ನಿಮ್ಮ ಬರಹ

ಬ್ರಾಹ್ಮಣವಾದ ಮತ್ತು ಒಡೆದು ಆಳುವ ಮತಬ್ಯಾಂಕ್ !

ನೌಷಾದ್ ಕಲಂದರ್ ಕರ್ನಿರೆ

ಹೀಗೆ ಕಾಲಚಕ್ರ ಹಿಂತಿರುಗಿಸಿ ಒಮ್ಮೆ ಭಾರತದ ಇತಿಹಾಸ ಓದಿದರೆ ಈ ನಾಡನ್ನು ಮುಸ್ಲಿಂ ಚಕ್ರವರ್ತಿಗಳು ಸುಮಾರು 700 ವರುಷಗಳ ಕಾಲ ಸಾರ್ವಭೌಮ ಆಡಳಿತ ನಡೆಸಿದ್ದಾರೆ. ಹೀಗಿದ್ದರೂ ಆ ಕಾಲದಲ್ಲಿ ಒಂದೇ ಒಂದು ಕೋಮು ಸಂಘರ್ಷ ನಡೆದಂತಹ ಉದಾಹರಣೆ ಇತಿಹಾಸದ ಪುಟಗಳಲ್ಲಿ ಎಲ್ಲಿಯೂ ಕಾಣಸಿಗದು. ಯುದ್ಧಗಳು ಅಂದಿನ ಕಾಲದ ರಾಜರ ರಾಜ್ಯ ವಿಸ್ತರಣೆ ಅಥವಾ ಸಂಪತ್ತಿನ ಶೇಖರಣೆಯ ವಿಷಯವಾಗಿತ್ತೇ ಹೊರತು ಇದರಲ್ಲಿ ಎಳ್ಳಷ್ಟೂ ಕೋಮುವಾದ ಕಾಣಸಿಗದು.ಬದಲಾಗಿ ಬಹುತೇಕ ಮುಸ್ಲಿಂ ಅರಸರ ಆಸ್ಥಾನಗಳಲ್ಲಿ ಹಿಂದೂ ಪಂಡಿತರು ಹಾಗು ನಾಯಕರು ತಮ್ಮ ಸ್ಥಾನವನ್ನು ಪಡೆದಿದ್ದರು. ಆದರೆ ಇಂದಿನ ಈ ಪರಿಸ್ಥಿಗಳಿಗೆ ಹಾಗೂ ಇತಿಹಾಸದ ತಿರಿಚುವಿಕೆ ಮತ್ತು ದುರ್ಬಳಕೆಗಳಿಗೆ ಕಾರಣವೇನೆಂದು ನೋಡೋಣ!

ಹೆಚ್ಚು ಕಮ್ಮಿ ದೈವಸಂಭೂತರೆಂದೇ ಭಾವಿಸಿದ ಕೆಲವು ಮನುವಾದಿ ಮನಸ್ಸುಗಳು ಇತರ ಭಾರತೀಯ ವರ್ಗಗಳನ್ನು ನಿಯಂತ್ರಿಸುವ ಹಾಗು ಆಳುವ ಹಕ್ಕನ್ನು ಹೊಂದಿದ್ದಾರೆಂಬ ಅತಿಶಯ ಹುಸಿನಂಬಿಕೆಗಳಿಗೆ ಒಗ್ಗಿಕೊಂಡಿರುವವರನ್ನು ಬ್ರಾಹ್ಮಣವಾದಿಗಳು ಎನ್ನಬಹುದು. ಕಾಲಕ್ರಮೇಣ ಅಂದರೆ 1983 ರ ಮೊದಲ ಕೋಮುದಳ್ಳುರಿಯವರೆಗೂ ಈ ಬ್ರಾಹ್ಮಣವಾದಿಗಳ ತುಳಿತಕ್ಕೆ ಭಾರತೀಯ ಸಾಮಾನ್ಯ ವರ್ಗದ ಜನತೆ ಒಳಗಾಗಿತ್ತು.

ಹತ್ತೊಂಬತ್ತನೇ ಶತಮಾನದಲ್ಲಿ ಜ್ಯೋತಿರಾವ್ ಪುಲೆಯಂತಹ ಸಮಾಜಸುಧಾರಕರು ಈ ಬ್ರಾಹ್ಮಣವಾದಿಗಳ ಒಂದೊಂದೇ ಕುತಂತ್ರವನ್ನು ಹಾಗೂ ಸಾಮಾನ್ಯ ವರ್ಗದ ಮೇಲಿನ ತುಳಿತವನ್ನು ಜನರ ಮುಂದೆ ಬಿಚ್ಚಿಡಲಾರಂಬಿಸಿದರು. ಭಾರತದಲ್ಲಿ ಅತಿದೊಡ್ಡ ಚಳುವಳಿಗಳು ಹಾಗು ಜನರು ಪ್ರಜ್ಞಾವಂತರಾಗುವುದನ್ನು ಮನಗಂಡ ಮನುವಾದಿ ಮನಸ್ಸುಗಳು ಈ ಚಳುವಳಿಯ ದಿಕ್ಕುತಪ್ಪಿಸಲು ಉಪಯೋಗಿಸಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಉಪಯೋಗಿಸಿದ ದಾಳವೇ ಕೋಮುವಾದ ಅಥವಾ ಹಿಂದುತ್ವ ಅಥವಾ ಹಿಂದೂ ಮುಸ್ಲಿಂ ಮನಸ್ಸುಗಳ ವಿಭಜನೆ !

1983 ರ ಕೋಮುಗಲಭೆ ನಡೆದ ನಂತರದ ಬೆಳೆವಣಿಗೆಗಳು ಇಂತಹ ವಿಕೃತ ಮನುಸ್ಸುಗಳಿಗೆ ಟಾನಿಕ್  ನೀಡಿತು. ಮೊದಲನೆಯದಾಗಿ ಜನರ ಮನಸ್ಸನ್ನು ಬ್ರಾಹ್ಮಣ ವಿರೋಧಿಗಳಿಂದ ನೇರವಾಗಿ ಮುಸ್ಲಿಮರ ಮೇಲೆ ತಿರುಗಿಸಲಾಯಿತು. ಇಂತಹ ಒಡೆದು ಆಳುವ ಬ್ರಿಟಿಷ್ ಸರಕಾರದ ಅಜೇಂಡಾವನ್ನು ಅವರ ಬೂಟುನೆಕ್ಕಿದ ಸವಿನೆನಪಿಗಾಗಿ ಕ್ರಮಬದ್ದವಾಗಿ ಜಾರಿಗೊಳಿಸಲು ಮುಂದಿನ ಯೋಜನೆಗಳನ್ನು ರೂಪಿಸತೊಡಗಿದರು. ಪರಿಣಾಮವಾಗಿ ಸೌಹಾರ್ದತೆಯ ಪರಮ ಮಾದರಿ ಭೂಮಿಯಾದಂತ ಭಾರತದ ಮಣ್ಣಿಗೆ ಕೋಮುವಾದದ ವಿಷಪೂರಿತ ಗೊಬ್ಬರವನ್ನು ಹಾಕಿ ಮಲಿನಗೊಳಿಸಲು ಆರಂಭಿಸಲಾಯಿತು.

ಪರಿಣಾಮ ಅಲ್ಲಲ್ಲಿ ಪಟಾಕಿ ಸುಟ್ಟರೂ ಅದನ್ನು ವ್ಯವಸ್ಥಿತವಾಗಿ ಮುಸ್ಲಿಮರ ತಲೆಗೆ ಕಟ್ಟುವುದು ರೂಢಿಯಾಯಿತು. ಕಂಡು ಕೇಳರಿಯದ ನಾಮಧಾರಿ ಮುಸ್ಲಿಂ ಸಂಘಟನೆಗಳ ಹೆಸರು ಮಾಧ್ಯಮದಲ್ಲಿ ರಾರಾಜಿಸತೊಡಗಿದವು. ಭಾರತದಲ್ಲಿ ಮಾಧ್ಯಮಗಳನ್ನು ಖರೀದಿಸಿದ ಕೀರ್ತಿಯೂ ಈ ಷಡ್ಯಂತ್ರದಲ್ಲಿ ಅಡಗಿಕೊಂಡಿವೆ. ಮಾಧ್ಯಮಗಳಲ್ಲಿ ಬರುವುದೆಲ್ಲವೂ ಸತ್ಯ ಎಂಬಂತೆ ನಂಬುವ  ಜನರ ಮುಗ್ದ ಮನುಸ್ಸುಗಳಲ್ಲಿ ಇವರ ಈ ವ್ಯವಸ್ಥಿತ ಕಾರ್ಯಕ್ರಮಗಳ ನಿರೂಪಣೆ ನಡೆಯಿತು. ಸ್ವಾತಂತ್ರಕ್ಕಾಗಿ ಹೋರಾಡಿದ ಅನೇಕ ಮುಸಲ್ಮಾನ ಉಲೇಮಾಗಳು ಹಾಗೂ ಅವರ ಪರಂಪರೆಗಳನ್ನು ಇಂದು ತನ್ನ ನೀಚ ಉದ್ದೇಶ ಸಾಧನೆಗಾಗಿ ಭಯೋತ್ಪಾದಕರು ಎಂಬ ಹಣೆಪಟ್ಟಿಯನ್ನು ಕೊಟ್ಟರು. ಟೊಪ್ಪಿ ಗಡ್ಡ ಇಟ್ಟು ತನ್ನ ಧರ್ಮವನ್ನು ಪಾಲಿಸುವ ಸಾಮಾನ್ಯ ಮುಸಲ್ಮಾನರನ್ನೂ ಸಂಶಯದ ದೃಷ್ಠಿಯಿಂದ ನೋಡುವಂತಾಯಿತು.

ಒಂದೇ ಏಟಿಗೆ ಎರಡು ಹಕ್ಕಿ

ಲೇಖನದ ಹೆಸರೇ ತಿಳಿಸುವಂತೆ ದಲಿತ ದಮನಿತರ ಗಮನವನ್ನು ತಮ್ಮ ಮೇಲಿನ ದೌರ್ಜನ್ಯದ ಕರಾಳ ಸತ್ಯವನ್ನು ಮುಸ್ಲಿಂ ವಿರೋಧಿ ಷಡ್ಯಂತ್ರಗಳ ಮೂಲಕ ನಿಯಂತ್ರಿಸುವ ಉಪಾಯದಲ್ಲಿ ತಮಗರಿವಿಲ್ಲದಂತೆ ಈ ಷಡ್ಯಂತ್ರ ಕ್ರಮೇಣ ವೋಟ್ ಬ್ಯಾಂಕ್ ಆಗಿ ಬದಲಾವಣೆಯಾಗತೊಡಗಿತು. ಒಂದಾಗಿ ಕೂಡಿ ಬಾಳಿದ ಮನಸ್ಸಿಗೆ ಕೋಮುವಾದವೆಂಬ ವಿಷಪೂರಿತ ಗಾಳಿಯನ್ನು ತಮಗರಿವಿಲ್ಲದಂತೆ ಜನಸಾಮಾನ್ಯರು ತಮ್ಮಲ್ಲಿ ಬೆಳೆಸಲಾರಂಭಿಸಿದರು. ಜಗತ್ತಿನ ಅತಿ ಶ್ರೇಷ್ಠ ಸಂವಿಧಾನ ನಮ್ಮದು ಎಂದು ಹೆಮ್ಮೆಪಡುತ್ತಿರುವಂತೆಯೇ ಸಂವಿದಾನ ವಿರೋಧಿ ಹೇಳಿಕೆಗಳು ಹಾಗು ಕೃತ್ಯಗಳು ನಾಯಕರಿಂದಲೇ ಯೋಜಿತವಾಗಿ ರೂಪಗೊಳ್ಳತೊಡಗಿದವು.

ಪ್ರಸ್ತುತ ಕಾಲಘಟ್ಟದಲ್ಲಿ ನೋಡುತ್ತಿರುವಂತೆ ಕೆಲವೊಂದು ಪಕ್ಷಗಳು ಧರ್ಮವನ್ನು ಗುತ್ತಿಗೆ ಪಡೆದ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಅಂದರೆ ಕೋಮುವಾದವನ್ನು ಮಾಧ್ಯಮಗಳ ಮೂಲಕ ಜನರಲ್ಲಿ ಅಚ್ಚಳಿಯದಂತೆ ಬೇರೂರಿಸಿ, ಅದ್ಯಾವ ನಾಲಾಯಕ್ ನಾಯಕನಾದರೂ ಅವನಿಂದ ಅಭಿವೃದ್ದಿ ಕಾರ್ಯ ಶೂನ್ಯವಾದರೂ ಕೇವಲ ಪ್ರಚೋದನಕಾರಿ ಭಾಷಣದ ಮೂಲಕ ಭಾವನೆಗಳನ್ನು ಕೆರಳಿಸಿ ಮತ ಪಡೆಯುವಲ್ಲಿ ಸಫಲರಾಗುತ್ತಿದ್ದಾರೆ.

ಇಂತಹ ಕಾಲಘಟ್ಟದಲ್ಲಿ ಪ್ರಜ್ಞಾವಂತ ನಾಗರೀಕರಾಗಿ ನಮಗೆ ಹಲವಾರು ಜವಬ್ದಾರಿಗಳಿವೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬರೆದುಕೊಟ್ಟ ಸಂವಿದಾನವನ್ನು ಹಾಗೂ ಅದರ ಮೌಲ್ಯಗಳನ್ನು ಇಂತಹ ಮನುವಾದಿಗಳ ಕೈಗೆ ಕೊಟ್ಟು ಅದರ ಅಸ್ತಿತ್ವವನ್ನ ಕಳೆದುಕೊಳ್ಳದಂತೆ ಕಾಪಾಡುವ ಜವಾಬ್ದಾರಿ ಭಾರತದ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಕೊನೆಯದಾಗಿ ಬ್ರಾಹ್ಮಣಶಾಹಿ ಕೋಮುಶಕ್ತಿಗಳ ಕೈಗೆ ನಮ್ಮ ಭವ್ಯ ಭಾರತವನ್ನು ಕೊಟ್ಟು ಅಳಿಸದೆ ಉಳಿಸುವುದು ನಮ್ಮ ಕರ್ತವ್ಯವಾಗಿದೆ.

ನೌಷಾದ್ ಕಲಂದರ್ ಕರ್ನಿರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group