ವರದಿಗಾರ (ಜ 24 ) : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ 16ನೇ ಲೋಕಸಭೆಯ ಅವಧಿ 2019 ರ ಮೇ ವೇಳೆಗೆ ಅಂತ್ಯವಾಗಲಿದೆ. ಆದರೆ ಅದಕ್ಕಿಂತಲೂ ಮುಂಚಿತವಾಗಿ ಲೋಕಸಭೆಯನ್ನು ವಿಸರ್ಜಿಸಿ ಅವಧಿಪೂರ್ವ ಲೋಕಸಭಾ ಚುನಾವಣೆಗೆ ಮೋದಿ ಹಾಗೂ ಬಿಜೆಪಿ ಯೋಚಿಸುತ್ತಿದೆಯೇ? ಹೌದೆನ್ನುತ್ತದೆ ಬಿಜೆಪಿಯ ಕೆಲವೊಂದು ಮೂಲಗಳು. ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿದರೂ ಅಲ್ಲಿ ತಮಗಾದ ಹಿನ್ನೆಡೆ, ಅದೇ ರೀತಿ ತಮ್ಮ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ದೇಶದಾದ್ಯಂತ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿರುವ ಆಡಳಿತ ವಿರೋಧಿ ಅಲೆ ಹಾಗೂ ನಿಧಾನವಾಗಿ ತಮ್ಮ ನೆಲೆಯನ್ನು ಭದ್ರಗೊಳಿಸುತ್ತಿರುವ ವಿರೋಧಪಕ್ಷಗಳ ನಡೆಗಳನ್ನು ಕಂಡು ವಿಚಲಿತರಾಗಿರುವ ಬಿಜೆಪಿ ಹಾಗೂ ನರೇಂದ್ರ ಮೋದಿ ಈ ಒಂದು ತೀರ್ಮಾನಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಇದು ಹೌದೆಂದಾದರೆ 2018 ರ ಕೊನೆಯ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ.
ಈ ಕುರಿತಾಗಿನ ಊಹಾಪೋಹಗಳಿಗೆ ಇಂಬು ನೀಡಿದ್ದು ಉದ್ಯಮಿ ರಾಜೇಶ್ ಜೈನ್ ಅವರ ಹೇಳಿಕೆ. ಈ ರಾಜೇಶ್ ಜೈನ್ ಬೇರಾರೂ ಅಲ್ಲ, 2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದ ನೀತಿ ಡಿಜಿಟಲ್ ವೆಬ್ ಸೈಟಿನ ನಿರ್ಮಾತೃ. ಅವರ ಪ್ರಕಾರ ಬಿಜೆಪಿಯು ಮುಂದಿನ 100 ದಿನಗಳಲ್ಲಿ ಚುನಾವಣೆ ಘೋಷಿಸಿ, ವಿರೋಧಪಕ್ಷಗಳನ್ನು ಅಚ್ಚರಿಯಲ್ಲಿ ಕೆಡವಿ ಜಯಗಳಿಸುವ ತಂತ್ರವನ್ನು ಪ್ರಯೋಗಿಸುವುದಾಗಿ ಹೇಳಿದ್ದರು. ಅವರ ಮಾತಿನ ಪ್ರಕಾರ 2018 ರ ಎಪ್ರಿಲ್-ಮೇ ವೇಳೆಗೆ ಈ ದೇಶ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುತ್ತದೆ.
ರಾಜಕೀಯ ತಜ್ಞೆ ಅಮೂಲ್ಯ ಗಂಗೂಲಿ ಕೂಡ 2017 ಆಗಸ್ಟ್ ನಲ್ಲಿ ಈ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಕಳೆದ ಮೂರೂವರೆ ವರ್ಷಗಳಲ್ಲಿ ಮಾಡಿರುವ ಕೆಲಸಗಳ ಆದಾರದ ಮೇಲೆ ಚುನಾವಣೆ ಎದುರಿಸುವುದು ಬಿಜೆಪಿಗೆ ಹೆಚ್ಚು ಲಾಭದಾಯಕ. ಏಕೆಂದರೆ ಇನ್ನೂ ಒಂದೂವರೆ ವರ್ಷ ಕಾದರೆ, ನಿರುದ್ಯೋಗ ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದರಲ್ಲಿ ವಿಫಲವಾಗಿರುವ ಬಿಜೆಪಿಗೆ ಅದು ನಷ್ಟವನ್ನು ತಂದೊಡ್ಡುವುದು ನಿಚ್ಚಳ” ಎಂದು ಹೇಳಿದ್ದರು.
ಒಟ್ಟಿನಲ್ಲಿ ದೇಶದಾದ್ಯಂತ ಈಗ ಎದ್ದಿರುವ ಆಡಳಿತ ವಿರೋಧಿ ಅಲೆಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವುದನ್ನು ಮನಗಂಡಿರುವ ಮೋದಿ-ಶಾ ಜೋಡಿ, ಹೇಗಾದರೂ ಮಾಡಿ ಮುಂದಿನ ಚುನಾವಣೆಯನ್ನು ಜಯಿಸುವ ಯೋಜನೆಯೊಂದಿಗೆ ಈ ರೀತಿಯ ಕುಟಿಲ ತಂತ್ರಗಳ ಮೊರೆ ಹೋಗುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಏಕೆಂದರೆ ಕಾಲ ಸವೆದಷ್ಟು ವಿರೋಧಗಳು ಹೆಚ್ಚಾಗಿ ಅದು ತಮಗೆ ಸಿಗುವ ಮತಗಳ ಮೇಲೆ ಪ್ರಭಾವ ಬೀರುವುದನ್ನು ಈ ಇಬ್ಬರೂ ಬಯಸುವುದಿಲ್ಲ. ಚುನಾವಣೆ ಎಂಬುವುದು ತನಗೊಂದು ‘ವ್ಯಾಪಾರ’ ಇದ್ದ ಹಾಗೆ ಎಂದು ಹೇಳಿರುವ ಅಮಿತ್ ಶಾಗೆ, ಅವಧಿಪೂರ್ವ ಚುನಾವಣೆಯ ಮೂಲಕ ಜನರ ಮೇಲೆ ಬೀಳುವ ತೆರಿಗೆ ಹೊರೆಯನ್ನು ಗಣನೆಗೆ ತೆಗೆದುಕೊಳ್ಳುವ ಸಂಭವವಿಲ್ಲ. ಏಕೆಂದರೆ ಅವರಿಗೆ ತನ್ನ ‘ವ್ಯಾಪಾರ’ದಲ್ಲಾಗುವ ಲಾಭ ಮಾತ್ರ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
