ವರದಿಗಾರ (ಜ 24 ) : ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 23 ಕಾರ್ಯಕತರ ಹತ್ಯೆಯಾಗಿದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಹತ್ಯೆ ಪ್ರಕರಣಗಳ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸುಳ್ಳು ಪ್ರಚಾರಗಳ ಮೂಲಕ ಜನರನ್ನು ಪ್ರಚೋದಿಸಿ ಮತ ಸೆಳೆಯುವ ಬಿಜೆಪಿಯ ಕೆಟ್ಟ ಚಾಳಿ ಮತ್ತೊಮ್ಮೆ ಜಗಜ್ಜಾಹೀರಾದಂತಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಿಂದೂಪರ ಸಂಘಟನೆಯ 23 ಕಾರ್ಯಕತರ ಹತ್ಯೆಯಾಗಿದೆ ಎಂದು ಕೇಂದ್ರ ಸಚಿವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪತ್ರ ಬರೆದಿರುವ ಕಾರಣಕ್ಕೆ 23 ಪ್ರಕರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದ್ದೇವೆ. ಕೇಂದ್ರ ಸರಕಾರ ಈ ಕುರಿತು ರಾಜ್ಯ ಸರಕಾರದಿಂದ ಯಾವುದೇ ಮಾಹಿತಿ ಕೇಳಿಲ್ಲ. ಆದರೂ ನಾವಿಂದಿಲ್ಲಿ ಬಿಡುಗಡೆ ಮಾಡಿರುವ ದಾಖಲೆಗಳ ಪ್ರತಿಯನ್ನು ಕೇಂದ್ರ ಸರಕಾರಕ್ಕೂ ಕಳುಹಿಸಿಕೊಡಲಿದ್ದೇವೆ ಮಾತ್ರವಲ್ಲ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೂ ದಾಖಲೆಗಳನ್ನು ಕಳಿಸುತ್ತೇವೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬಿಜೆಪಿಯವರು ಆಪಾದಿಸಿರುವ ಈ ಹತ್ಯೆ ಪ್ರಕರಣಗಳಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರಿಲ್ಲ. 23 ಹತ್ಯೆ ಪ್ರಕರಣಗಳಲ್ಲಿ 9 ಪ್ರಕರಣಗಳು ಮಾತ್ರ ಕೋಮುಗಲಭೆಯಿಂದ ಹತ್ಯೆಯಾಗಿದೆ, ಉಳಿದಂತೆ 2 ಆತ್ಮಹತ್ಯೆ ಪ್ರಕರಣ, 10 ಖಾಸಗಿ ವಿಚಾರಗಳಿಗೆ ಹತ್ಯೆ ಹಾಗೂ ಒಬ್ಬರು ಅಪಘಾತ ಪ್ರಕರಣದಲ್ಲಿ ಮೃತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕೋಮುಗಲಭೆಗಳಿಂದ ಹತ್ಯೆಯಾಗಿರುವ 9 ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್ ಶೀಟ್ ಹಾಗು ಎಫ್ಐಆರ್ ಹಾಕಲಾಗಿದೆ ಎಂದು ತಿಳಿಸಿದ ಅವರು ಈ ಮೂಲಕ 23 ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಸುಳ್ಳಾರೋಪಗಳನ್ನು ಮುಂದುವರಿಸಿದರೆ ಬಿಜೆಪಿ ವಿರುದ್ಧ ಕಾನೂನು ಕ್ರಮ : ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಮತ್ತೆ ಮತ್ತೆ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎನ್ನುವ ಸುಳ್ಳಾರೋಪಗಳನ್ನು ಬಿಜೆಪಿಯವರು ಮುಂದುವರಿಸಿದರೆ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಗುಂಡೂರಾವ್ ತಿಳಿಸಿದರು. ಬಿಜೆಪಿಯವರು ಸುಳ್ಳು ಹೇಳುವುದನ್ನು ಮೊದಲು ಬಿಡಬೇಕು. ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ
