ವರದಿಗಾರ (ಜ.29): ಕೆಲವು ದುರುಳರಿಗೆ ರಾಕ್ಷಸರಿಗೆ ಒಂದು ವಿಷಯ ಅರ್ಥ ಆಗಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು ಮಡಿದಾಗ ಸಮಾಧಿ ಮಾಡಲ್ಲ ನಾವು, ಬಿತ್ತುತ್ತೇವೆ. ಅದು ಹಲವಾರು ಮರಗಳಾಗಿ ಹಲವು ಧ್ವನಿಗಳಾಗುತ್ತೆ. ಗೌರಿ ಸಾವನ್ನು ಸಂಭ್ರಮಿಸುವವರಿಗೆ ನಾನು ಹೇಳುತ್ತಿದ್ದೇನೆ. ಗೌರಿಯನ್ನು ನಾವು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಅವರು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಗೌರಿ ಲಂಕೇಶ್ ಹುಟ್ಟು ದಿನದ ಪ್ರಯುಕ್ತ ಆಯೋಜಿದ್ದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ರೋಹಿತ್ ವೇಮುಲ ಹತ್ಯೆಯಿಂದ ಕನ್ಹಯ್ಯ ಕುಮಾರ್ , ಶೆಹ್ಲಾ ರಶೀದ್ ರಂತೆ ಹಲವು ಹೋರಾಟಗಾರರನ್ನು ಈ ಸಮಾಜಕ್ಕೆ ಪರಿಚಯಿಸಿತು. ದಲಿತರ ಹತ್ಯೆಯಿಂದ ಜಿಗ್ನೇಶ್ ಮೇವಾನಿ ಎಂಬ ಹೋರಾಟಗಾರರನ್ನು ಪರಿಚಯಿಸಿತು. ಗೌರಿ ಹತ್ಯೆಯಿಂದ ನನ್ನನ್ನು ಮತ್ತು ನಿಮ್ಮನ್ನು ಪರಿಚಯಿಸಿತು. ಈ ಧ್ವನಿ ಮುಂದುವರಿಯುತ್ತದೆ ಮತ್ತು ದೊಡ್ಡ ಶಬ್ದಗಳಲ್ಲಿ ಮುಂದುವರಿಯುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಗೌರಿ ಸಾವಿನ ಧ್ವನಿ ಇನ್ನೂ ದೊಡ್ಡದಾಗತ್ತೆ.
ಜಗತ್ತಿನ ಯಾವುದೇ ಫ್ಯಾಸಿಸ್ಟ್ ವ್ಯವಸ್ಥೆ ಹೆಚ್ಚು ಕಾಲ ಉಳಿಯೋದಿಲ್ಲ ಎಂದ ಪ್ರಕಾಶ್ ರೈ, ಫ್ಯಾಸಿಸ್ಟ್ ಶಕ್ತಿಗಳು ಇನ್ನು ಬಹಳ ದಿನ ಉಳಿಯಲ್ಲ ಹೆಚ್ಚು ಅಂದರೆ ಇನ್ನೊಂದು ಐದು ವರ್ಷ ಕಷ್ಟಪಟ್ಟು ಇರ್ತಾರೆ ಆಮೇಲೆ ಹೋಗಲೇಬೇಕು. ಇವರ ಶಕ್ತಿಯನ್ನು ನಾವು ತಡೆಗಟ್ಟಬೇಕು ಸ್ವಲ್ಪ ಸಮಯ ನಾವು ಸುಮ್ಮನಿದ್ದೆವು ಅದಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ದೊಡ್ಟಮಟ್ಟದಲ್ಲಿ ವಿಜೃಂಭಿಸಿದವು ಎಂದು ಹೇಳಿದ್ದಾರೆ .
ಕಾರ್ಯಕ್ರಮದಲ್ಲಿ ಎಚ್. ಎಸ್. ದೊರೆಸ್ವಾಮಿ, ಕನ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿ, ದಿನೇಶ್ ಅಮಿನ್ ಮಟ್ಟು, ಶೆಹ್ಲಾ ರಷೀದ್, ಉಮರ್ ಖಾಲೀದ್, ತೀಸ್ತಾ ಸೆಟಲ್ವಾಡ್, ಕವಿತಾ ಲಂಕೇಶ್, ಕೆ. ನೀಲಾ, ರಾಧಿಕಾ ವೇಮುಲಾ, ಎನ್. ಮುನಿಸ್ವಾಮಿ ಇನ್ನಿತರ ಹೋರಾಟಗಾರರು ಉಪಸ್ಥಿತರಿದ್ದರು.
