ವರದಿಗಾರ (ಫೆ 2) : ಮೂರೂವರೆ ವರ್ಷಗಳ ಹಿಂದೆ ದೇಶದ ಜನರಿಗೆ ‘ಅಚ್ಚೇ ದಿನ್’ ಕನಸಿನೊಂದಿಗೆ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳು ಜನಸಾಮಾನ್ಯರನ್ನು ಕೆರಳಿಸಿದ್ದು, ಈಗೀಗ ಮೋದಿಗೆ ಬೆಂಬಲ ಸೂಚಿಸಿದ್ದ ರಾಜಕೀಯ ಪಕ್ಷಗಳು ಕೂಡಾ ಒಂದೊಂದಾಗಿ ಕೇಂದ್ರ ಸರಕಾರವನ್ನು ಟೀಕಿಸಲಾರಂಭಿಸಿದ್ದಾರೆ. ಎನ್ ಡಿ ಎ ಮೈತ್ರಿಕೂಟದ ಬಹುಮುಖ್ಯ ಪಾಲುದಾರ ಪಕ್ಷವಾದ ತೆಲೆಗುದೇಶಂ, ವಿತ್ತ ಸಚಿವ ಅರುಣ್ ಜೈಟ್ಲಿ ನಿನ್ನೆ ಸಂಸತ್ತಿನಲ್ಲಿ ಮಂಡಿಸಿದ್ದ ಕೇಂದ್ರ ಬಜೆಟಿಗೆ ತಮ್ಮ ವಿರೋಧವನ್ನು ಸೂಚಿಸುತ್ತಾ, ‘ನಾವು ಸದ್ಯದಲ್ಲೇ ಕೇಂದ್ರ ಸರಕಾರದ ವಿರುದ್ಧ ಯುದ್ದ ಸಾರಲಿದ್ದೇವೆ’ ಎಂದು ನೇರವಾಗಿ ಸರಕಾರದ ಬಜೆಟ್ ಕುರಿತಂತೆ ಅಸಮಾಧಾನ ಹೊರ ಹಾಕಿದೆ.
ತೆಲುಗುದೇಶಂ ಪಕ್ಷದ ಸಂಸದ ಟಿ ಜಿ ವೆಂಕಟೇಶ್, ‘ನಾವು ಆದಷ್ಟು ಶೀಘ್ರ ಯುದ್ಧ ಘೋಷಿಸುವುದರಲ್ಲಿದ್ದೇವೆ. ನಮ್ಮ ಮುಂದೆ ಮೂರು ಆಯ್ಕೆಗಳಿವೆ, ಮೊದಲನೆಯದ್ದು ಯಥಾಸ್ಥಿತಿ ಕಾಪಾಡಿಕೊಂಡು ಮುಂದುವರಿಯುವುದು. ಎರಡನೆಯದು, ನಮ್ಮೆಲ್ಲಾ ಸಂಸದರು ರಾಜೀನಾಮೆ ಕೊಡುವುದು ಹಾಗೂ ಕೊನೆಯದಾಗಿ, ಈ ಮೈತ್ರಿಯನ್ನು ಕೊನೆಗಾಣಿಸುವುದು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಪಕ್ಷದ ಮತ್ತೋರ್ವ ಸಂಸದ ಹಾಗೂ ಮೋದಿ ಸಚಿವ ಸಂಪುಟದ ವೈ ಎಸ್ ಚೌಧರಿ ಕೂಡಾ, ಕೇಂದ್ರದ ಬಜೆಟ್ ನಲ್ಲಿ ಆಂಧ್ರ ಪ್ರದೇಶವನ್ನು ಕಡೆಗಣಿಸಿರುವುದಕ್ಕಾಗಿ ಚಂದ್ರಬಾಬು ನಾಯ್ಡು ಕೂಡಾ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಪಕ್ಷ ಹಾಗೂ ರಾಜ್ಯದ ಜನರು ಬಜೆಟ್ ಕುರಿತಂತೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಪೊಲವರಂ ಯೋಜನೆಗೆ ಹಣಕಾಸು ನೆರವು ಹಾಗೂ ರಾಜಧಾನಿ ಅಮರಾವತಿಗೆ ಯಾವುದೇ ವಿತ್ತೀಯ ಅನುದಾನವನ್ನು ಈ ಸಲದ ಬಜೆಟಿನಲ್ಲಿ ಉಲ್ಲೇಖಿಸಲಾಗಿಲ್ಲವೆಂದು ಅವರು ಹೇಳಿದ್ದಾರೆ. ಪಕ್ಷವು ಮುಂದಿನ ಆದಿತ್ಯವಾರ ತುರ್ತು ಸಭೆಯೊಂದನ್ನು ಕರೆದಿದ್ದು, ಬಿಜೆಪಿಗೆ ತಮ್ಮ ಬೆಂಬಲ ವಾಪಾಸ್ ಪಡೆದು ಮೈತ್ರಿಯನ್ನು ಕೊನೆಗಾಣಿಸುವ ಕುರಿತು ಅಲ್ಲಿ ಚರ್ಚೆಯಾಗುವ ಸಂಭವವಿದೆ ಎನ್ನಲಾಗಿದೆ.
ಕಳೆದ ವಾರವಷ್ಟೇ ಚಂದ್ರಬಾಬು ನಾಯ್ಡು, “ಮೈತ್ರಿ ಧರ್ಮವನ್ನು ಪಾಲಿಸುತ್ತಿರುವುದರಿಂದಾಗಿ ನಮ್ಮ ಪಕ್ಷದ ಮುಖಂಡರನ್ನು ಬಿಜೆಪಿಯ ವಿರುದ್ಧ ಹೇಳಿಕೆಗಳನ್ನು ಕೊಡದಂತೆ ತಡೆದಿದ್ದೇನೆ. ನಮ್ಮ ಅವಶ್ಯಕತೆ ಅವರಿಗಿಲ್ಲದಿದ್ದರೆ ನಮಗೆ ತಿಳಿಸಲಿ, ನಾವು ಅವರಿಗೊಂದು ನಮಸ್ಕಾರ ಹೇಳಿ ನಮ್ಮ ದಾರಿ ನೋಡುವೆವು. ಬಿಜೆಪಿಯು ತಮ್ಮ ರಾಜ್ಯ ನಾಯಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ” ಎಂದು ಹೇಳಿ ಬಿಜೆಪಿಯ ವಿರುದ್ಧ ತಮ್ಮ ಪಕ್ಷಕ್ಕಿರುವ ಅಸಮಧಾನವನ್ನು ಹೊರ ಹಾಕಿದ್ದರು. ಇದೀಗ ಬಜೆಟಿನಲ್ಲಿ ರಾಜ್ಯಕ್ಕೆ ಸೂಕ್ತ ಪ್ರಾಧಾನ್ಯತೆ ದೊರೆಯದ ಹಿನ್ನೆಲೆಯಲ್ಲಿ ಎಲ್ಲಾ ಸಂಸದರು ಅಸಂತುಷ್ಟರಾಗಿದ್ದು, ಮೈತ್ರಿ ಮುರಿಯುವ ಕುರಿತು ಒಲವು ಹೊಂದಿದ್ದಾರೆನ್ನಲಾಗಿದೆ. ಒಂದು ವೇಳೆ ತೆಲುಗುದೇಶಂ ಮೈತ್ರಿ ಮುರಿದರೆ ಶಿವಸೇನೆಯ ಬಳಿಕ ಎನ್ ಡಿ ಎ ಯಿಂದ ಹೊರಬಂದ ಎರಡನೇ ಮಿತ್ರ ಪಕ್ಷವೆನಿಸಲಿದೆ.
