ವರದಿಗಾರ (ಜ 28 ) : ಮಂಗಳೂರಿನಲ್ಲಿ ಇತ್ತೀಚೆಗೆ ಮತಾಂಧರಿಂದ ದಾಳಿಗೊಳಗಾದ ಬಶೀರ್ ಹತ್ಯೆ ನಡೆದದ್ದರಲ್ಲಿ ವಿ ಹೆಚ್ ಪಿ ಗೆ ಯಾವುದೇ ಚಿಂತೆಯಿಲ್ಲ. ನಾವು ಬೀದಿಗೆ ಇಳಿದು ಇಂತಹಾ ಕೃತ್ಯಗಳನ್ನು ನಡೆಸಲು ಸಾಧ್ಯವಿಲ್ಲ. ಆದರೆ ಇಂತಹಾ ಹತ್ಯೆ ನಡೆಸುವವರಿಗೆ ನಾವೆಲ್ಲರೂ ಬೆಂಬಲ ನೀಡಬೇಕಾಗಿದೆ ಎಂದು ದಕ್ಷಿಣ ಕನ್ನಡ ವಿ ಹೆಚ್ ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಎಂಬಾತ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮವನ್ನೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಈತ ಮೇಲಿನ ರೀತಿಯ ಪ್ರಚೋದಿತ ಹೇಳಿಕೆ ನೀಡಿದ್ದಾನೆ. ದೀಪಕ್ ರಾವ್ ಹತ್ಯೆ ನಡೆದದ್ದಕ್ಕೆ ಪ್ರತೀಕಾರವಾಗಿ ಬಶೀರ್ ಹತ್ಯೆ ನಡೆದಿದೆ. ಆದುದರಿಂದ ಬಶೀರ್ ಹತ್ಯೆ ನಮಗೆ ಚಿಂತೆ ನೀಡಿಲ್ಲ. ಅದೇ ವೇಳೆ ನಮಗೆ ಇಂತಹಾ ಹತ್ಯೆಗಳನ್ನು ನಡೆಸಲು ಸಾಧ್ಯವಿಲ್ಲ. ಹತ್ಯೆ ನಡೆಸುವವರಿಗೆ ನಾವು ಬೆಂಬಲ ನೀಡಬೇಕು ಎಂದು ಬಹಿರಂಗವಾಗಿ ಉಗ್ರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಮತಾಂಧ ಆತಂಕವಾದಿಗಳನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದಾನೆ. ಇನ್ನೂ ಮುಂದುವರಿದ ಶೇಣವ, ‘ನನಗೆ ಗೊತ್ತು ಇದು ಮಾಧ್ಯಮಗಳಲ್ಲಿ ಬರುತ್ತದೆ, ದೂರು ದಾಖಲಾಗುತ್ತದೆಯೆಂದು. ಆದರೆ ಅದನ್ನೆಲ್ಲಾ ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಕಾನೂನನ್ನೇ ಅಣಕವಾಡುವಂತೆ ಬೇಜವಬ್ದಾರಿಯುತವಾಗಿ ಮಾತನಾಡಿದ್ದಾನೆ.
ಒಟ್ಟಿನಲ್ಲಿ ಶಾಂತವಾಗಿರುವ ಕರಾವಳಿ ಜಿಲ್ಲೆಯನ್ನು ಮತ್ತೊಮ್ಮೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆಯುವ ಸಂಘಪರಿವಾರದ ರಹಸ್ಯ ಕಾರ್ಯಸೂಚಿಗಳು ಗರಿಗೆದರಿರುವ ಶಂಕೆ ಜಗದೀಶ್ ಶೇಣವನ ಹೇಳಿಕೆಯಿಂದ ವ್ಯಕ್ತವಾಗಿದೆ. ಪೊಲೀಸರು ಕೂಡಲೇ ಈ ಕುರಿತು ಗಮನಹರಿಸಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆಯೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವೀಡಿಯೋ ವೀಕ್ಷಿಸಿ
ಕೃಪೆ : ವಾರ್ತಾ ಭಾರತಿ
