ವರದಿಗಾರ (16-01-2018): ಮಧ್ಯ ಪ್ರದೇಶದ ಕ್ಯಾಥೊಲಿಕ್ ಡಯೋಸೆಸನ್ ಶಾಲೆಗಳ ಸಂಘವು ತನ್ನ ವಿದ್ಯಾ ಸಂಸ್ಥೆಗಳಿಗೆ ಎಬಿವಿಪಿಯಿಂದ ರಕ್ಷಣೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದೆ. ಬಿಜೆಪಿಯ ವಿದ್ಯಾರ್ಥಿ ಅಂಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕೋಮು ಭಾವನೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಸಂಘವು ಆರೋಪಿಸಿದೆ.
ಎಬಿವಿಪಿಯು ಕೈಸ್ತರಿಂದ ನಡೆಸಲ್ಪಡುತ್ತಿರುವ ವಿದ್ಯಾ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ಕ್ಯಾಥೊಲಿಕ್ ಬಿಶಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ಕಾರ್ಯದರ್ಶಿ ಥಿಯೋಡರ್ ಮಸ್ಕರೆನ್ಹಾಸ್ ಹೇಳಿದರು. ಎಬಿವಿಪಿಯು ತನ್ನ ಸದಸ್ಯರಿಗೆ ವಿಧಿಶಾದಲ್ಲಿರುವ ಸೈಂಟ್ ಮೇರಿ ಕಾಲೇಜಿಗೆ ಬಲವಂತವಾಗಿ ಪ್ರವೇಶಿಸಿ ಆರತಿ ನಡೆಸುವಂತೆ ಸೂಚನೆ ನೀಡಿತ್ತು ಎಂದು ಅವರು ಆರೋಪಿಸಿದ್ದಾರೆ. ಜನವರಿ 4ರಂದು ನೂರಾರು ಎಬಿವಿಪಿ ಕಾರ್ಯಕರ್ತರು, ತಮಗೆ ಪ್ರವೇಶಿಸಲು ಅನುಮತಿ ಸಿಗದಿದ್ದಾಗ ಕಾಲೇಜಿನ ಹೊರಗಡೆ ಉದ್ರಿಕ್ತ ವಾತಾವರಣವನ್ನು ಸೃಷ್ಟಿಸಿದ್ದರು. ಕೆಲವರಂತೂ ಬಲವಂತವಾಗಿ ಪ್ರವೇಶಿಸಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದ್ದರು.
ಮಧ್ಯ ಪ್ರದೇಶವು ಬಿಜೆಪಿ ಆಡಳಿತದಲ್ಲಿರುವ ರಾಜ್ಯವಾಗಿದೆ.
