ವರದಿಗಾರ (ಜ 27 ) : ಮಂಡ್ಯ ಕೆ ಆರ್ ಪೇಟೆಯ ನವೋದಯ ಅಲ್ಪಸಂಖ್ಯಾತ ವಸತಿ ಶಾಲೆಯ ವಿದ್ಯಾರ್ಥಿನಿ ಝೈಬುನ್ನೀಸಾಳ ನಿಗೂಢ ಆತ್ಮಹತ್ಯೆಯ ಕುರಿತಾಗಿ ರಾಜ್ಯದಾದ್ಯಂತ ಅಸಹನೆಯ ಕಟ್ಟೆ ನಿಧಾನವಾಗಿ ಒಡೆಯುತ್ತಿದ್ದು, ದಕ್ಷಿಣ ಕನ್ನಡವೂ ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಪುತ್ತೂರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ನಡೆದ ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕಾರ್ಯದರ್ಶಿ ರಿಯಾಝ್ ಬಳಕ್ಕರವರು, ರಾಜ್ಯದ ಸಚಿವರ ನಿವಾಸಕ್ಕೆ ಐಟಿ ದಾಳಿಯಾದಾಗ ಪ್ರತಿಭಟಿಸುವ ವಿದ್ಯಾರ್ಥಿ ಸಂಘಟನೆಗಳು ಅಮಾಯಕ ವಿದ್ಯಾರ್ಥಿನಿಗೆ ಅನ್ಯಾಯವಾದಾಗ ಪ್ರತಿಭಟಿಸದಿರುವುದು ಖೇದಕರ ಎಂದಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಮೈಸೂರಿನ ಕೆ ಆರ್ ಪೇಟೆಯ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ನಿಗೂಢ ಸಾವನ್ನಪ್ಪಿದ ವಿದ್ಯಾರ್ಥಿನಿ ಝೈಬುನ್ನೀಸಾಳ ಸಾವಿನ ಸಮಗ್ರ ತನಿಖೆ ಹಾಗು ಹೆಚ್ಚಿನ ಪರಿಹಾರ ಮೊತ್ತ ನೀಡುವಂತೆ ಆಗ್ರಹಿಸಿ ಪುತ್ತೂರಿನ ದರ್ಬೆ ವೃತ್ತದ ಬಳಿ ಇಂದು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾದ ಸವಾದ್ ಕಲ್ಲರ್ಪೆ, ರಾಜ್ಯದಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮಿತಿ ಮೀರುತ್ತಿದ್ದು ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆಯ ಮೂಲಕ ವಿದ್ಯಾರ್ಥಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದರು. ರಿಯಾಝ್ ಬಳಕ್ಕ ದಿಕ್ಸೂಚಿ ಭಾಷಣ ಮಾಡಿದರೆ, ಹರ್ಷಿತ್ ಕುಮಾರ್ ಕುರಿಯ, ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲ್ಲೂಕು ಸಮಿತಿ ಕಾರ್ಯದರ್ಶಿ ರಿಯಾಝ್ ಅಂಕತಡ್ಕ ಉಪಸ್ಥಿತರಿದ್ದರು. ಅಝೀಝ್ ಕಲ್ಲರ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
