ವರದಿಗಾರ (ಫೆ 1) : ರಾಜಸ್ಥಾನದ ಎರಡು ಲೋಕಸಭಾ ಹಾಗೂ ಒಂದು ವಿಧಾನಸಭಾ ಸ್ಥಾನಗಳಿಗೆ ಜನವರಿ 29ರಂದು ನಡೆದ ಉಪಚುನಾವಣೆಯಲ್ಲಿ ವಸುಂಧರಾ ರಾಜೇ ಸಿಂಧಿಯಾ ನೇತೃತ್ವದ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಅಲೆಯೆದುರು ಕೊಚ್ಚಿಕೊಂಡು ಹೋಗಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಿಂತ ಮೊದಲು ನಡೆದ ಈ ಉಪಚುನಾವಣೆಯ ಫಲಿತಾಂಶವು ಆಡಳಿತಾರೂಢ ಬಿಜೆಪಿಯನ್ನು ಚಿಂತೆಗೀಡುಮಾಡಿದೆ.
ಮಂಡಲ್ ಗರ್ ವಿಧಾನಸಭೆ : ಮಂಡಲ್’ಗರ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿವೇಕ್ ಭಾಕಡ್ 12,976 ಮತಗಳ ಅಂತರದಿಂದ ಬಿಜೆಪಿಯ ಶಕ್ತಿ ಸಿಂಗ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಅಜ್ಮೀರ್ ಲೋಕಸಭೆ : ಇನ್ನೊಂದೆಡೆ ಅಜ್ಮೀರ್ ಲೋಕಸಭಾ ಚುನಾವಣೆಯಲ್ಲೂ ಕೂಡಾ ಕಾಂಗ್ರೆಸ್ಸಿನ ರಘು ಶರ್ಮಾ ಅವರು ಬಿಜೆಪಿಯ ರಾಮ್ ಸ್ವರೂಪ್ ಲಾಂಬಾ ಅವರನ್ನು ಭರ್ಜರಿ ಅಂತರದಿಂದ ಸೋಲಿಸಿ ಬಿಜೆಪಿಗೆ ಶಾಕ್ ನೀಡಿದ್ದಾರೆ. ಅಜ್ಮೀರ್ ರಾಜಸ್ಥಾನದ ಬಿಜೆಪಿಯ ಭದ್ರಕೋಟೆಯಾಗಿತ್ತೆನ್ನುವುದು ಇಲ್ಲಿ ವಿಶೇಷವಾಗಿದೆ. ಬಿಜೆಪಿಯ ಸಂಸದರಾಗಿದ್ದ ಸನ್ವರ್ ಲಾಲ್ ಜಾಟ್ ರವರ ಮರಣದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಗೆಲುವಿನ ಘೋಷಣೆ ಮತ್ತು ಮತಗಳ ಅಂತರ ಇನ್ನಷ್ಟೇ ಅಧಿಕೃತವಾಗಿ ಹೊರಬರಬೇಕಾಗಿದೆ
ಆಲ್ವಾರ್ ಲೋಕಸಭೆ : ಅದೇ ರೀತಿ ಆಲ್ವಾರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಡಾ. ಕರಣ್ ಸಿಂಗ್ ಅವರು ಬಿಜೆಪಿಯ ಜಸ್ವಂತ್ ಸಿಂಗ್ ಯಾದವ್ ವಿರುದ್ಧ 1, 56, 319 ಮತಗಳ ಅಂತರದಲ್ಲಿ ಜಯಶಾಲಿಯಾಗಿದ್ದಾರೆ. ಸಂಸದರಾಗಿದ್ದ ಬಿಜೆಪಿಯ ಚಾಂದ್ ನಾಥ್ ಅವರ ಅಕಾಲಿಕ ಮರಣದಿಂದ ಈ ಕ್ಷೇತ್ರ ತೆರವಾಗಿತ್ತು.
ಈ ವಿಜಯಗಳ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿಯಾಗಿ ತನ್ನ ಮುನ್ನುಡಿ ಬರೆದಿದೆ ಎನ್ನಬಹುದು. ಆಲ್ವಾರ್ ಹಾಗೂ ಅಜ್ಮೀರ್ ಲೋಕಸಭಾ ಕ್ಷೇತ್ರಗಳಲ್ಲಿ 17 ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನೆಡೆ ಅನುಭವಿಸಿದ್ದು, ಜನರ ಒಲವು ಯಾವ ಕಡೆ ಇದೆ ಎನ್ನುವುದಕ್ಕೆ ಇದು ಸ್ಪಷ್ಟ ಮುನ್ಸೂಚನೆಯಾಗಿದೆ. ಅದೇ ರೀತಿ ಬಿಜೆಪಿಯ ಗಾಯದ ಮೇಲೆ ಬರೆ ಎಳೆಯುವಂತೆ ಈ ಎರಡು ಕ್ಷೇತ್ರಗಳ ಗ್ರಾಮೀಣ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ನಗರ ಪ್ರದೇಶಗಳಲ್ಲೂ ಬಿಜೆಪಿ ತೀವ್ರ ಹಿನ್ನೆಡೆ ಅನುಭವಿಸಿದ್ದು ಬಿಜೆಪಿಯನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ.
