ವರದಿಗಾರ(24-01-2018): ಕೇರಳ ಸರಕಾರವು ಮಂಗಳವಾರದಂದು ರಾಜ್ಯದ ಎಲ್ಲಾ ಸಂಸ್ಥೆಗಳಿಗೆ ಗಣರಾಜ್ಯೋತ್ಸವವನ್ನು ಆಚರಿಸುವ ರೀತಿಯ ಬಗ್ಗೆ ಸುತ್ತೋಲೆಯನ್ನು ಕಳುಹಿಸಿದೆ. ಸುತ್ತೋಲೆಯ ಪ್ರಕಾರ, ರಾಜ್ಯದ ಎಲ್ಲಾ ಸರಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣವು ಇಲಾಖೆಯ ಮುಖ್ಯಸ್ಥರಿಂದ ನಡೆಯಬೇಕು.
ಪಾಲಕ್ಕಾಡ್ ಜಿಲ್ಲೆಯಲ್ಲಿರುವ ವಿದ್ಯಾ ಸಂಸ್ಥೆಯೊಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರಿಂದ ಧ್ವಜಾರೋಹಣ ನಡೆಸುವ ಸಿದ್ಧತೆಯಲ್ಲಿತ್ತು. ಆದರೆ, ಇದೀಗ ಸರಕಾರ ಸುತ್ತೋಲೆ ಕಳುಹಿಸಿದ ನಂತರ ಅವರಿಗೆ ಧ್ವಜಾರೋಹಣ ಮಾಡಲು ಸಾಧ್ಯವಿಲ್ಲ.
ಈಗಾಗಲೇ ಅಸ್ಥಿತ್ವದಲ್ಲಿರುವ ಕೇಂದ್ರೀಯ ನೀತಿ-ನಿಯಮಗಳ ಪ್ರಕಾರ ಸುತ್ತೋಲೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿಯ ಕಚೇರಿಯಿಂದ ತಿಳಿಸಲಾಗಿದೆ.
ಕಳೆದ ವರ್ಷ, ಆಗಸ್ಟ್15ರಂದು ಮೋಹನ್ ಭಾಗ್ವತ್ ಪಾಲಕ್ಕಾಡ್ ಜಿಲ್ಲೆಯ ಸರಕಾರಿ ಅನುದಾನಿತ ಶಾಲೆಯಲ್ಲಿ ಧ್ವಜಾರೋಹಣ ನಡೆಸಿದ್ದರು. ಸರಕಾರಿ ಅನುದಾನಿತ ಶಾಲೆಗಳಲ್ಲಿ ಜನಪ್ರತಿನಿಧಿಗಳು ಅಥವಾ ಶಾಲೆಯ ಆಡಳಿತ ಮಂಡಳಿಯಲ್ಲಿರುವವರು ಮಾತ್ರ ಧ್ವಜಾರೋಹಣ ಮಾಡಬಹುದೆಂದು ಜಿಲ್ಲಾಧಿಕಾರಿ ಹೇರಿದ್ದ ನಿರ್ಬಂಧವನ್ನು ಉಲ್ಲಂಘಿಸಿ ಮೋಹನ್ ಭಾಗ್ವತ್ ಧ್ವಜಾರೋಹಣ ನಡೆಸಿದ್ದರು. ಆಗ ಕೇರಳ ಸರಕಾರವು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿತ್ತು. ಇದೀಗ ಅವರು ಮತ್ತೊಮ್ಮೆ ಧ್ವಜಾರೋಹಣ ಮಾಡಿ ಆಡಳಿತದಲ್ಲಿರುವ ಎಡ ಪಕ್ಷವನ್ನು ತೊಂದರೆಗೆ ಸಿಲುಕಿಸುವ ಪ್ರಯತ್ನದಲ್ಲಿದ್ದರು.
ಆರೆಸ್ಸೆಸ್, ತನ್ನ ಅಧೀನದಲ್ಲಿರುವ ವಿದ್ಯಾ ಸಂಸ್ಥೆಯೊಂದರಲ್ಲಿ ಮೋಹನ್ ಭಾಗ್ವತ್ ರಿಂದ ಧ್ವಜಾರೋಹಣ ನಡೆಸಲು ತೀರ್ಮಾನಿಸಿತ್ತು.
