆ ತಾನೇ ಸಾಧ್ಯ? ಜನ ಇಷ್ಟೊಂದು ಸಂವೇದನಾರಹಿತವಾಗಿರಲು ಸಾಧ್ಯವೇ? ನಾಚಿಕೆಗೇಡು !!” ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
What to say on this? I have no words. Height of apathy. An 8 month old baby has been raped in the Capital and the Centre says that stringent action against rapists is not required. Really, how can one be so insensitive. Pathetic. Shame! https://t.co/0O7uFi3qZ8
— Swati Jai Hind (@SwatiJaiHind) February 1, 2018
ವಾಯುವ್ಯ ದೆಹಲಿಯ ನೇತಾಜಿ ಸುಭಾಶ್ ಪ್ರದೇಶದಲ್ಲಿ 8 ತಿಂಗಳ ಹರೆಯದ ಮಗುವಿನ ಮೇಲೆ ಸಂಬಂಧಿಕನೋರ್ವ ಅತ್ಯಾಚಾರ ಮಾಡಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಇದರ ಆರೋಪಿಗೆ ಹಾಗೂ ಇಂತಹಾ ಪ್ರಕರಣಗಳಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿ ಸುಪ್ರೀಮ್ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸುತ್ತಿದ್ದ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ ಎಂ ಕಣ್ವಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠದ ಎದುರು, ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಅಡಿಶನಲ್ ಸಾಲಿಸಿಟರ್ ಜನರಲ್ ಪಿ ಎಸ್ ನರಸಿಂಹ ಅವರು, “ಮರಣದಂಡನೆ ಎಲ್ಲದಕ್ಕೂ ಉತ್ತರವಲ್ಲ” ಎಂದು ಸಾರ್ವಜನಿಕ ಹಿತಾಸಕ್ತಿ ದಾವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರಕ್ಕೊಳಪಟ್ಟ ಮಗುವಿನ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಮ್ ಕೋರ್ಟ್, ನ ಇಬ್ಬರು ನುರಿತ ವೈದ್ಯರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯವನ್ನು ನೋಡಿಕೊಳ್ಳಲು ತೆರಳುವಂತೆ ಆದೇಶಿಸಿದೆ. ಇದೇ ವೇಳೆ ಕೋರ್ಟ್, ಕೇಂದ್ರ ಸರಕಾರಕ್ಕೆ ಈಗಿರುವ ಕಾನೂನನ್ನು ತಿದ್ದುಪಡಿ ಮಾಡುವಂತೆ ಆದೇಶಿಸಲು ಸಾಧ್ಯವಿಲ್ಲವೆಂದು ತಿಳಿಸಿತು. ಸಂತ್ರಸ್ತೆ ಮಗುವಿನ ತಂದೆ ಓರ್ವ ದಿನಗೂಲಿ ನೌಕರನಾಗಿದ್ದು, ಅತ್ಯಾಚಾರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
