ವರದಿಗಾರ (21-01-2018): ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ನಡೆದ ಮರ್ಯಾದಾ ಹತ್ಯೆಯ ವಿಚಾರಣೆ ನಡೆಸುತ್ತಿದ್ದ ನಾಶಿಕ್ ನ್ಯಾಯಾಲಯವು ಆರು ಮಂದಿಗೆ ಮರಣ ದಂಡನೆಯನ್ನು ವಿಧಿಸಿದೆ.
ಹತ್ಯೆಗೀಡಾದವರಲ್ಲಿ ಸಚಿನ್ ಘಾರು ಎಂಬ 22 ವರ್ಷ ಪ್ರಾಯದ ದಲಿತ ಯುವಕ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾದ ಮರಾಠಾ ಪೋಪಟ್ ದರಂಧಾಲೆಯ 19 ವರ್ಷ ಪ್ರಾಯದ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನರಿತ ಪೋಪಟ್ ದರಂಧಾಲೆ, ಸಚಿನ್ ಹಾಗೂ ಇನ್ನೆರಡು ದಲಿತ ಯುವಕರನ್ನು ಸಂಚು ಪೂರ್ವಕವಾಗಿ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸಲೆಂದು ಹೇಳಿ ತನ್ನ ಮನೆಗೆ ಕರೆಸಿದ್ದನು. ಅಲ್ಲಿ ತನ್ನ ಇತರ ಸಂಬಂಧಿಕರೊಂದಿಗೆ ಸೇರಿ ಈ ಮೂವರು ದಲಿತ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದನು.
ಹತ್ಯೆಗೀಡಾಗಿದ್ದವರ ಛಿಧ್ರಗೊಂಡಿದ್ದ ಮೃತದೇಹಗಳು 2013 ರ ಜನವರಿ 1ರಂದು ದರಂಧಾಲೆಯ ಮನೆಯ ಹಿಂಬಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್ ನಲ್ಲಿ ಪತ್ತೆಯಾಗಿದ್ದವು.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ವಿ.ವಿ.ವೈಷ್ಣವ್ ಆರು ಮಂದಿ ಆರೋಪಿಗಳಿಗೆ ಜನವರಿ 20ರಂದು ಮರಣ ದಂಡನೆ ಹಾಗೂ ತಲಾ 20000 ರೂಪಾಯಿಗಳ ದಂಡವನ್ನು ವಿಧಿಸಿದರು. ಪೋಪಟ್ ದರಂಧಾಲೆ, ಆತನ 23 ವರ್ಷದ ಮಗ ಗಣೇಶ್ ದರಂಧಾಲೆ ಹಾಗೂ ಆತನ ಸಂಬಂಧಿಕರಾದ ರಮೇಶ್ ದರಂಧಾಲೆ, ಪ್ರಕಾಶ್ ದರಂಧಾಲೆ ಮತ್ತು ಸಂದೀಪ್ ಕುರ್ಹೆ ಮರಣದಂಡನೆ ವಿಧಿಸಲ್ಪಟ್ಟ ದೋಷಿಗಳಾಗಿದ್ದಾರೆ. ಯುವತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಅಶೋಕ್ ನವ್ಗಿರೆಗೆ ಹತ್ಯೆ ನಡೆಸಲು ಪ್ರಚೋದನೆ ಹಾಗೂ ಸಹಾಯ ನೀಡಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿದೆ.. ನವ್ಗಿರೆ ದಲಿತನಾಗಿದ್ದು ಉಳಿದ ದೋಷಿಗಳೆಲ್ಲರೂ ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಆರಂಭದಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಲು ವಿಳಂಬಿಸಿದ್ದರು ಹಾಗೂ ದಲಿತ ಸಮುದಾಯದವರ ತೀವ್ರ ಪ್ರತಿಭಟನೆಯ ಒತ್ತಡದಿಂದ ಮೂರು ದಿನಗಳ ಬಳಿಕ ಎಫ್ ಐ ಆರ್ ದಾಖಲಿಸಲಾಗಿತ್ತು. ಇದಾಗ್ಯೂ ಸ್ಥಳೀಯ ಪೊಲೀಸರು ಹಾಗೂ ರಾಜಕಾರಣಿಗಳು ಆರೋಪಿಗಳ ಪರವಾಗಿದ್ದರು ಎಂದು ಹತ್ಯೆಗೀಡಾಗಿದ್ದವರ ಕುಟುಂಬಿಕರು ಆರೋಪಿಸಿದ್ದಾರೆ. ಭಯದಿಂದ ದಲಿತ ಯುವಕರ ಮನೆಯವರು ಔರಂಗಾಬಾದ್ ಗೆ ಪಲಾಯನ ಮಾಡಿದ್ದರು.
