ರಾಜ್ಯ ಸುದ್ದಿ

ಕಲ್ಲಡ್ಕ ಭಟ್ ಬಂಧನದ ರಾಜಕೀಯಕ್ಕೆ ಜೆಡಿಎಸ್ ಸರದಿ

ವರದಿಗಾರ-ರಾಜಕೀಯ ವಿಮರ್ಶೆ: ಚುನಾವಣೆ ಹತ್ತಿರವಾದಾಗಲೆಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಒಂದಲ್ಲೊಂದು ಆಶ್ವಾಸನೆಗಳನ್ನು ನೀಡುವುದು ಸಾಮಾನ್ಯ. ಕರ್ನಾಟಕದ ಕರಾವಳಿಯ ರಾಜಕೀಯನೇ ಒಂತರಾ ವಿಚಿತ್ರ. ಇಲ್ಲಿ ಕೋಮು ಅಂಶಗಳು ಬಹಳಷ್ಟು ಪ್ರಭಾವ ಬೀರುತ್ತದೆ. ಅದಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳು ಮತದಾರರನ್ನು ಅದೇ ಹಾಡಿನ ಮೂಲಕ ನರ್ತಿಸುವಂತೆ ಮಾಡುತ್ತದೆ. ಜಾತ್ಯಾತೀತ ಪಕ್ಷಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಎಲ್ಲಾ ಪಕ್ಷಗಳಿಗೂ “ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ” ಇಲ್ಲಿ ಪ್ರಮುಖ ಚುನಾವಣಾ ಅಂಶ !! ಇದಕ್ಕೆ ಹೊಸ ಸೇರ್ಪಡೆಯೇ ಜಾತ್ಯಾತೀತ ಜನತಾದಳದ (ಜೆಡಿಎಸ್) ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಈ ಕುರಿತಾಗಿನ ಹೇಳಿಕೆ.

ಆದಿತ್ಯವಾರ ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, ಕಲ್ಲಡ್ಕ ಪ್ರಭಾಕರ್ ಭಟ್ ರವರು ಶೀರಾಮ ವಿದ್ಯಾಸಂಸ್ಥೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಅನುದಾನ ಪಡೆಯುತ್ತಿದ್ದನ್ನು ತಡೆ ಹಿಡಿದಿರುವ ರಾಜ್ಯ ಸರಕಾರದ ನಡೆಯನ್ನು ಸಮರ್ಥಿಸಿದ್ದರಲ್ಲದೇ, ಭಟ್ ಏನೆಂದು ನನಗೆ ಸರಿಯಾಗಿ ಗೊತ್ತಿದೆ. ಭಟ್ ರನ್ನು ಸರಕಾರ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಇತರೆ ಪಕ್ಷಗಳಂತೆ ಇದೊಂದು ರಾಜಕೀಯ ಗಿಮಿಕ್ ಹೇಳಿಕೆ ಎನ್ನಲಾಗಿದ್ದು, ಈ ಬಾರಿ ಕರಾವಳಿಯಲ್ಲಿ ತಮ್ಮ ಹಳೆಯ ಗತವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಲವು ಬಾರಿ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಡೆಯ ಮುಂದುವರಿದ ಭಾಗ ಇದೆಂದೇ ವ್ಯಾಖ್ಯಾನಿಸಲಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ‘ಪ್ರಭಾಕರ್ ಭಟ್ ಬಂಧನ’ ಹೇಳಿಕೆಯೇ ಅತ್ಯಂತ ಹೆಚ್ಚು ಪ್ರಚಾರದಲ್ಲಿತ್ತು ಮತ್ತು ರಾಜಕೀಯದ ಮತಬ್ಯಾಂಕಿಗೆ ಇದು ಬಹಳಷ್ಟು ಪುಷ್ಠಿ ನೀಡಿತ್ತು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಗರದಲ್ಲಿ ನಡೆದ 2013ರ ವಿಧಾನಸಭಾ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, ಕಲ್ಲಡ್ಕ ಭಟ್ ಕೇಸ್ ರೀ ಓಪನ್’ಎಂಬ ಹೇಳಿಕೆಯನ್ನು ನೀಡಿ, ಮತದಾರರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಕೂಡ ಇದನ್ನೇ ಪಾಲಿಸಿದ್ದರು. ‘ಇದು ನನ್ನ ಮತ್ತು ಪ್ರಭಾಕರ್ ಭಟ್ ನಡುವಿನ ನೇರ ಸ್ಪರ್ಧೆ’ ಎಂಬ ಹೇಳಿಕೆ ನೀಡಿದ್ದರು. ಹಾಗೂ ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಪ್ರಭಾಕರ್ ಭಟ್ ಬಂಧನದ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದ ವಿಡಿಯೋ ವೈರಲ್ ಆಗಿದ್ದು, ರಾಜ್ಯದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ತನ್ನ ರಾಜಕೀಯ ಲಾಭಕ್ಕಾಗಿ ಪ್ರಭಾಕರ್ ಭಟ್ ಹೆಸರನ್ನೇ ತನ್ನ ಅಸ್ತ್ರವಾಗಿಸಿಕೊಂಡ ದೇವೆಗೌಡರ ಹೇಳಿಕೆಯ ವಿರುದ್ಧ ಜನಸಾಮಾನ್ಯರು ಆಕ್ರೋಶಿಗೊಂಡಿದ್ದಾರೆ.

ಒಟ್ಟಿನಲ್ಲಿ ಭಟ್ಟ್ ರ ಬಂಧನವನ್ನು ಮುಂದಿಟ್ಟುಕೊಂಡು ರಾಜಕೀಯ ದಾಳ ಹಾಕುವ ಪಕ್ಷಗಳ ಸಾಲಿಗೆ ಜಾತ್ಯಾತೀತ ಜನತಾದಳವೂ ಸೇರಿಕೊಂಡಿದೆ. ಹಲವು ಆರೋಪಗಳ ಮಧ್ಯೆಯೂ ಕಲ್ಲಡ್ಕ ಪ್ರಭಾಕರ ಭಟ್ಟರ ಬಂಧನ ಮಾತ್ರ ಇನ್ನೂ ದೂರದ ಮಾತಾಗಿ ಉಳಿದಿರುವುದು ರಾಜಕೀಯ ಪಕ್ಷಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಇನ್ನಾದರೂ ರಾಜಕೀಯದ ಓಲೈಕೆಯ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನಕ್ಕೆ ಅಂತ್ಯ ಕಾಣುವುದು ಸಮಾಜದ ಒಕ್ಕೊರಳ ಬೇಡಿಕೆಯಾಗಿದೆ. ಕಾನೂನನ್ನು ಉಲ್ಲಂಘಿಸುವವರು ಎಷ್ಟೇ ಪ್ರಭಾವಿತರಾಗಿದ್ದರೂ, ಪೊಲೀಸ್ ಇಲಾಖೆ ಈ ವಿಚಾರದಲ್ಲಿ ತನ್ನ ಸ್ಪಷ್ಟ ನಿಲುವನ್ನು ತೋರ್ಪಡಿಸುವುದು ಅವಶ್ಯಕತೆಯಾಗಿದೆ.
ತಮ್ಮ ಜನಪರ ಕಾರ್ಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸಬೇಕಾಗಿದ್ದ ರಾಜಕೀಯ ಪಕ್ಷಗಳು ಓಲೈಕೆಯ ರಾಜಕಾರಣವನ್ನು ಪಾಲಿಸುತ್ತಿರುವುದು ಮಾತ್ರ ಖೇಧಕರ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group