ವರದಿಗಾರ (ಜ.23): ದಲಿತ ಹೋರಾಟಗಾರರನ್ನು ಮತ್ತು ಸಾರ್ವಜನಿಕರನ್ನು ‘ನಾಯಿಗಳು ಕೂಗಿದ್ರೆ ತಲೆ ಕಡೆಸಿಕೊಳ್ಳುವುದಿಲ್ಲ’ ಎಂದು ನಾಯಿಗಳಿಗೆ ಹೋಲಿಸಿದ ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕೆಂದು ಊನಾ ಚಳುವಳಿಯ ನೇತಾರ, ಗುಜರಾತ್ ವಾಡ್ಗಾಂವ್ ಶಾಸಕ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸಿದ್ದಾರೆ.
ಇದು ಸಂಘಪರಿವಾರದ ಹಾಗೂ ಕಾರ್ಯಕರ್ತರ ಬ್ರಾಹ್ಮಣ್ಯದ ಮತ್ತು ನೀಚ ಮನಸ್ಥಿಯನ್ನು ಎತ್ತಿ ತೋರಿಸುತ್ತದೆ ಎಂದು ಮೇವಾನಿ ಪ್ರತಿಕ್ರಿಯಿಸಿದ್ದಾರೆ. ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಜಿಗ್ನೇಶ್ ಮೇವಾನಿ ಆಗ್ರಹಿಸಿದ್ದಾರೆ.
‘ಸಂವಿಧಾನ ಬದಲಾಯಿಸಲು ನಾವು ಬಂದಿರುವುದು’ ಮತ್ತು ಜಾತ್ಯಾತೀತರನ್ನು ಹೀಯಾಲಿಸಿ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಬಳ್ಳಾರಿಯಲ್ಲಿ ದಲಿತ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಗಡೆ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಬಳಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ ತನ್ನ ವಿರುದ್ಧ ಪ್ರತಿಭಟಿಸಿದವರನ್ನು ನಾಯಿಗಳಿಗೆ ಹೋಲಿಕೆ ಮಾಡಿ ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದ್ದರು.
