ಜಿಲ್ಲಾ ಸುದ್ದಿ

ಜಾತ್ಯತೀತ ಪರಂಪರೆಯ ಕುದ್ರೋಳಿಗೆ ಪ್ರಭಾಕರ್ ಭಟ್‌ ಬಂದದ್ದು ಅವಮಾನ: ಅಮೀನ್ ಮಟ್ಟು

ವರದಿಗಾರ (ಜ.31): ‘ಜಾತ್ಯತೀತ ಪರಂಪರೆಯ ದೊಡ್ಡ ಪ್ರತಿಪಾದಕರಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿಯ ಜಾತ್ಯತೀತ ದೇಗುಲಕ್ಕೆ ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್‌ ಕಲ್ಲಡ್ಕ ಬಂದಿದ್ದು ಗುರುಗಳಿಗೆ ಮಾಡಿದ ಅವಮಾನ’ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದಾರೆ.

ಅವರು ಮಂಗಳವಾರ ‘ಸೌಹಾರ್ದತೆಗಾಗಿ ಕರ್ನಾಟಕ’ ವತಿಯಿಂದ ಮಂಗಳೂರು ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ‘ಮಾನವ ಸರಪಳಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ಪೂಜಾರಿಯವರು ಭಟ್ಟರನ್ನು ವೇದಿಕೆ ಮೇಲೆ ಕೂರಿಸಿಕೊಂಡು ಕಣ್ಣೀರು ಹಾಕುತ್ತಾರೆ. ಯಾವುದಕ್ಕಾಗಿ ಈ ಕಣ್ಣೀರು? ಬಿಲ್ಲವರ ಮಕ್ಕಳು ಸಂಘಪರಿವಾರದ ಕಾಲಾಳುಗಳಾಗಿ ಹಿಂಸೆಗೆ ಇಳಿದು, ಅದಕ್ಕೇ ಬಲಿಯಾಗುತ್ತಿರುವ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ. ಕಟ್ಟು ಕತೆಗಳನ್ನು ಹೇಳಿ ಅಳುವುದಲ್ಲ. ದಿಕ್ಕು ತಪ್ಪಿರುವ ಮಕ್ಕಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಿತ್ತು’ ಎಂದು ಪೂಜಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, ಸಲಹೆ ನೀಡಿದರು.

‘ಸಂಘಪರಿವಾರದ ಕಾಲಾಳುಗಳಾಗಿ ಹಿಂಸೆಗೆ ಇಳಿಯುತ್ತಿರುವವರ ಮೆದುಳು ಶುದ್ಧೀಕರಣ ಮಾಡಬೇಕಿದೆ. ಅದಕ್ಕೂ ಮೊದಲು ತೆರೆಮರೆಯಲ್ಲಿ ಕುಳಿತು ಹಿಂಸೆಯನ್ನು ಪ್ರಚೋದಿಸುತ್ತಿರುವವರ ಮೆದುಳನ್ನು ಒಡೆಯಬೇಕು’ ಎಂದು ಸಮಾಜವನ್ನು ಒಡೆಯುತ್ತಿರುವವರ ವಿರುದ್ಧ ಖಾರವಾಗಿ ಹೇಳಿದ್ದಾರೆ.

‘ಸೌಹಾರ್ದದ ಕೊಂಡಿಗಳನ್ನು ತುಂಡರಿಸಲು ಆಗಾಗ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮೊಳಗೂ ಇರುತ್ತವೆ. ಬಿಲ್ಲವ ಯುವಕರ ಸಾವಿಗೆ, ಅವರು ಜೈಲು ಸೇರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾಗಿರುವ ಪ್ರಭಾಕರ ಭಟ್‌ ಜತೆ ಜನಾರ್ದನ ಪೂಜಾರಿ ಕೈ ಜೋಡಿಸಿದ್ದಾರೆ. ಸ್ವಾರ್ಥ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಸೈದ್ಧಾಂತಿಕವಾಗಿ ರಾಜಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಶತ್ರು ಮತ್ತು ಮಿತ್ರರನ್ನು ಗುರುತಿಸಲು ಸಾಧ್ಯವಾಗದಂತೆ ಸೈದ್ಧಾಂತಿಕ ದ್ರೋಹ ಬಗೆಯುವುದನ್ನು ಸಹಿಸಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ಏಕೆ ಎಂಬುದು ಗೊತ್ತಾಗುತ್ತಿಲ್ಲ. ಅವರೇನು ಪ್ರಧಾನಿಯಾ? ರಾಷ್ಟ್ರಪತಿಯಾ? ಪ್ರಭಾಕರ ಭಟ್‌ ಯಾರು ಎಂದು ತಿಳಿಯಲು ಇತಿಹಾಸ ಓದಬೇಕಿಲ್ಲ. ಇತ್ತೀಚೆಗೆ ಅವರು ಮಾಡಿದ ಭಾಷಣಗಳನ್ನು ಕೇಳಿದರೆ ಸಾಕು. ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group