ವರದಿಗಾರ (ಜ.29): ಗೌರಿ ಲಂಕೇಶ್ ಮಕ್ಕಳನ್ನು ಹೆತ್ತಿಲ್ಲ. ಆದರೆ ಲಕ್ಷಾಂತರ ಮಕ್ಕಳಿಗೆ ತಾಯಿಯಾಗಿದ್ದಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಅವರು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಗೌರಿ ಲಂಕೇಶ್ ಹುಟ್ಟು ದಿನದ ಪ್ರಯುಕ್ತ ಆಯೋಜಿಸಿದ್ದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಂದಿನ ದಿನಗಳಲ್ಲಿ ಮಾಧ್ಯಮಗಳು ತನ್ನದೇ ಆದ ಒಂದು ನಿಲುವನ್ನು ತೆಗೆದುಕೊಳ್ಳಬೇಕು. ಲಂಕೇಶ್ ಕೂಡ ಹೋರಾಟದ ಪತ್ರಕರ್ತರಾಗಿದ್ದರು. ಕಾಂಗ್ರೆಸ್ ವಿರೋಧಿ ಅಲೆಗೂ ಅವರು ಕಾರಣರಾಗಿದ್ದರು. ಚುನಾವಣೆ ಬಂದಾಗ ಇಂತವರನ್ನು ಗೆಲ್ಲಿಸಿ, ಸೋಲಿಸಿ ಅಂತಾ ಫರ್ಮಾನು ಹೊರಡಿಸಿದ್ರು. ಗೌರಿ ಕೂಡ ತಂದೆಯ ಹಾದಿಯನ್ನು ತುಳಿದಿದ್ರು. ಆದ್ರೇ ಈಗ ಪರಿಸ್ಥಿತಿ ಹಾಗಿಲ್ಲ ಉಣ್ಣವ ಅನ್ನವೇ ವಿಷವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗೌರಿ ಎತ್ತಿದ್ದ ಧ್ವನಿ ನಾವು ಎತ್ತದಿದ್ದರೆ ಗೌರಿಯನ್ನು ಮತ್ತೆ ಮತ್ತೆ ನಾವು ಸಾಯಿಸಿದ ಹಾಗೆ ಎಂದು ಅಮೀನ್ ಮಟ್ಟು ಹೇಳಿದ್ದಾರೆ. ಗೌರಿ ಹತ್ಯೆ ಆರೋಪಿಗಳನ್ನು ಕೇವಲ ಬಂಧನವಾಗಬೇಕೆಂದು ಹೇಳುತ್ತಿಲ್ಲ. ಬದಲಾಗಿ ಕಠಿಣ ಶಿಕ್ಷೆಗೆ ಗುರಿಪಡಿಸುವುದರೊಂದಿಗೆ ಗೌರಿ ಬಿತ್ತಿ ಹೋದ ಆಶಯಗಳನ್ನು ಜೀವಂತವಾಗಿಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಗೌರಿ ಹತ್ಯೆ ಒಂದು ಸಿದ್ಧಾಂತಕ್ಕಾಗಿ ನಡೆದಿದೆ. ಆ ಸಿದ್ಧಾಂತವನ್ನು ನಾವೆಲ್ಲರೂ ಜೊತೆಗೂಡಿ ಮುಂದುವರಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ ಸಭಿಕರೆಲ್ಲರೂ ಜೋರು ಧ್ವನಿಯಲ್ಲಿ ‘ನಾನೂ ಗೌರಿ, ನಾವೆಲ್ಲರೂ ಗೌರಿ’ ಎಂದು ಹೇಳುತ್ತಾ ಅಮೀನ್ ಮಟ್ಟು ಮಾತಿಗೆ ಸಹಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದೊರೆಸ್ವಾಮಿ, ಕನ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿ, ಪ್ರಕಾಶ್ ರೈ, ಶೆಹ್ಲಾ ರಷೀದ್, ಉಮರ್ ಖಾಲೀದ್, ತೀಸ್ತಾ ಸೆಟಲ್ವಾಡ್, ಕವಿತಾ ಲಂಕೇಶ್, ಕೆ. ನೀಲಾ, ಎನ್. ಮುನಿಸ್ವಾಮಿ ಹಾಗೂ ಇನ್ನಿತರ ಹೋರಾಟಗಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ‘ನಾನು ಗೌರಿ’ ‘ಉರಿಯ ಬೆಳಂದಿಗಳು’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಬಹುಭಾಷಾ ನಟ ಪ್ರಕಾಶ್ ರೈ ಒಂದು ಪುಸ್ತಕವನ್ನು 1 ಲಕ್ಷ ರೂಪಾಯಿಗೆ ಪಡೆದುಕೊಳ್ಳುವ ಮೂಲಕ ಸಂಘಟಕರನ್ನು ಪ್ರೋತ್ಸಾಹಿಸಿದರು.
ಆರ್.ಅಶೋಕ್ ಕಾರ್ಯಕ್ರಮ ನಿರೂಪಿಸಿದರು.
