ವರದಿಗಾರ (ಜ.16): ಶಿರಸಿಯ ರಾಘವೇಂದ್ರ ಮಠದಲ್ಲಿ ‘ಪ್ರೀತಿ ಪದಗಳ ಪಯಣ’ ಆಯೋಜನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮ’ ರಾಜ್ಯ ಸಮಾವೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಯವರು ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಶುದ್ಧಗೊಳಿಸಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ, ಅನಂತ್ ಕುಮಾರ್ ಹೆಗಡೆಗೆ ಸಂವಿಧಾನದ ಮೂಲ ಆಶಯವೇ ಗೊತ್ತಿಲ್ಲ. ಸಂವಿಧಾನ ಬದಲಿಸಲು ಇವರೇನು ದೊಣ್ಣೆ ನಾಯಕರೇ? ಇವರು ನಿಜವಾದ ಹಿಂದೂಗಳೇ? ‘ಇವರ ಬಣ್ಣ ಬೇರೆಯೇ ಇದೆ’ ಎಂದು ಅವರು ಹೇಳಿದ್ದರು.
‘ದೇಶದಲ್ಲಿ ಶವಗಳ ಮೇಲೆ ರಾಜಕೀಯ ಮಾಡುತ್ತಾ ಕೋಮುವಾದ ಹರಡುತ್ತಿರುವವರು ನಿಜವಾದ ಹಿಂದೂಗಳಲ್ಲ. ಅವರ ಬಣ್ಣವೂ ಕೇಸರಿಯಲ್ಲ. ಶೀಘ್ರದಲ್ಲಿ ಎಲ್ಲವೂ ಬಯಲಾಗಲಿದೆ’ ಎಂದು ಹೇಳಿದ್ದರು.
ಈ ಬಗ್ಗೆ ಬಿಜೆಪಿ ಯುವ ಮೋರ್ಚಾದ ನಗರದ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ ಮಾತನಾಡುತ್ತಾ, ‘ಹಿಂದೂ ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿಟ್ಟು ಆರಾಧಿಸುತ್ತಾರೆ. ಗೋಮಾಂಸ ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಭೇಟಿಯಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ್ ರೈ ಅವರನ್ನು ಸಮಾಜ ಕ್ಷಮಿಸದು. ಈ ಪ್ರಯುಕ್ತ ಕಾರ್ಯಕ್ರಮ ನಡೆದ ಧಾರ್ಮಿಕ ಕ್ಷೇತ್ರವನ್ನು ಶುದ್ಧಗೊಳಿಸಲಾಯಿತು’ ಎಂದಿದ್ದಾರೆ.
ಈ ಬಗ್ಗೆ ಟ್ಟಿಟ್ಟರಿನಲ್ಲಿ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, ನಾನು ಹೋದಲ್ಲೆಲ್ಲಾ ಬಿಜೆಪಿಗರು ಶುದ್ದಿ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
https://twitter.com/prakashraaj/status/953139520450396160
ಇದನ್ನೂ ಓದಿ:
ಶವಗಳ ಮೇಲೆ ರಾಜಕೀಯ ಮಾಡುತ್ತಾ ಕೋಮುವಾದ ಹರಡುತ್ತಿರುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್ ರೈ
ಸಂವಿಧಾನ ಬದಲಿಸಲು ಅನಂತ್ ಕುಮಾರ್ ಹೆಗಡೆಯೇನು ದೊಣ್ಣೆ ನಾಯಕರೇ?-ಪ್ರಕಾಶ್ ರೈ ಪ್ರಶ್ನೆ
