ವರದಿಗಾರ (ಜ.14): ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ವಿಭಿನ್ನ ರೀತಿಯ ಶೀರ್ಷಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಯಾವುದೇ ಸಂಘಟನೆಗೆಳ ನಿರ್ಬಂಧಕ್ಕೆ ಸರಕಾರ ಆಲೋಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವರು ಶಿವಮೊಗ್ಗದ ಹೊಸನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂಘಟನೆಗಳ ನಿಷೇಧವನ್ನು ಕೇಂದ್ರ ಸರಕಾರ ಮಾಡಬೇಕೇ ಹೊರತು ರಾಜ್ಯ ಸರಕಾರಕ್ಕೆ ಕೇವಲ ಶಿಫಾರಸು ಮಾಡುವ ಅಧಿಕಾರವಿದೆ ಎಂದು ಹೇಳಿದ್ದಾರೆ.
ಸಂಘಟನೆಗಳನ್ನು ನಿಷೇಧಿಸುವುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ. ಸದ್ಯಕ್ಕೆ ಯಾವುದೇ ಸಂಘಟನೆಗಳನ್ನು ನಿಷೇಧಿಸಲು ಶಿಫಾರಸು ಮಾಡುವ ವಿಚಾರ ರಾಜ್ಯ ಸರಕಾರದ ಮುಂದಿಲ್ಲ ಎಂದಿದ್ದಾರೆ.
ಕರಾವಳಿಯಲ್ಲಿ ಮಾತ್ರ ಕೋಮು ಸಾಮರಸ್ಯ ಹಾಳು ಮಾಡುವಂತಹ ಘಟನೆಗಳು, ಹತ್ಯೆಗಳು ನಡೆಯುತ್ತಿದೆ. ಇದು ಕೇವಲ ಒಂದು ಸಂಘಟನೆಯಿಂದ ನಡೆಯುತ್ತಿಲ್ಲ. ಆರೆಸ್ಸೆಸ್, ಎಸ್ಡಿಪಿಐ, ಶ್ರೀರಾಮಸೇನೆ, ಬಜರಂಗದಳ,ಪಿಎಫ್ಐ ಸಂಘಟನೆಗಳು ಗಲಾಟೆಯಲ್ಲಿ ಭಾಗಿಯಾಗಿದ್ದು, ನಿರ್ಬಂಧಿಸುವುದಾದರೆ ಎಲ್ಲಾ ಸಂಘಟನೆಗಳನ್ನು ನಿರ್ಬಂಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ .
