ವರದಿಗಾರ (ಜ.20): ಆರೆಸ್ಸೆಸ್ ಭಯದ ವಾತಾವರಣ ಸೃಷ್ಟಿಸಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪ ಮಾಡಿದ್ದಾರೆ.
ಅವರು ಬೆಂಗಳೂರಿನ ಕನ್ನಡ ಭವನದಲ್ಲಿ ಸಿರಿವರ ಪ್ರಕಾಶನ ವತಿಯಿಂದ ಬಿರುದಲೈ ರಾಜೇಂದ್ರನ್ ಅವರ ತಮಿಳು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ‘ಸಂಚುಗಾರ ಸಂಘಪರಿವಾರ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಆರೆಸ್ಸೆಸ್ ಇದುವರೆಗೆ ನೋಂದಣಿಯೇ ಆಗಿಲ್ಲ. ಪ್ರತೀ ವಿಜಯದಶಮಿ ಸಂದರ್ಭದಲ್ಲಿ ಬರುವ ಗುರುದಕ್ಷಿಣೆಯ ಲೆಕ್ಕಚಾರವನ್ನೂ ಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
ಆರೆಸ್ಸೆಸ್ ಎಂದರೆ ‘ರೂಮರ್ಸ್ ಸ್ಪೆಡ್ರಿಂಗ್ ಸೊಸೈಟಿ’ ವದಂತಿ ಹರಡುವುದೇ ಅವರ ಕೆಲಸ. ಆರೆಸ್ಸೆಸ್ ಗೆ ಸೇರಿದ ಮೇಲೆ ಖಾಕಿ ಚಡ್ಡಿ, ಕಪ್ಪು ಟೋಪಿ ಧರಿಸಬೇಕು. ಇದು ಧರ್ಮಗ್ರಂಥದಲ್ಲಿದೆಯಾ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಆರೆಸ್ಸೆಸ್ ಗೆ ಸವಾಲು ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ದಲಿತರು ಮತ್ತು ಶೂದ್ರರಿಗೆ ಈಗಲೂ ಅಲ್ಲಿ ದೇವಾಲಯ ಪ್ರವೇಶವಿಲ್ಲ. ಶೂದ್ರ ನಾಯಕರಿಗೆ ಕುಂಕುಮ ಹಚ್ಚಿ ಬಲಿಪಶು ಮಾಡಲಾಗುತ್ತಿದೆ ಎಂಬ ಗಂಭೀರವಾದ ಆರೋಪವನ್ನು ಇದೇ ಸಂದರ್ಭದಲ್ಲಿ ಮಾಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದವರು ಭಜರಂಗದಳದವರು. ಸ್ಪ್ರಿಂಗ್ ಬ್ಲೇಡ್ ಎಂಬ ಆಯುಧ ಬಳಸಿ ಹತ್ಯೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದಿರುವ ಹಿಂದೂ ಯುವಕರ ಹತ್ಯೆಗಳ ಪೈಕಿ 13 ಹತ್ಯೆಗಳು ಸಂಘ ಪರಿವಾರದಿಂದಲೇ ನಡೆದಿದೆ ಎಂದು ಹೇಳಿದ್ದಾರೆ.
ನೀವು ಯಾವುದೇ ಪಕ್ಷವನ್ನು ಬೇಕಾದರೂ ಅಧಿಕಾರಕ್ಕೆ ತನ್ನಿ. ಆದರೆ ಸಂಘ ಪರಿವಾರವನ್ನು ಮಾತ್ರ ಅಧಿಕಾರಕ್ಕೆ ತರಲು ಬಿಡಬೇಡಿ ಎಂದು ಕರೆ ನೀಡಿದ್ದಾರೆ.
ಕೇಂದ್ರ ಸಚಿವರ ಕಚೇರಿಗಳಲ್ಲಿ ನಾಗ್ಪುರದ ಒಬ್ಬೊಬ್ಬರನ್ನು ಅಡ್ಮಿಷನ್ ಚೀಫ್ ಸೆಕ್ರೆಟರಿ ಮಾಡಿ ಕೂರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿಯವರಿಗೆ ಪ್ರಧಾನಿಯಾಗಿ ಯಾವುದೇ ಅಧಿಕಾರ ನಡೆಸಲು ಅವಕಾಶವಿಲ್ಲ ಎಂದರು.
ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡುತ್ತಾ, ಇತ್ತೀಚೆಗೆ ವೈಷಮ್ಯ ಹರಡುವುದು ಮತ್ತು ಮೌಢ್ಯವನ್ನು ಬಿತ್ತುವುದು ಹೆಚ್ಚಾಗುತ್ತಿದೆ. ಇದು ಕೇವಲ ಪುಸ್ತಕ ಬಿಡುಗಡೆ ಸಮಾರಂಭ ಮಾತ್ರವಲ್ಲ, ನಾವು ಯಾವ ಹಂತಕ್ಕೆ, ವ್ಯವಸ್ಥೆಗೆ ತಲುಪಿದ್ದೇವೆ ಎಂಬುವುದನ್ನು ತಿಳಿಯುವ ಸಂದರ್ಭವಾಗಿದೆ ಎಂದು ಹೇಳಿದರು.
ನಾವೆಲ್ಲರೂ ಹಿಂದೂಗಳು. ಹಿಂದುತ್ವವಾದಿಗಳು ನಾವಲ್ಲ. ನಾವು ಹಿಂದೂಗಳು ಎಂದು ಸಾಬೀತುಪಡಿಸಿಕೊಳ್ಳಲು ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ. ನಮ್ಮನ್ನು ಮೌಢ್ಯರನ್ನಾಗಿ ಮಾಡಲು ವೈದಿಕರು ದೇವಾಲಯಗಳನ್ನು ಸೃಷ್ಟಿಸಿದ್ದಾರೆ. ದೇವಾಲಯಗಳನ್ನು ವಿಸ್ತರಿಸುವುದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಪ್ರೊ. ಮರುಳಸಿದ್ಧಪ್ಪ, ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ ಕಲೈಸೆಲ್ವಿ, ಅಗಸ್ತ್ಯ, ಬಿರುದಲೈ ರಾಜೇಂದ್ರನ್, ರವೀಂದ್ರನಾಥನ್ ಸಿರಿವರ ಮತ್ತಿತರರು ಉಪಸ್ಥಿತರಿದ್ದರು.
